×
Ad

ಹಾಕಿ ಪುರುಷರ ಅಂಡರ್–18 ಏಶ್ಯಕಪ್ | ಜಪಾನ್‌ ಗೆ ಸೋಲುಣಿಸಿದ ಭಾರತಕ್ಕೆ ದಾಖಲೆಯ ಮೂರನೇ ಪ್ರಶಸ್ತಿ

Update: 2026-06-06 22:15 IST

Photo Credit: Asian Hockey Federation

ಚೆನ್ನೈ, ಜೂ. 6: ಪುರುಷರ ಹಾಕಿ ಅಂಡರ್–18 ಏಶ್ಯಕಪ್ ಟೂರ್ನಿಯ ಫೈನಲ್‌ನಲ್ಲಿ ಜಪಾನ್ ತಂಡವನ್ನು 4–1 ಗೋಲುಗಳ ಅಂತರದಿಂದ ಮಣಿಸಿರುವ ಭಾರತ ತಂಡ ದಾಖಲೆಯ ಮೂರನೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಜಪಾನ್‌ನ ಕಾಕಾಮಿಗಹರಾ ಹಾಕಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆಶೀಶ್ ಪುತ್ರಿ (2ನೇ, 28ನೇ, 34ನೇ ನಿಮಿಷ) ಹ್ಯಾಟ್ರಿಕ್ ಗೋಲು ಗಳಿಸಿದರೆ, ನಾಯಕ ಕೇತನ್ ಕುಶ್ವಾಹಾ (30ನೇ ನಿಮಿಷ) ಇನ್ನೊಂದು ಗೋಲು ಗಳಿಸಿ ಗೆಲುವಿಗೆ ನೆರವಾದರು. ಆತಿಥೇಯರ ಪರ ಗಾಕು ನುಮಾದ (52ನೇ ನಿಮಿಷ) ಏಕೈಕ ಗೋಲು ಗಳಿಸಿದರು.

ಹಾಕಿ ಇಂಡಿಯಾವು ಚಿನ್ನದ ಪದಕ ವಿಜೇತ ಭಾರತದ ಅಂಡರ್–18 ಹಾಕಿ ತಂಡದ ಪ್ರತಿ ಆಟಗಾರರಿಗೆ ತಲಾ 3 ಲಕ್ಷ ರೂಪಾಯಿ ಹಾಗೂ ಪ್ರತಿಯೊಬ್ಬ ಸಹಾಯಕ ಸಿಬ್ಬಂದಿಗೆ 1.5 ಲಕ್ಷ ರೂಪಾಯಿ ಬಹುಮಾನವನ್ನು ಪ್ರಕಟಿಸಿದೆ.

ಇದಕ್ಕೂ ಮೊದಲು ಭಾರತೀಯ ಮಹಿಳೆಯರ ಹಾಕಿ ತಂಡವು ದಕ್ಷಿಣ ಕೊರಿಯಾ ತಂಡವನ್ನು 3–0 ಗೋಲುಗಳ ಅಂತರದಿಂದ ಮಣಿಸುವುದರೊಂದಿಗೆ ಕಂಚಿನ ಪದಕ ಜಯಿಸಿತು.

ಭಾರತೀಯ ಅಂಡರ್–18 ಮಹಿಳೆಯರ ಹಾಕಿ ತಂಡದ ಪ್ರತಿ ಸದಸ್ಯರಿಗೆ ತಲಾ 1 ಲಕ್ಷ ರೂಪಾಯಿ ಹಾಗೂ ಸಹಾಯಕ ಸಿಬ್ಬಂದಿಗೆ ತಲಾ 50 ಸಾವಿರ ರೂಪಾಯಿ ಬಹುಮಾನವನ್ನು ಪ್ರಕಟಿಸಲಾಗಿದೆ.

ಆಶೀಶ್ ಪುತ್ರಿ ಫೈನಲ್‌ ನಲ್ಲಿ ನೀಡಿದ ಶ್ರೇಷ್ಠ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಲ್ಲದೆ, ಪಂದ್ಯಾವಳಿಯಲ್ಲಿ ಒಟ್ಟು 13 ಗೋಲುಗಳನ್ನು ಗಳಿಸಿ ಅಗ್ರ ಸ್ಕೋರರ್ ಆಗಿ ಹೊರಹೊಮ್ಮಿದರು.

ಭಾರತ ತಂಡವು ವೈಯಕ್ತಿಕ ಗೌರವಗಳಲ್ಲಿಯೂ ಪ್ರಾಬಲ್ಯ ಸಾಧಿಸಿದ್ದು, ಗೋಲ್‌ಕೀಪರ್ ಆಯುಷ್ ರಜಕ್ ಪಂದ್ಯಾವಳಿಯ ಶ್ರೇಷ್ಠ ಗೋಲ್‌ಕೀಪರ್ ಗೌರವಕ್ಕೆ ಪಾತ್ರರಾದರು.

ಮಹಿಳೆಯರ ಸ್ಪರ್ಧಾವಳಿಯಲ್ಲಿ ಭಾರತದ ನೌಶೀನ್ ನಾಝ್ 12 ಗೋಲುಗಳೊಂದಿಗೆ ಅಗ್ರ ಸ್ಕೋರರ್ ಎನಿಸಿಕೊಂಡರು. ಪುರುಷರ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಭಾರತ ತಂಡಗಳು ಸ್ಮರಣೀಯ ಪ್ರದರ್ಶನ ನೀಡಿದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News