ಭಾರತದ ಕ್ರಿಕೆಟ್ ತಂಡಕ್ಕೆ ನಾಯಕಿಯಾಗಿ ಸ್ಮೃತಿ ಮಂಧನಾ ನೇಮಕ
T20Iಗೆ ಶಫಾಲಿ ವರ್ಮಾ; ODIಗೆ ದೀಪ್ತಿ ಶರ್ಮಾ ಉಪನಾಯಕಿಯರು
ಸ್ಮ್ರಿತಿ ಮಂಧಾನ | Photo Credit : PTI
ಹೊಸದಿಲ್ಲಿ: ಹರ್ಮನ್ಪ್ರೀತ್ ಕೌರ್ ನಾಯಕತ್ವದ ಹುದ್ದೆಯಿಂದ ಕೆಳಗಿಳಿದ ಕೆಲವೇ ಗಂಟೆಗಳ ಬಳಿಕ, ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನೂತನ ನಾಯಕಿಯಾಗಿ ಸ್ಮೃತಿ ಮಂಧನಾ ಅವರನ್ನು BCCI ಮಂಗಳವಾರ ನೇಮಕ ಮಾಡಿದೆ.
2013ರಿಂದ ಭಾರತ ತಂಡದ ಭಾಗವಾಗಿರುವ ಮಂಧನಾ, ಈ ಹಿಂದೆ 22 ವೈಟ್ ಬಾಲ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. 2024 ಮತ್ತು 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಮಹಿಳಾ ಪ್ರೀಮಿಯರ್ ಲೀಗ್ (WPL) ಪ್ರಶಸ್ತಿಗೆ ಮುನ್ನಡೆಸುವ ಮೂಲಕವೂ ನಾಯಕತ್ವದ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಮಂಧನಾ 18 T20I ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದು, 11ರಲ್ಲಿ ಗೆಲುವು, 6ರಲ್ಲಿ ಸೋಲು ಕಂಡಿದ್ದಾರೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ. ODIನಲ್ಲಿ ನಾಯಕಿಯಾಗಿ ಮುನ್ನಡೆಸಿದ ನಾಲ್ಕೂ ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದೆ. WPLನಲ್ಲಿ RCB ತಂಡವನ್ನು 35 ಪಂದ್ಯಗಳಲ್ಲಿ ಮುನ್ನಡೆಸಿರುವ ಅವರು 18 ಗೆಲುವು ಹಾಗೂ 17 ಸೋಲು ದಾಖಲಿಸಿದ್ದಾರೆ.
► ಹರ್ಮನ್ ಪ್ರೀತ್ ಗೆ ಮಂಧನಾ ಮೆಚ್ಚುಗೆ
ಹೊಸ ಜವಾಬ್ದಾರಿ ಕುರಿತು ಪ್ರತಿಕ್ರಿಯಿಸಿರುವ ಮಂಧನಾ, ನಾಯಕಿಯಾಗಿ ಹರ್ಮನ್ಪ್ರೀತ್ ಕೌರ್ ನೀಡಿದ ಕೊಡುಗೆಯನ್ನು ಸ್ಮರಿಸಿದ್ದಾರೆ.
‘ನಾಯಕಿಯಾಗಿ ಹರ್ಮನ್ ಪ್ರೀತ್ ಅವರು ವರ್ಷಗಳ ಕಾಲ ನೀಡಿದ ಕೊಡುಗೆಯನ್ನು ನಾನು ಉಲ್ಲೇಖಿಸಲು ಬಯಸುತ್ತೇನೆ. ಅವರು ಅಪಾರ ಬದ್ಧತೆಯಿಂದ ತಂಡವನ್ನು ಮುನ್ನಡೆಸಿದ್ದಾರೆ ಮತ್ತು ನಮ್ಮ ಪಯಣದ ಪ್ರಮುಖ ಭಾಗವಾಗಿದ್ದಾರೆ’ ಎಂದು ಅವರು ಹೇಳಿದ್ದಾರೆ.
‘ಭಾರತ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಪಡೆಯುವುದು ಅತ್ಯಂತ ವಿಶೇಷವಾದ ಗೌರವ. ಭಾರತವನ್ನು ಪ್ರತಿನಿಧಿಸುವುದು ನನಗೆ ಯಾವಾಗಲೂ ಬಹಳ ಮುಖ್ಯವಾದ ವಿಷಯವಾಗಿದೆ. ಈಗ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿರುವುದನ್ನು ನಾನು ಅತ್ಯಂತ ಗೌರವದಿಂದ ಪರಿಗಣಿಸುತ್ತೇನೆ. ಈ ಪಾತ್ರದೊಂದಿಗೆ ಬರುವ ಜವಾಬ್ದಾರಿಯನ್ನು ನಾನು ಅರಿತಿದ್ದೇನೆ. ತಂಡದೊಂದಿಗೆ ಕೆಲಸ ಮಾಡಲು, ಹೊಸ ವಿಷಯಗಳನ್ನು ಕಲಿಯಲು ಮತ್ತು ಭಾರತೀಯ ಕ್ರಿಕೆಟ್ ಅನ್ನು ಮುನ್ನಡೆಸಲು ನನ್ನ ಅತ್ಯುತ್ತಮ ಪ್ರಯತ್ನ ನೀಡಲು ಉತ್ಸುಕಳಾಗಿದ್ದೇನೆ’ ಎಂದು ಮಂಧನಾ ತಿಳಿಸಿದ್ದಾರೆ.
► ಜಿಂಬಾಬ್ವೆ ಸರಣಿಗೆ ತಂಡ
ಜಿಂಬಾಬ್ವೆ ವಿರುದ್ಧದ ಮುಂಬರುವ ಸರಣಿಗಾಗಿ ಭಾರತದ T20I ಮತ್ತು ODI ಎರಡೂ ತಂಡಗಳಲ್ಲಿ ಹರ್ಮನ್ ಪ್ರೀತ್ ಕೌರ್ ಸ್ಥಾನ ಉಳಿಸಿಕೊಂಡಿದ್ದಾರೆ. ಮೂರು ಪಂದ್ಯಗಳ T20I ಸರಣಿಗೆ ಶಫಾಲಿ ವರ್ಮಾ ಅವರನ್ನು ಉಪನಾಯಕಿಯಾಗಿ ನೇಮಕ ಮಾಡಲಾಗಿದೆ. ODI ಸರಣಿಯಲ್ಲಿ ದೀಪ್ತಿ ಶರ್ಮಾ ಉಪನಾಯಕಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಮಹಿಳಾ ಆಯ್ಕೆ ಸಮಿತಿಯು ಸರಣಿಗಾಗಿ ತಂಡದ ಪ್ರಮುಖ ಆಟಗಾರ್ತಿಯರನ್ನು ಒಳಗೊಂಡ ಬಲಿಷ್ಠ ತಂಡವನ್ನು ಉಳಿಸಿಕೊಂಡಿದೆ.
ಅಕ್ಟೋಬರ್ 16, 18 ಮತ್ತು 20ರಂದು ರಾಯ್ ಪುರದಲ್ಲಿ ಮೂರು T20I ಪಂದ್ಯಗಳು ನಡೆಯಲಿವೆ. ಬಳಿಕ ಅಕ್ಟೋಬರ್ 23, 25 ಮತ್ತು 28ರಂದು ವಡೋದರಾದಲ್ಲಿ ಮೂರು ODI ಪಂದ್ಯಗಳು ನಡೆಯಲಿವೆ.
► ಭಾರತದ T20I ತಂಡ
ಸ್ಮೃತಿ ಮಂಧನಾ (ನಾಯಕಿ), ಶಫಾಲಿ ವರ್ಮಾ (ಉಪನಾಯಕಿ), ನಿಕ್ಕಿ ಪ್ರಸಾದ್, ಹರ್ಮನ್ಪ್ರೀತ್ ಕೌರ್, ಅನುಷ್ಕಾ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಜಿ. ಕಮಲಿನಿ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಪ್ರೇಮಾ ರಾವತ್, ಶ್ರೀ ಚರಣಿ, ನಂದಿನಿ ಶರ್ಮಾ, ಕ್ರಾಂತಿ ಗೌಡ್, ಅರುಂಧತಿ ರೆಡ್ಡಿ, ಜಿಂತಿಮಣಿ ಕಲಿತಾ, ಮಿನ್ನು ಮಣಿ.
► ಭಾರತದ ODI ತಂಡ
ಸ್ಮೃತಿ ಮಂಧನಾ (ನಾಯಕಿ), ಶಫಾಲಿ ವರ್ಮಾ, ಪ್ರತಿಕಾ ರಾವಲ್, ಹರ್ಮನ್ಪ್ರೀತ್ ಕೌರ್, ಹರ್ಲೀನ್ ಡಿಯೋಲ್, ತೇಜಲ್ ಹಸಬ್ನಿಸ್, ದೀಪ್ತಿ ಶರ್ಮಾ (ಉಪನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಯಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ವೈಷ್ಣವಿ ಶರ್ಮಾ, ನಂದಿನಿ ಶರ್ಮಾ, ಶ್ರೀ ಚರಣಿ, ಕ್ರಾಂತಿ ಗೌಡ್, ಸಯಾಲಿ ಸತ್ಘರೆ, ರೇಣುಕಾ ಠಾಕೂರ್.