Lausanne Diamond League | ಮತ್ತೊಮ್ಮೆ ನೀರಜ್ ಚೋಪ್ರಾ–ರಮೇಶ್ ಪತಿರಗೆ ಮುಖಾಮುಖಿ

Update: 2026-08-20 22:29 IST

ನೀರಜ್ ಚೋಪ್ರಾ | Photo Credit : PTI

ಹೊಸದಿಲ್ಲಿ, ಆ. 20: ಶ್ರೀಲಂಕಾದ ಉದಯೋನ್ಮುಖ ಜಾವೆಲಿನ್ ತಾರೆ ರಮೇಶ್ ಪತಿರಗೆ ಮತ್ತು ಭಾರತದ ತಾರಾ ಆಟಗಾರ ನೀರಜ್ ಚೋಪ್ರಾ ಶುಕ್ರವಾರ ಲೌಸಾನ್ ಡೈಮಂಡ್ ಲೀಗ್ ನಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿದ್ದಾರೆ. ಈ ಕ್ರೀಡಾಕೂಟದ ವಿಜೇತರು ಬ್ರಸೆಲ್ಸ್ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ ಗ್ರ್ಯಾಂಡ್ ಫಿನಾಲೆಯಲ್ಲಿ ಸ್ಥಾನ ಪಡೆಯಲಿದ್ದಾರೆ.

ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪತಿರಗೆ ಚಿನ್ನ ಮತ್ತು ಚೋಪ್ರಾ ಬೆಳ್ಳಿ ಗೆದ್ದ ಮೂರು ವಾರಗಳ ನಂತರ ಇಬ್ಬರೂ ಮತ್ತೆ ಮುಖಾಮುಖಿಯಾಗುತ್ತಿದ್ದಾರೆ. 23 ವರ್ಷದ ಪತಿರಗೆ ಈ ಋತುವಿನಲ್ಲಿ ಅದ್ಭುತ ಫಾರ್ಮ್ನಲ್ಲಿದ್ದು, ಗ್ಲಾಸ್ಗೋದಲ್ಲಿ 89.75 ಮೀಟರ್ ಎಸೆತದೊಂದಿಗೆ ಚಿನ್ನ ಗೆದ್ದಿದ್ದಾರೆ ಹಾಗೂ ದೋಹಾ ಮತ್ತು ರೋಮ್ ಡೈಮಂಡ್ ಲೀಗ್ಗಳಲ್ಲೂ ಜಯಗಳಿಸಿದ್ದಾರೆ.

ಜೂನ್ ನಲ್ಲಿ ರೋಮ್ ನಲ್ಲಿ 92.62 ಮೀಟರ್ ದೂರ ಈಟಿ ಎಸೆಯುವ ಮೂಲಕ ಈ ಋತುವಿನಲ್ಲಿ ಅತಿ ಹೆಚ್ಚು ದೂರ ಎಸೆದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಜೊತೆಗೆ 90 ಮೀಟರ್ ಮೈಲಿಗಲ್ಲನ್ನು ದಾಟಿದ್ದಾರೆ.

ವಾಸ್ತವವಾಗಿ, ಈ ಋತುವಿನಲ್ಲಿ ಪತಿರಗೆ ತಾನು ಭಾಗವಹಿಸಿದ 8 ಸ್ಪರ್ಧೆಗಳಲ್ಲಿ 7 ರಲ್ಲಿ ಗೆಲುವು ಸಾಧಿಸಿದ್ದಾರೆ.

ಇನ್ನೊಂದೆಡೆ, ಕಳೆದ ವರ್ಷದ ಸೆಪ್ಟೆಂಬರ್ನಿಂದ ಕಾಡುತ್ತಿದ್ದ ಬೆನ್ನುನೋವಿನಿಂದ ಚೇತರಿಸಿಕೊಂಡಿರುವ ಚೋಪ್ರಾ ಮತ್ತೊಮ್ಮೆ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿದ್ದಾರೆ.

ಗಾಯದಿಂದ ಚೇತರಿಸಿಕೊಂಡ ಬಳಿಕ ಅವರು ಮೊದಲು ಸ್ಪರ್ಧಿಸಿದ್ದು ದೋಹಾ ಡೈಮಂಡ್ ಲೀಗ್ನಲ್ಲಿ. ಗ್ಲಾಸ್ಗೋದಲ್ಲಿ ಸಂಪೂರ್ಣ ದೈಹಿಕ ಕ್ಷಮತೆ ಹೊಂದಿರದಿದ್ದರೂ, ಅವರು ತಮ್ಮ ಈ ಋತುವಿನ ಅತ್ಯುತ್ತಮ ಎಸೆತ 85.83 ಮೀಟರ್ ದಾಖಲಿಸಿ ಬೆಳ್ಳಿ ಪದಕ ಗೆದ್ದುಕೊಂಡರು.

ಲೌಸಾನ್ ಡೈಮಂಡ್ ಲೀಗ್ನಿಂದ ಹಾಲಿ ವಿಶ್ವ ಚಾಂಪಿಯನ್ ಅರ್ಷದ್ ನದೀಮ್ ಮತ್ತು ಜರ್ಮನಿಯ ಯುರೋಪಿಯನ್ ಚಾಂಪಿಯನ್ ಜೂಲಿಯನ್ ವೆಬರ್ ಹಿಂದೆ ಸರಿದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News