ರೋಮ್ ಡೈಮಂಡ್ ಲೀಗ್: ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ದಾಖಲೆ ಮುರಿದ ಲಂಕಾದ ರುಮೇಶ್ ಪತಿರಗೆ
ರುಮೇಶ್ ಪತಿರಗೆ | Photo Credit : X/Wanda Diamond League
ರೋಮ್: ಇಟಲಿಯ ರೋಮ್‌ನಲ್ಲಿ ನಡೆದ ವಾಂಡಾ ಡೈಮಂಡ್ ಲೀಗ್ ಜಾವೆಲಿನ್ ಎಸೆತ ಕ್ರೀಡಾಕೂಟದಲ್ಲಿ, ಶ್ರೀಲಂಕಾದ ರುಮೇಶ್ ಪತಿರಗೆ 92.62 ಮೀಟರ್ ದೂರ ಭರ್ಚಿ ಎಸೆದು ಇತಿಹಾಸ ನಿರ್ಮಿಸಿದ್ದಾರೆ. ಇದು 2024ರ ಒಲಿಂಪಿಕ್ಸ್ ಬಳಿಕ ಅತ್ಯುತ್ತಮ ಜಾಗತಿಕ ಪ್ರದರ್ಶನವಾಗಿದೆ.
ಇದರೊಂದಿಗೆ, ಅವರು ಭಾರತದ ನೀರಜ್ ಚೋಪ್ರಾ (90.23 ಮೀ) ಅವರ ದಾಖಲೆಯನ್ನು ಹಿಂದಿಕ್ಕಿ ಏಶ್ಯದಲ್ಲಿ ಎರಡನೇ ಅತ್ಯುತ್ತಮ ಜಾವೆಲಿನ್ ಎಸೆತಗಾರನಾಗಿ ಹೊರಹೊಮ್ಮಿದ್ದಾರೆ. ಮೊದಲ ಸ್ಥಾನದಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ (92.97 ಮೀ) ಇದ್ದಾರೆ.
ರೋಮ್ ಕ್ರೀಡಾಕೂಟದಲ್ಲಿ ಪತಿರಾಗೆ ತನ್ನ ಚೊಚ್ಚಲ ಡೈಮಂಡ್ ಲೀಗ್ ಪಶಸ್ತಿ ಗೆದ್ದರು. ಎರಡನೇ ಸ್ಥಾನವನ್ನು ಆ್ಯಂಡರ್ಸನ್ ಪೀಟರ್ಸ್ (83.91 ಮೀ) ಗಳಿಸಿದರೆ, ತೃತೀಯ ಸ್ಥಾನವನ್ನು ಕರ್ಟಿಸ್ ಥಾಂಪ್ಸನ್ (83.89 ಮೀ) ಪಡೆದರು.
90 ಮೀಟರ್ ಗಡಿ ದಾಟಿದ 4ನೇ ಏಶ್ಯನ್ ಮತ್ತು ವಿಶ್ವದ 28ನೇ ಅತ್ಲೀಟ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಅಲ್ಲದೆ, 20 ವರ್ಷಗಳ ಹಳೆಯ ಕೂಟ ದಾಖಲೆಯನ್ನು ಎರಡು ಮೀಟರ್‌ಗಳು ಹೆಚ್ಚಿನ ಅಂತರದಿಂದ ಮುರಿದರು.
ಇದೇ ಸ್ಪರ್ಧೆಯಲ್ಲಿ ಭಾರತದ ಸಚಿನ್ ಯಾದವ್ 79.18 ಮೀಟರ್ ಎಸೆದು 8ನೇ ಸ್ಥಾನ ಪಡೆದು ಅಭಿಮಾನಿಗಳನ್ನು ನಿರಾಶೆಗೊಳಿಸಿದರು. ಕಳೆದ ವರ್ಷ ಟೋಕಿಯೋ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 86.27 ಮೀಟರ್ ಎಸೆದು 4ನೇ ಸ್ಥಾನ ಪಡೆದಿದ್ದ 26 ವರ್ಷದ ಸಚಿನ್, ನೀರಜ್ ಚೋಪ್ರಾರನ್ನು ಹಿಂದಿಕ್ಕಿದ್ದರು. ನೀರಜ್ 84.03 ಮೀ ಎಸೆತದೊಂದಿಗೆ 8ನೇ ಸ್ಥಾನ ಪಡೆದಿದ್ದರು.