ಅಭಿಷೇಕ್, ಶ್ರೇಯಸ್ ಅರ್ಧಶತಕ : ಭಾರತ-ಇಂಗ್ಲೆಂಡ್ ಮೊದಲ ಟಿ-20 ಪಂದ್ಯ ಮಳೆಗಾಹುತಿ
ಅಭಿಷೇಕ್, ಶ್ರೇಯಸ್ | Photo Credit : PTI
ಚೆಸ್ಟರ್-ಲೀ-ಸ್ಟ್ರೀಟ್, ಜು.2: ಭಾರತ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವಿನ ಮೊದಲ ಟಿ-20 ಅಂತರ್‌ರಾಷ್ಟ್ರೀಯ ಪಂದ್ಯವು ಭಾರೀ ಮಳೆಯಿಂದಾಗಿ ರದ್ದಾಗಿದೆ.
ಗುರುವಾರ ಟಾಸ್ ಜಯಿಸಿದ ಭಾರತ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಅಭಿಷೇಕ್ ಶರ್ಮಾ(59 ರನ್, 24 ಎಸೆತ, 6 ಬೌಂಡರಿ, 4 ಸಿಕ್ಸರ್)ಹಾಗೂ ನಾಯಕ ಶ್ರೇಯಸ್ ಅಯ್ಯರ್(68 ರನ್, 47 ಎಸೆತ, 6 ಬೌಂಡರಿ, 1 ಸಿಕ್ಸರ್)ಅರ್ಧಶತಕಗಳ ಕೊಡುಗೆಯ ನೆರವಿನಿಂದ ಭಾರತ ತಂಡವು ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್‌ಗಳ ನಷ್ಟಕ್ಕೆ 189 ರನ್ ಗಳಿಸಿತು. ಇಂಗ್ಲೆಂಡ್ ತಂಡದ ಪರವಾಗಿ ಸಾಕಿಬ್ ಮಹ್ಮೂದ್(3-33)ಯಶಸ್ವಿ ಪ್ರದರ್ಶನ ನೀಡಿದರು.
ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಬೌಲಿಂಗ್ ಮಾಡಿದ ಮಹ್ಮೂದ್ ಅವರು ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ (1 ರನ್) ವಿಕೆಟನ್ನು ಬೇಗನೆ ಉರುಳಿಸಿದರು. ಸ್ಯಾಮ್ಸನ್ ಕಳೆದ ಮೂರು ಪಂದ್ಯಗಳಲ್ಲಿ 5,0,1 ರನ್ ಗಳಿಸಿ ಕಳಪೆ ಪ್ರದರ್ಶನ ಮುಂದುವರಿಸಿದರು. ಸ್ಯಾಮ್ಸನ್ ಅವರು ಟಾಮ್ ಬಾಂಟನ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಇಶಾನ್ ಕಿಶನ್ (0)ಸತತ ಎರಡನೇ ಇನಿಂಗ್ಸ್‌ನಲ್ಲಿ ರನೌಟಾದಾಗ ಭಾರತ 6 ರನ್‌ಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು.
ಅಭಿಷೇಕ್ ಶರ್ಮಾ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 8.2 ಓವರ್‌ಗಳಲ್ಲಿ ಅಭಿಷೇಕ್ ಔಟಾದಾಗ ಭಾರತ ತಂಡವು 88 ರನ್‌ಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಸ್ಯಾಮ್ ಕರ‌್ರನ್ 25ರ ವಯಸ್ಸಿನ ಅಭಿಷೇಕ್‌ರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದರು.
ಅಭಿಷೇಕ್‌ರೊಂದಿಗೆ ಮೂರನೇ ವಿಕೆಟ್‌ಗೆ 38 ಎಸೆತಗಳಲ್ಲಿ 82 ರನ್ ಸೇರಿಸಿದ ಶ್ರೇಯಸ್ ಅಯ್ಯರ್ ಭಾರತ ತಂಡದ ಇನಿಂಗ್ಸ್ ಆಧರಿಸಿದರು. ಆಲ್‌ರೌಂಡರ್ ಶಿವಂ ದುಬೆ 21 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್‌ಗಳ ಸಹಿತ ಔಟಾಗದೆ 42 ರನ್ ಗಳಿಸಿ ಭಾರತ ತಂಡವು 7 ವಿಕೆಟ್‌ಗಳ ನಷ್ಟಕ್ಕೆ 189 ರನ್ ಗಳಿಸುವಲ್ಲಿ ನೆರವಾದರು.
ಭಾರತದ ಇನಿಂಗ್ಸ್ ಮುಗಿದ ನಂತರ ನಿರಂತರ ಮಳೆ ಸುರಿದ ಕಾರಣ ಇಂಗ್ಲೆಂಡ್‌ಗೆ ರನ್ ಚೇಸ್ ಮಾಡುವ ಅವಕಾಶ ಲಭಿಸಲಿಲ್ಲ. ಹೀಗಾಗಿ ಪಂದ್ಯವನ್ನು ರದ್ದುಪಡಿಸಲಾಯಿತು. ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ ಎರಡನೇ ಟಿ-20 ಪಂದ್ಯಕ್ಕಿಂತ ಮೊದಲು ಅಯ್ಯರ್ ಅವರ ಐತಿಹಾಸಿಕ ಇನಿಂಗ್ಸ್ ಭಾರತಕ್ಕೆ ಹೊಸ ಹುಮ್ಮಸ್ಸು ತಂದಿದೆ.
ಫಾರ್ಮ್‌ಗೆ ಮರಳಿರುವ ಶ್ರೇಯಸ್ ಅವರು ತನ್ನ ಸಾಧನೆಗಳ ಪಟ್ಟಿಗೆ ಮತ್ತೊಂದು ಮೈಲಿಗಲ್ಲು ಸೇರಿಸಿದರು.
ಇಂಗ್ಲೆಂಡ್ ಮಣ್ಣಿನಲ್ಲಿ ಅರ್ಧಶತಕ ಗಳಿಸಿದ ಮೊದಲ ನಾಯಕ ಶ್ರೇಯಸ್
ಭಾರತ ಕ್ರಿಕೆಟ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರು ಇಂಗ್ಲೆಂಡ್ ವಿರುದ್ಧದ ಮಳೆಬಾಧಿತ ಮೊದಲ ಟಿ-20 ಪಂದ್ಯದಲ್ಲಿ ದಾಖಲೆಯ ಪುಸ್ತಕದಲ್ಲಿ ತನ್ನ ಹೆಸರು ಸೇರಿಸಿದರು. ಇಂಗ್ಲೆಂಡ್ ಮಣ್ಣಿನಲ್ಲಿ ಟಿ-20 ಕ್ರಿಕೆಟ್‌ನಲ್ಲಿ ಅರ್ಧಶತಕ ಗಳಿಸಿದ ಭಾರತದ ಮೊದಲ ನಾಯಕನೆಂಬ ಕೀರ್ತಿಗೆ ಭಾಜನರಾದರು.
ಅಯ್ಯರ್ 48 ಎಸೆತಗಳಲ್ಲಿ 68 ರನ್ ಗಳಿಸಿದರು. ಭಾರತದ ನಾಯಕನಾಗಿ ಇಂಗ್ಲೆಂಡ್‌ನಲ್ಲಿ ತನ್ನ ಮೊದಲ ಟಿ-20 ಅರ್ಧಶತಕ ಗಳಿಸಿದರು. ಇಂಗ್ಲೆಂಡ್‌ನಲ್ಲಿ ಪುರುಷರ ಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಭಾರತೀಯ ನಾಯಕನಾಗಿದ್ದಾರೆ. ಇದರೊಂದಿಗೆ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದರು. ಕೊಹ್ಲಿ 2018ರಲ್ಲಿ ಕಾರ್ಡಿಫ್‌ನಲ್ಲಿ ಇಂಗ್ಲೆಂಡ್ ಎದುರು ಔಟಾಗದೆ 47ರನ್ ಗಳಿಸಿದ್ದರು. ಭಾರತದ ನಾಯಕನಾಗಿ ಗರಿಷ್ಠ ಸ್ಕೋರ್ ಗಳಿಸಿದ್ದರು.
ಐರ್‌ಲ್ಯಾಂಡ್ ತಂಡದ ವಿರುದ್ಧ 0-2 ಅಂತರದಿಂದ ಟಿ-20 ಸರಣಿಯನ್ನು ಸೋತು ಇಂಗ್ಲೆಂಡ್‌ಗೆ ಆಗಮಿಸಿರುವ ಭಾರತ ತಂಡವು ಮೊದಲ ಟಿ-20 ಪಂದ್ಯದ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿತು. 6 ರನ್ ಗಳಿಸುವಷ್ಟರಲ್ಲಿ ಎರಡು ಓವರ್‌ನೊಳಗೆ ಸ್ಯಾಮ್ಸನ್ ಹಾಗೂ ಕಿಶನ ವಿಕೆಟ್‌ಗಳನ್ನು ಕಳೆದುಕೊಂಡಿತು.
ಕೇವಲ 38 ಎಸೆತಗಳಲ್ಲಿ ಅರ್ಧಶತಕ ಪೂರೈಸಿರುವ ಅಯ್ಯರ್ ಆರಂಭದಲ್ಲಿ ತಾಳ್ಮೆಯ ಇನಿಂಗ್ಸ್ ಆಡಿದರು. ಆನಂತರ ಬೌಂಡರಿ ಹಾಗೂ ಸಿಕ್ಸರ್‌ಗಳನ್ನು ಸಿಡಿಸಿದರು.