×
Ad

ಶನಿವಾರದಿಂದ ಭಾರತ-ಅಫ್ಘಾನ್ ಏಕೈಕ ಟೆಸ್ಟ್

Update: 2026-06-05 21:12 IST

Photo Credit : PTI 

ಹೊಸ ಚಂಡೀಗಢ: ಹೊಸ ಚಂಡೀಗಢದ ಪಿಸಿಎ ಸ್ಟೇಡಿಯಂನಲ್ಲಿ ಶನಿವಾರದಿಂದ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಮುಂಬರುವ ಶ್ರೀಲಂಕಾ ಮತ್ತು ನ್ಯೂಝಿಲ್ಯಾಂಡ್ ಪ್ರವಾಸಗಳಿಗೆ ಸಜ್ಜಾಗಲು ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸ್ಪರ್ಧೆಯಲ್ಲಿ ಉಳಿಯಲು ಭಾರತಕ್ಕೆ ಈ ಪಂದ್ಯ ಅತ್ಯಂತ ಪ್ರಮುಖವಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸೋಲಿನ ಬಳಿಕ, ಭಾರತದ ಬ್ಯಾಟಿಂಗ್ ವಿಭಾಗ ತೀವ್ರ ಹಿನ್ನಡೆ ಅನುಭವಿಸಿದೆ. ಆ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ರವೀಂದ್ರ ಜಡೇಜಾ ಮಾತ್ರ ಅರ್ಧಶತಕ ಗಳಿಸಿದ್ದರು.

ಆದಾಗ್ಯೂ, ಭಾರತವು ಹಳೆಯ ಆಟಗಾರರನ್ನೇ ನೆಚ್ಚಿಕೊಂಡಿದೆ. ಒತ್ತಡದಲ್ಲಿರುವ ಹೊರತಾಗಿಯೂ ಸಾಯಿ ಸುದರ್ಶನ್ ನಂ.3 ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ಮುಖ್ಯ ಕೋಚ್ ಗೌತಮ್ ಗಂಭೀರ್ ತಿಳಿಸಿದ್ದಾರೆ. ಕೆ.ಎಲ್. ರಾಹುಲ್ ಅವರಿಗೆ ಉಪನಾಯಕತ್ವ ನೀಡಲಾಗಿದೆ. ಧ್ರುವ ಜುರೆಲ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದ್ದು, ನಿತೀಶ್ ಕುಮಾರ್ ರೆಡ್ಡಿ ಹೊರಗುಳಿಯಬಹುದು.

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಮುಹಮ್ಮದ್ ಸಿರಾಜ್ ಅಲಭ್ಯರಾದರೆ ಗುರ್ನೂರ್ ಬ್ರಾರ್ ಪದಾರ್ಪಣೆ ಮಾಡಬಹುದು.

ಇನ್ನೊಂದೆಡೆ, ಅಫ್ಘಾನಿಸ್ತಾನಕ್ಕೆ ಇದು ಮಹತ್ವದ ಪಂದ್ಯವಾಗಿದೆ. ಎಂಟು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಡಿದ್ದ ಆಟಗಾರರ ಪೈಕಿ ಹಷ್ಮತುಲ್ಲಾ ಶಾಹಿದಿ, ರಹಮತ್ ಶಾ ಮತ್ತು ಅಫ್ಸರ್ ಝಜಾಯ್ ಮಾತ್ರ ಈಗಿನ ತಂಡದಲ್ಲಿದ್ದಾರೆ. ರಹಮತ್ ಶಾ ಇನ್ನು 30 ರನ್ ಗಳಿಸಿದರೆ ಟೆಸ್ಟ್‌ನಲ್ಲಿ 1000 ರನ್ ಪೂರೈಸಿದ ಮೊದಲ ಅಫ್ಘಾನ್ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.

ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುವ ಅಜ್ಮತುಲ್ಲಾ ಉಮರ್‌ಝೈ ಅವರಿಗೆ ಇದು ತವರು ಮೈದಾನದಂತಿದೆ. ಅನುಭವಿ ಭಾರತ ತಂಡದ ಸವಾಲಿನ ಜೊತೆಗೆ ಚಂಡೀಗಢದ ತೀವ್ರ ಬಿಸಿಲನ್ನು ಎದುರಿಸುವುದು ಅಫ್ಘಾನಿಸ್ತಾನಕ್ಕೆ ದೊಡ್ಡ ಪರೀಕ್ಷೆಯಾಗಿದೆ.

ಅಫ್ಘಾನಿಸ್ತಾನದ ತಾರಾ ಸ್ಪಿನ್ನರ್ ರಶೀದ್ ಖಾನ್ ಮತ್ತು ಬ್ಯಾಟರ್ ಇಬ್ರಾಹಿಂ ಝದ್ರಾನ್ ಅವರಿಗೆ ಈ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ನೀಡಲಾಗಿದ್ದು, ಮುಂದಿನ ಏಕದಿನ ಸರಣಿಗೆ ಲಭ್ಯವಿರಲಿದ್ದಾರೆ. ಭಾರತ ತಂಡದಲ್ಲಿ ಜಸ್‌ಪ್ರೀತ್ ಬುಮ್ರಾ ಅವರಿಗೂ ವಿಶ್ರಾಂತಿ ನೀಡಲಾಗಿದೆ.

ತಂಡಗಳು

ಭಾರತ: ಶುಭಮನ್ ಗಿಲ್ (ನಾಯಕ), ಕೆ. ಎಲ್. ರಾಹುಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ರಿಶಭ್ ಪಂತ್ (ವಿಕೆಟ್ ಕೀಪರ್), ಧ್ರುವ ಜುರೆಲ್ (ವಿಕೆಟ್ ಕೀಪರ್), ದೇವದತ್ತ ಪಡಿಕ್ಕಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮುಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ಮಾನವ್ ಸುತಾರ್, ಗುರ್ನೂರ್ ಬ್ರಾರ್, ಹರ್ಷ ದುಬೆ.

ಅಫ್ಘಾನಿಸ್ತಾನ: ಹಶ್ಮತುಲ್ಲಾ ಶಾಹಿದಿ (ನಾಯಕ), ಅಫ್ಸರ್ ಜಝೈ(ವಿಕೆಟ್ ಕೀಪರ್), ಇಕ್ರಾಮ್ ಅಲಿಖಿಲ್ (ವಿಕೆಟ್ ಕೀಪರ್), ಅಬ್ದುಲ್ ಮಲಿಕ್, ಸಾದಿಕುಲ್ಲಾ ಅಟಲ್, ರಹಮತ್ ಶಾ, ರಹ್ಮಾನುಲ್ಲಾ ಗುರ್ಬಾಝ್, ರಹ್ಮಾನುಲ್ಲಾ ಜದ್ರಾನ್, ಅಝ್ಮತುಲ್ಲಾ ಉಮರ್‌ಝೈ, ಶರಾಫುದ್ದೀನ್ ಅಶ್ರಫ್, ನಂಗ್ಯಾಲ್ ಖರೋಟಿ, ಖೈಸ್ ಅಹ್ಮದ್, ಬಿಲಾಲ್ ಸಾಮಿ, ಜಿಯಾ ಶರೀಫಿ, ಸಲೀಂ ಸಫಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News