ಕ್ರಿಸ್ಟಿಯಾನೊ ರೊನಾಲ್ಡೊ ನಿವೃತ್ತಿಯ ಸುಳಿವು ನೀಡಿದ ಸಹೋದರಿ; ರೊನಾಲ್ಡೊ ಪ್ರತಿಕ್ರಿಯೆ ಏನು?
Photo credit: X/@FIFAWorldCup
ಹೊಸದಿಲ್ಲಿ: ಫಿಫಾ ವಿಶ‍್ವಕಪ್ 2026 ನಂತರ, ತಾನು ಅಂತಾರಾಷ್ಟ್ರೀಯ ಮಟ್ಟದಿಂದ ನಿವೃತ್ತನಾಗಲಿದ್ದೇನೆ ಎಂಬ ತಮ್ಮ ಸಹೋದರಿ ಕಟಿಯಾ ಅವೈರೊರ ಹೇಳಿಕೆಯನ್ನು ಅಲ್ಲಗಳೆದಿರುವ ಪೋರ್ಚುಗಲ್ ಫುಟ್ ಬಾಲ್ ದಂತಕತೆ ಕ್ರಿಸ್ಟಿಯಾನೊ ರೊನಾಲ್ಡೊ, ಫಿಫಾ ವಿಶ್ವಕಪ್ ನಲ್ಲಿ ಪೋರ್ಚುಗಲ್ ಅಭಿಯಾನ ಮುಕ್ತಾಯಗೊಂಡ ಬಳಿಕವಷ್ಟೇ, ಈ ಕುರಿತು ನಿರ್ಧರಿಸಲಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರೀ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಪೋರ್ಚುಗಲ್ ತಂಡವು ಕ್ರೊವೇಷಿಯಾ ತಂಡವನ್ನು ಎದುರಿಸುವುದಕ್ಕೂ ಮುನ್ನ, ಪೋರ್ಚುಗೀಸ್ ಕ್ರೀಡಾ ವಾಹಿನಿಯೊಂದರೊಂದಿಗೆ ಮಾತನಾಡಿದ ಕಟಿಯಾ, “ಇದು ಕೊನೆಯಾಗುವುದಕ್ಕೂ ಮುನ್ನ, ಆನಂದಿಸಿ. ಇದು ಶೀಘ್ರ ಅಂತ್ಯಗೊಳ್ಳಲಿದೆ” ಎಂದು ತಮ್ಮ ಸಹೋದರ ಕ್ರಿಸ್ಟಿಯಾನೊ ರೊನಾಲ್ಡೊರ ನಿವೃತ್ತಿಯ ಸುಳಿವು ನೀಡಿದ್ದರು.
ಪ್ರೀ ಕ್ವಾರ್ಟರ್ ಫೈನಲ್ ನಲ್ಲಿ ಕ್ರೊವೇಷಿಯಾ ಎದುರಿನ ಪಂದ್ಯದ 68ನೇ ನಿಮಿಷದಲ್ಲಿ ಪೆನಾಲ್ಟಿ ಗೋಲು ಹೊಡೆಯುವ ಮೂಲಕ, ಪೋರ್ಚುಗಲ್ ತಂಡ ಕ್ವಾರ್ಟರ್ ಫೈನಲ್ ಹಂತಕ್ಕೆ ಮುನ್ನಡೆಯುವುದನ್ನು ಕ್ರಿಸ್ಟಿಯಾನೊ ರೊನಾಲ್ಡೊ ಖಾತರಿಪಡಿಸಿದರು. ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು ಮಾತನಾಡಿದ ರೊನಾಲ್ಡೊ, ಭವಿಷ್ಯದ ಕುರಿತು ನಾನಿನ್ನೂ ಚಿಂತಿಸಿಲ್ಲ ಎಂದು ಸ್ಪಷ್ಟಪಡಿಸಿದರು.
“ಅದೀಗ ಮುಖ್ಯವಲ್ಲ. ಈ ಟೂರ್ನಮೆಂಟ್ ನಲ್ಲಿ ಸೋಲು ಅಥವಾ ಗೆಲುವು ಸಾಧಿಸಿದ ಬಳಿಕ, ನನಗೆ ಆ ಕುರಿತು ಮಾತನಾಡಲು ಸಮಯವಿದೆ. ನಾನು ನನ್ನ ಕುಟುಂಬದೊಂದಿಗೆ ಸಮಾಲೋಚಿಸಿದ ಬಳಿಕ, ಆ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದೇನೆ” ಎಂದು ಅವರು ಹೇಳಿದರು.
“ನಾನು ತಕ್ಷಣದ ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ. ಇದೀಗ ಎಲ್ಲವನ್ನೂ ಶಾಂತ ರೀತಿಯಲ್ಲಿ ಮಾಡಲಾಗುವುದು. ಈ ಕ್ಷಣದಲ್ಲಿ ನಾನು ಪ್ರಸ್ತುತ ಸ್ಥಿತಿಯನ್ನು ಆನಂದಿಸುವುದು ಹಾಗೂ ರಾಷ್ಟ್ರೀಯ ತಂಡಕ್ಕೆ ನೆರವು ನೀಡುವುದು ಮಾತ್ರ ಮುಖ್ಯವಾಗುತ್ತದೆ” ಎಂದು 41 ವರ್ಷದ ಕ್ರಿಸ್ಟಿಯಾನೊ ರೊನಾಲ್ಡೊ ಹೇಳಿದರು.