×
Ad

ಭಾರತೀಯ ಪುರುಷರ ಜೂನಿಯರ್ ಹಾಕಿ ತಂಡದ ನೂತನ ಕೋಚ್ ಆಗಿ ಫ್ರೆಡರಿಕ್ ಸೋಯಝ್ ನೇಮಕ

Update: 2026-05-14 21:48 IST

ಫ್ರೆಡರಿಕ್ ಸೋಯಝ್ | Photo Credit : X

ಹೊಸದಿಲ್ಲಿ, ಮೇ 14: ಭಾರತೀಯ ಜೂನಿಯರ್ ಪುರುಷರ ಹಾಕಿ ತಂಡದ ಪ್ರಧಾನ ಕೋಚ್ ಆಗಿ ಫ್ರಾನ್ಸ್‌ನ ಅನುಭವಿ ಫ್ರೆಡರಿಕ್ ಸೋಯಝ್‌ರನ್ನು ಗುರುವಾರ ಅಧಿಕೃತವಾಗಿ ನೇಮಕ ಮಾಡಲಾಗಿದೆ. ಇದರೊಂದಿಗೆ, ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಪಿ.ಆರ್. ಶ್ರೀಜೇಶ್‌ರ ಸ್ಥಾನವನ್ನು ಸೋಯಝ್ ವಹಿಸಿಕೊಂಡಿದ್ದಾರೆ.

ಮಾಜಿ ಹಾಕಿ ತಾರೆ, ಗೋಲ್‌ಕೀಪರ್ ಶ್ರೀಜೇಶ್‌ರ 17 ತಿಂಗಳ ಅಧಿಕಾರಾವಧಿಯು ಮುಕ್ತಾಯಗೊಂಡ ಬಳಿಕ, ತಂಡಕ್ಕೆ ನೂತನ ಕೋಚ್‌ನ್ನು ಹಾಕಿ ಇಂಡಿಯಾ ನೇಮಿಸಿದೆ. ಕಳೆದ ವರ್ಷ ಚೆನ್ನೈ ಮತ್ತು ಮಧುರೈನಲ್ಲಿ ನಡೆದ ಎಫ್‌ಐಎಚ್ ಜೂನಿಯರ್ ವಿಶ್ವಕಪ್‌ನಲ್ಲಿ ಶ್ರೀಜೇಶ್ ಮಾರ್ಗದರ್ಶನದಲ್ಲಿ ಭಾರತ ಕಂಚಿನ ಪದಕ ಗೆದ್ದಿತ್ತು.

ತನ್ನ ಅವಧಿಯಲ್ಲಿ ನಡೆದಿರುವ ಐದು ಪಂದ್ಯಾವಳಿಗಳಲ್ಲಿ ಐದು ಪದಕಗಳನ್ನು ಗೆದ್ದಿದ್ದರೂ ತನ್ನನ್ನು ಈ ಜವಾಬ್ದಾರಿಯಿಂದ ಮುಕ್ತಗೊಳಿಸಿರುವುದಕ್ಕೆ ಶ್ರೀಜೇಶ್ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, 2036ರ ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯ ವಹಿಸುವ ಭಾರತದ ಮಹತ್ವಾಕಾಂಕ್ಷೆಗೆ ಅನುಗುಣವಾಗಿ, ದೀರ್ಘಕಾಲದ ಉನ್ನತ ಕಾರ್ಯಕ್ಷಮತೆಯ ವ್ಯವಸ್ಥೆಯನ್ನು ರೂಪಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹಾಕಿ ಇಂಡಿಯಾ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

ಸೋಯಝ್ ಯುರೋಪಿಯನ್ ಹಾಕಿಯಲ್ಲಿ ಮೂರು ದಶಕಗಳಿಗೂ ಹೆಚ್ಚು ಅನುಭವ ಹೊಂದಿದ್ದಾರೆ. ಫ್ರಾನ್ಸ್ ಪರ 15 ವರ್ಷಗಳ ಕಾಲ ಅಂತರ್‌ರಾಷ್ಟ್ರೀಯ ಆಟಗಾರನಾಗಿ 196 ಪಂದ್ಯಗಳನ್ನು ಆಡಿ 195 ಗೋಲುಗಳನ್ನು ಬಾರಿಸಿದ್ದಾರೆ.

ಅವರು ಫ್ರಾನ್ಸ್ ಮತ್ತು ಸ್ಪೇನ್ ರಾಷ್ಟ್ರೀಯ ತಂಡಗಳಿಗೆ ತರಬೇತಿ ನೀಡಿದ್ದಾರೆ. 2016ರ ರಿಯೋ, 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪೇನ್ ತಂಡಕ್ಕೆ ಮತ್ತು 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫ್ರಾನ್ಸ್ ತಂಡಕ್ಕೆ ತರಬೇತುದಾರನಾಗಿ ಕಾರ್ಯನಿರ್ವಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News