ಉಚಿತ ಟಿಕೆಟ್: ಕಂಪ್ಯೂಟರ್ ಕೊಟ್ಟರೂ FIFA ಬಿಡ!
Photo Credit : AP
ಹೊಸದಿಲ್ಲಿ: ಮೇ 21 ರಂದು ವೆಬ್‌ಸೈಟ್‌ನಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಕೆಲವು ಫುಟ್ಬಾಲ್ ಅಭಿಮಾನಿಗಳಿಗೆ ಫಿಫಾ ವಿಶ್ವಕಪ್ ಟಿಕೆಟ್‌ಗಳು ಉಚಿತವಾಗಿ ಸಿಕ್ಕಿದ್ದವು. ಆದರೆ ಈಗ ಕ್ರೀಡೆಯ ಜಾಗತಿಕ ನಿಯಂತ್ರಣ ಮಂಡಳಿಯು (ಫಿಫಾ) ಆ ಟಿಕೆಟ್‌ಗಳಿಗೆ ಹಣ ಪಾವತಿಸಲು ಏಳು ದಿನಗಳ ಅಂತಿಮ ಗಡುವನ್ನು ನೀಡಿದೆ. ಒಂದು ವೇಳೆ ಹಣ ಪಾವತಿಸದಿದ್ದರೆ, ಆ ಟಿಕೆಟ್‌ಗಳನ್ನು ಹೊಸದಾಗಿ ಮಾರಾಟ ಮಾಡಲಾಗುವುದು ಎಂದು ಅದು ತಿಳಿಸಿದೆ.
ಹಣ ಪಾವತಿ ಸಮಯದಲ್ಲಿ ಸಂಭವಿಸಿದ ತಾಂತ್ರಿಕ ದೋಷದ ಕಾರಣದಿಂದಾಗಿ, ಹಣ ಪಾವತಿಸದೆಯೇ ಸುಮಾರು 60 ಮಂದಿಗೆ ಟಿಕೆಟ್‌ಗಳು ಸಿಕ್ಕಿದ್ದವು.
ಫಿಫಾ ಜೂನ್ 3ರಂದು ಸಂದೇಶವೊಂದನ್ನು ಕಳುಹಿಸಿ ಹಣ ಪಾವತಿಸುವಂತೆ ಟಿಕೆಟ್ ಖರೀದಿದಾರರಿಗೆ ಸೂಚಿಸಲಾಗಿದೆ ಎಂದು ಎಂದು ಫಿಫಾ ಮೀಡಿಯಾದ ಹೇಳಿಕೆಯೊಂದು ತಿಳಿಸಿದೆ.
‘‘ಈ ಅಭಿಮಾನಿಗಳು ಕಾಯ್ದಿರಿಸಿದ ಟಿಕೆಟ್‌ಗಳು ಹಾಗೇ ಇವೆ. ಸರಿಯಾದ ಮೊತ್ತವನ್ನು ಪಾವತಿಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಂಬಂಧಪಟ್ಟ ಅಭಿಮಾನಿಗಳಿಗೆ ವಿನಂತಿಸಲಾಗಿದೆ. ಈ ದೋಷಕ್ಕೆ ಮತ್ತು ಇದರಿಂದ ಉಂಟಾದ ಅನಾನುಕೂಲತೆಗೆ ಫಿಫಾ ವಿಷಾದಿಸುತ್ತದೆ’’ ಎಂದು ಅದು ಹೇಳಿದೆ.