ಶ್ರೇಯಸ್ ಅಯ್ಯರ್ | Photo Credit : BCCI 

ಲಕ್ನೋ: ನಾಯಕ ಶ್ರೇಯಸ್ ಅಯ್ಯರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ T20I ಸರಣಿಯ ಮೊದಲ ಪಂದ್ಯದಲ್ಲಿ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.

171 ರನ್ಗಳ ಗುರಿಯನ್ನು ಭಾರತ 14.4 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 172 ರನ್ ಗಳಿಸುವ ಮೂಲಕ ಬೆನ್ನತ್ತಿತು. 32 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತು. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಭಾರತ 1–0 ಮುನ್ನಡೆ ಸಾಧಿಸಿದೆ.

ಏಕನಾ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 19.1 ಓವರ್ ಗಳಲ್ಲಿ 171 ರನ್ ಗಳಿಸಿ ಆಲೌಟ್‌ ಆಗಿತ್ತು.

ಭಾರತದ ಚೇಸಿಂಗ್‌ ನಲ್ಲಿ ಶ್ರೇಯಸ್ ಅಯ್ಯರ್ ಅಬ್ಬರಿಸಿದರು. ಅವರು 43 ಎಸೆತಗಳಲ್ಲಿ 10 ಬೌಂಡರಿ ಮತ್ತು 6 ಸಿಕ್ಸರ್ ಗಳೊಂದಿಗೆ ಅಜೇಯ 102 ರನ್ ಗಳಿಸಿದರು. ಇಶಾನ್ ಕಿಶನ್ 27 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ ಅಜೇಯ 37 ರನ್ ಗಳಿಸಿದರು. ಅಭಿಷೇಕ್ ಶರ್ಮಾ 10 ಎಸೆತಗಳಲ್ಲಿ 3 ಬೌಂಡರಿ, ಒಂದು ಸಿಕ್ಸರ್ ಸಹಿತ 21 ರನ್ ಗಳಿಸಿದರು. ಸಂಜು ಸ್ಯಾಮ್ಸನ್ 9 ಎಸೆತಗಳಲ್ಲಿ 11 ರನ್ ಗಳಿಸಿದರು.

ಭಾರತದ ಮೊದಲ ವಿಕೆಟ್ 2.3 ಓವರ್ಗಳಲ್ಲಿ 29 ರನ್ ಗೆ ಬಿತ್ತು. ಅಭಿಷೇಕ್ ಶರ್ಮಾ, ಶಿಮ್ರಾನ್ ಹೆಟ್ಮೆಯರ್ ಅವರ ಕ್ಯಾಚ್ ಗೆ ಔಟ್‌ ಆದರು. ರೋಸ್ಟನ್ ಚೇಸ್ ಈ ವಿಕೆಟ್ ಪಡೆದರು. 3.3 ಓವರ್ಗಳಲ್ಲಿ ತಂಡದ ಮೊತ್ತ 35 ರನ್ ಆಗಿದ್ದಾಗ ಸಂಜು ಸ್ಯಾಮ್ಸನ್ ವಿಕೆಟ್ ಒಪ್ಪಿಸಿದರು. ಅಕೀಲ್ ಹೊಸೈನ್ ಬೌಲಿಂಗ್ ನಲ್ಲಿ ಅವರಿಗೇ ಕ್ಯಾಚ್ ನೀಡಿ ಸಂಜು ನಿರ್ಗಮಿಸಿದರು.

ಬಳಿಕ ಇಶಾನ್ ಕಿಶನ್ ಅವರೊಂದಿಗೆ ಇನಿಂಗ್ಸ್ ಕಟ್ಟಿದ ಅಯ್ಯರ್, ರನ್ ವೇಗವನ್ನು ಹೆಚ್ಚಿಸಿದರು.

ಅಯ್ಯರ್ ಅವರ ಚೊಚ್ಚಲ T20I ಶತಕ ಭಾರತದ ಗೆಲುವಿನ ಪ್ರಮುಖ ಆಕರ್ಷಣೆಯಾಯಿತು. 42 ಎಸೆತಗಳಲ್ಲೇ ಅವರು ಶತಕ ಪೂರೈಸಿದರು. ವೆಸ್ಟ್ ಇಂಡೀಸ್ ವಿರುದ್ಧದ T20I ಪಂದ್ಯವೊಂದರಲ್ಲಿ ಭಾರತೀಯ ಆಟಗಾರರ ಪೈಕಿ ಇದು ಅತ್ಯಂತ ವೇಗದ ಶತಕವಾಗಿದೆ.

14.3 ಓವರ್ ನಲ್ಲಿ ರೋಸ್ಟನ್ ಚೇಸ್ ಅವರ ಎಸೆತವನ್ನು ಅಯ್ಯರ್ ಸಿಕ್ಸರ್ ಗೆ ಅಟ್ಟುವ ಮೂಲಕ ಶತಕ ಪೂರೈಸಿದರು. ಅಯ್ಯರ್ ಹೆಲ್ಮೆಟ್ ತೆಗೆದು, ಎರಡೂ ಕೈಗಳನ್ನು ಮೇಲಕ್ಕೆತ್ತಿ ಸಂಭ್ರಮಿಸಿದರು. ಬಳಿಕ ಡಗ್ ಔಟ್ನತ್ತ ತಿರುಗಿದರು. ಭಾರತೀಯ ನಾಯಕನಿಗೆ ಇದು ವಿಶೇಷ ಕ್ಷಣವಾಗಿತ್ತು.

ಪಂದ್ಯದ ಆರಂಭದಿಂದಲೇ ಅಯ್ಯರ್ ಚೆಂಡನ್ನು ಬಾರಿಸಿದ ರೀತಿ ದೊಡ್ಡ ಇನಿಂಗ್ಸ್ ನ ಸುಳಿವು ನೀಡಿತ್ತು. ಇನಿಂಗ್ಸ್ ಮುಂದುವರಿದಂತೆ ಅವರು ಬ್ಯಾಟಿಂಗ್ ವೇಗವನ್ನು ಮತ್ತಷ್ಟು ಹೆಚ್ಚಿಸಿಕೊಂಡು ಪರಿಣಾಮಕಾರಿಯಾಗಿ ರನ್ ಗಳಿಸಿದರು.

►ರುಡರ್ಫೋರ್ಡ್, ಹೋಪ್ ಅರ್ಧಶತಕ

ವೆಸ್ಟ್ ಇಂಡೀಸ್ ಪರ ರುಡರ್ಫೋರ್ಡ್ 56 ಮತ್ತು ಹೋಪ್ 52 ರನ್ ಗಳಿಸಿದರು. ಇವರ ಅರ್ಧಶತಕಗಳ ನೆರವಿನಿಂದ ವೆಸ್ಟ್ ಇಂಡೀಸ್ 171 ರನ್ ಗಳಿಸಿತು.

ಭಾರತದ ಪರ ಪಾದಾರ್ಪಣೆ ಮಾಡಿದ ನಮನ್ ಧೀರ್ 3 ವಿಕೆಟ್ ಪಡೆದು 31 ರನ್ ನೀಡಿದರು. 3/31ರ ಪ್ರದರ್ಶನದ ಮೂಲಕ ಅವರು ಗಮನ ಸೆಳೆದರು. ಅಕ್ಷರ್ ಪಟೇಲ್ ಡಬಲ್-ವಿಕೆಟ್ ಮೇಡನ್ ಓವರ್ ಎಸೆದು ಮಿಂಚಿದರು. ಇಶಾನ್ ಕಿಶನ್ ಹಿಡಿದ ಅದ್ಭುತ ಕ್ಯಾಚ್ ಕೂಡ ಪಂದ್ಯದ ಗಮನ ಸೆಳೆದ ಕ್ಷಣಗಳಲ್ಲಿ ಒಂದಾಯಿತು.

ವೆಸ್ಟ್ ಇಂಡೀಸ್ ಬೌಲಿಂಗ್ ನಲ್ಲಿ ಮ್ಯಾಥ್ಯೂ ಫೋರ್ಡೆ 2 ಓವರ್ ಗಳಲ್ಲಿ 39 ರನ್ ನೀಡಿ ವಿಕೆಟ್ ಪಡೆಯಲಿಲ್ಲ. ಅಕೀಲ್ ಹೊಸೈನ್ 4 ಓವರ್ಗಳಲ್ಲಿ 37 ರನ್ ನೀಡಿ ಒಂದು ವಿಕೆಟ್ ಪಡೆದರು. ರೋಸ್ಟನ್ ಚೇಸ್ 3.4 ಓವರ್ ಗಳಲ್ಲಿ 37 ರನ್ ನೀಡಿ ಒಂದು ವಿಕೆಟ್ ಪಡೆದರು. ಶಮಾರ್ ಜೋಸೆಫ್ 2 ಓವರ್ಗಳಲ್ಲಿ 23, ರೊಮಾರಿಯೊ ಶೆಫರ್ಡ್ 2 ಓವರ್ ಗಳಲ್ಲಿ 24 ಮತ್ತು ಶಮಾರ್ ಸ್ಪ್ರಿಂಗರ್ ಒಂದು ಓವರ್ ನಲ್ಲಿ 12 ರನ್ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor