ನಾಳೆಯಿಂದ ಟ್ವೆಂಟಿ-20 ಸರಣಿ ಆರಂಭ | ಮೊದಲ ಪಂದ್ಯದಲ್ಲಿ ಭಾರತ-ವೆಸ್ಟ್‌ಇಂಡೀಸ್ ಹಣಾಹಣಿ
Photo Credit : PTI
ಲಕ್ನೊ: ಏಕದಿನ ಸರಣಿಯನ್ನು ಗೆದ್ದಿರುವ ಹುಮ್ಮಸ್ಸಿನಲ್ಲಿರುವ ಟೀಮ್ ಇಂಡಿಯಾವು ಮಂಗಳವಾರ ಲಕ್ನೊದಲ್ಲಿ ಆರಂಭವಾಗಲಿರುವ ಟಿ-20 ಅಂತರ್‌ರಾಷ್ಟ್ರೀಯ ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡವನ್ನು ಎದುರಿಸಲಿದೆ.
ಭಾರತದ ಕ್ರಿಕೆಟ್ ಪ್ರವಾಸದಲ್ಲಿರುವ ವೆಸ್ಟ್‌ಇಂಡೀಸ್ ತಂಡವು ಇದೀಗ ತನ್ನ ಗಮನವನ್ನು ಟಿ-20 ಕ್ರಿಕೆಟ್‌ನತ್ತ ಹರಿಸಲಿದೆ. ನ್ಯೂ ಚಂಡಿಗಡದಲ್ಲಿ ನಡೆದಿದ್ದ ಕೊನೆಯ ಏಕದಿನ ಪಂದ್ಯದಲ್ಲಿ ಪ್ರವಾಸಿಗರು ರೋಚಕ ಗೆಲುವು ದಾಖಲಿಸಿದ ಕೆಲವೇ ದಿನಗಳ ನಂತರ ಐದು ಪಂದ್ಯಗಳ ಟಿ-20 ಸರಣಿ ಆರಂಭವಾಗಲಿದೆ. ಮೂರನೇ ಪಂದ್ಯದ ಫಲಿತಾಂಶವು ವಿಂಡೀಸ್‌ಗೆ ಭಾರೀ ಆತ್ಮವಿಶ್ವಾಸ ತಂದುಕೊಟ್ಟಿದೆ.
ಹಾಲಿ ಟಿ-20 ವಿಶ್ವ ಚಾಂಪಿಯನ್ ಭಾರತವು ಟಿ-20 ಕ್ರಿಕೆಟ್‌ಗೆ ವಿಭಿನ್ನ ತಂಡವನ್ನು ಹೊಂದಿದ್ದು, ಶ್ರೇಯಸ್ ಅಯ್ಯರ್ ತಂಡದ ನಾಯಕತ್ವವಹಿಸಿದ್ದಾರೆ. ಈ ವರ್ಷಾರಂಭದಲ್ಲಿ ವಿಶ್ವಕಪ್ ಜಯಿಸಿದ್ದ ಹಲವು ಅಟಗಾರರು ಈ ತಂಡದಲ್ಲಿದ್ದಾರೆ.
ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಆಡುವ 11ರ ಬಳಗದ ಆಯ್ಕೆಯ ವಿಚಾರದಲ್ಲಿ ಗೊಂದಲ ಎದುರಿಸುತ್ತಿದ್ದಾರೆ. ಸಂಜು ಸ್ಯಾಮ್ಸನ್‌ಗೆ ಇನಿಂಗ್ಸ್ ಆರಂಭಿಸುವ ಅವಕಾಶ ನೀಡಬೇಕೇ, ಅಥವಾ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಆಡುವ ಬಳಗದಲ್ಲಿ ಅವಕಾಶ ನೀಡಬೇಕೇ ಎಂಬ ಜಿಜ್ಞಾಸೆಯಲ್ಲಿದ್ದಾರೆ.
ವಿಶ್ವದ ನಂ.1 ಟಿ-20 ಬ್ಯಾಟರ್ ಅಭಿಷೇಕ್ ಶರ್ಮಾ ಆರಂಭಿಕ ಸ್ಥಾನಕ್ಕೆ ಸಹಜ ಆಯ್ಕೆಯಾಗಿದ್ದು, ಅವರ ಜೊತೆಗಾರನ ಆಯ್ಕೆಯು ಕಷ್ಟಕರವಾಗಿದೆ. ಏಶ್ಯನ್ ಗೇಮ್ಸ್ ವೇಳೆ ಪುರುಷರ ಕ್ರಿಕೆಟ್ ತಂಡದ ಕೋಚ್ ಆಗಿದ್ದ ವಿವಿಎಸ್ ಲಕ್ಷ್ಮಣ್ ಅವರು ಸೂರ್ಯವಂಶಿ, ಅಭಿಷೇಕ್ ಶರ್ಮಾ ಹಾಗೂ ಸ್ಯಾಮ್ಸನ್‌ರನ್ನು ಕಣಕ್ಕಿಳಿಸಿದ್ದರು.
ಕಠಿಣ ಪಿಚ್‌ನಲ್ಲಿ ಹೆಚ್ಚುವರಿ ರನ್ ಚೇಸ್ ಮಾಡುವುದನ್ನು ದೃಷ್ಟಿಯಲ್ಲಿಟ್ಟುಕೊಂಡು ಸ್ಯಾಮ್ಸನ್ ಮೂರನೇ ಕ್ರಮಾಂಕದಲ್ಲಿ ಆಡಿದ್ದರು. ಲಕ್ನೊದ ಎಕನಾ ಸ್ಟೇಡಿಯಂನಲ್ಲಿ ಗಂಭೀರ್ ಅವರು ಸ್ಯಾಮ್ಸನ್‌ರನ್ನು ಆರಂಭಿಕ ಆಟಗಾರನಾಗಿ ಕಣಕ್ಕಿಳಿಸಿ, ಕೆಳ ಕ್ರಮಾಂಕದಲ್ಲಿ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿಯವರನ್ನು ಕಣಕ್ಕಿಳಿಸಬಹುದು.
ಭಾರತದ ಮಧ್ಯಮ ಸರದಿಯು ಈಗಾಗಲೇ ಭರ್ತಿಯಾಗಿದೆ. ಇಶಾನ್ ಕಿಶನ್, ತಿಲಕ್ ವರ್ಮಾ, ಶಿವಂ ದುಬೆ, ನಿತೀಶ್ ರೆಡ್ಡಿ ಹಾಗೂ ಅಕ್ಷರ್ ಪಟೇಲ್ ಅವರಿದ್ದಾರೆ. ಹೀಗಾಗಿ ಸೂರ್ಯವಂಶಿ ಹಾಗೂ ಸ್ಯಾಮ್ಸನ್ ಆಡುವ ಬಳಗದಲ್ಲಿ ಸ್ಥಾನ ಪಡೆಯುವುದಕ್ಕೆ ಇದು ಅಡ್ಡಿಯಾಗಿದೆ.
ಭಾರತದ ವೇಗದ ಬೌಲಿಂಗ್ ದಾಳಿಯನ್ನು ಅರ್ಷದೀಪ್ ಸಿಂಗ್ ಅವರು ಅನನುಭವಿ ಬೌಲರ್‌ಗಳಾದ ಮಯಾಂಕ್ ಯಾದವ್ ಹಾಗೂ ಪ್ರಿನ್ಸ್ ಯಾದವ್ ಅವರೊಂದಿಗೆ ಮುನ್ನಡೆಸಲಿದ್ದಾರೆ. ಮಯಾಂಕ್ ಯಾದವ್ ಆರು ಟಿ-20 ಹಾಗೂ ಪ್ರಿನ್ಸ್ ಮೂರು ಟಿ-20 ಪಂದ್ಯಗಳನ್ನಾಡಿದ್ದಾರೆ. ಸ್ಪಿನ್ ವಿಭಾಗವನ್ನು ಅಕ್ಷರ್ ಪಟೇಲ್ ಹಾಗೂ ಕುಲದೀಪ್ ಯಾದವ್ ನಿಭಾಯಿಸಲಿದ್ದಾರೆ.
ಕೆಳ ರ್ಯಾಂಕಿನ ತಂಡಗಳಾದ ಝಿಂಬಾಬ್ವೆ ಹಾಗೂ ಅಫ್ಘಾನಿಸ್ತಾನದ ವಿರುದ್ಧ ಟಿ-20 ಸರಣಿಯಲ್ಲಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದ್ದ ಶ್ರೇಯಸ್ ಅಯ್ಯರ್‌ಗೆ ವೆಸ್ಟ್‌ಇಂಡೀಸ್ ತಂಡವನ್ನು ಎದುರಿಸುವುದು ಅಷ್ಟೊಂದು ಸುಲಭವಲ್ಲ.
2012 ಹಾಗೂ 2016ರಲ್ಲಿ ಟಿ-20 ವಿಶ್ವಕಪ್ ಗೆದ್ದಿರುವ ವೆಸ್ಟ್‌ಇಂಡೀಸ್ ತಂಡವನ್ನು ಸ್ವದೇಶದಲ್ಲಿ ಭಾರತ ತಂಡವು ಹಿಂದಿನ 10 ಪಂದ್ಯಗಳಲ್ಲಿ 9 ಬಾರಿ ಮಣಿಸಿದರೂ ವಿಂಡೀಸ್ ಟಿ-20 ಮಾದರಿಯಲ್ಲಿ ಈಗಲೂ ಬಲಿಷ್ಠ ತಂಡವಾಗಿಯೇ ಉಳಿದುಕೊಂಡಿದೆ.
ಶಾಯ್ ಹೋಪ್ ನಾಯಕತ್ವದ ವಿಂಡೀಸ್ ಟಿ-20 ತಂಡದಲ್ಲಿ ಐಪಿಎಲ್‌ನಲ್ಲಿ ಆಡಿರುವ ಅನುಭವವಿರುವ ರೊಮಾರಿಯೊ ಶೆಫರ್ಡ್, ರೋವ್‌ಮನ್ ಪೊವೆಲ್, ಶಿಮ್ರೊನ್ ಹೆಟ್ಮೆಯರ್ ಹಾಗೂ ಅಕೀಲ್ ಹುಸೇನ್ ಅವರಿದ್ದಾರೆ. ಈ ಎಲ್ಲ ಆಟಗಾರರಿಗೆ ಭಾರತದ ವಾತಾವರಣ ಚೆನ್ನಾಗಿ ಗೊತ್ತಿದೆ.
2022ರ ಫೆಬ್ರವರಿಯ ನಂತರ ಭಾರತ ಹಾಗೂ ವೆಸ್ಟ್‌ಇಂಡೀಸ್ ನಡುವಿನ ಮೊದಲ ದ್ವಿಪಕ್ಷೀಯ ಟಿ-20 ಸರಣಿ ಇದಾಗಿದೆ. ಆಗ ಭಾರತ ತಂಡವು 3-0 ಅಂತರದಿಂದ ಸರಣಿ ಗೆದ್ದಿತ್ತು.
ಉಭಯ ತಂಡಗಳು ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಕೋಲ್ಕತಾದ ಈಡನ್‌ಗಾರ್ಡನ್ಸ್‌ನಲ್ಲಿ ನಡೆದಿದ್ದ ಸೂಪರ್-8 ಹಂತದಲ್ಲಿ ಕೊನೆಯ ಬಾರಿ ಮುಖಾಮುಖಿಯಾಗಿದ್ದವು. ಆಗ 196 ರನ್ ಗುರಿ ಬೆನ್ನಟ್ಟಿದ್ದ ಭಾರತ ತಂಡವು ನಾಲ್ಕು ಎಸೆತ ಬಾಕಿ ಇರುವಾಗ ಐದು ವಿಕೆಟ್‌ಗಳಿಂದ ರೋಚಕ ಜಯ ದಾಖಲಿಸಿತ್ತು. ಸಂಜು ಸ್ಯಾಮ್ಸನ್ 50 ಎಸೆತಗಳಲ್ಲಿ 97 ರನ್ ಗಳಿಸಿದ್ದರು.
ಪಿಚ್ ರಿಪೋರ್ಟ್
ಲಕ್ನೊದ ಎಕನಾ ಕ್ರಿಕೆಟ್ ಸ್ಟೇಡಿಯಂ ಪಿಚ್ ಭಾರತ-ವೆಸ್ಟ್‌ಇಂಡೀಸ್ ನಡುವಿನ ಮೊದಲ ಟಿ-20 ಪಂದ್ಯದಲ್ಲಿ ಮಂದಗತಿಯಲ್ಲಿ ವರ್ತಿಸುವ ಸಾಧ್ಯತೆಯಿದೆ. ದೊಡ್ಡ ಬೌಂಡರಿ ಇರುವ ಕಾರಣ ಬ್ಯಾಟರ್‌ಗಳಿಗೆ ನಿರಂತರವಾಗಿ ಬೌಂಡರಿ, ಸಿಕ್ಸರ್ ಗಳಿಸುವುದು ಕಷ್ಟಕರವಾಗಬಹುದು. ಪಂದ್ಯ ಮುಂದುವರಿದಂತೆ ಅದರಲ್ಲೂ ಮುಖ್ಯವಾಗಿ ಪವರ್‌ಪ್ಲೇ ನಂತರ ಪಿಚ್ ಹೆಚ್ಚು ಹಿಡಿತಕ್ಕೆ ಸಿಗುವ ಸಾಧ್ಯತೆಯಿದೆ. ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರವಹಿಸುವ ನಿರೀಕ್ಷೆ ಇದೆ.
ಮೊದಲ ಇನಿಂಗ್ಸ್‌ನಲ್ಲಿ ಸುಮಾರು 165-175 ಸ್ಕೋರ್ ಗಳಿಸಬಹುದು. ಇದು ಈ ಪಿಚ್‌ನಲ್ಲಿ ಸ್ಪರ್ಧಾತ್ಮಕ ಸ್ಕೋರಾಗಿದೆ. ತಂಡಗಳು ಮೊದಲು ಬ್ಯಾಟಿಂಗ್‌ಗೆ ಆದ್ಯತೆ ನೀಡಬಹುದು. ಹೊನಲು ಬೆಳಕಿನಲ್ಲಿ ಇಬ್ಬನಿ ಕಾಟವು ಪಂದ್ಯದ ಲೆಕ್ಕಾಚಾರ ಬದಲಿಸಬಹುದು.
ತಂಡಗಳು:
ಭಾರತ: ಶ್ರೇಯಸ್ ಅಯ್ಯರ್(ನಾಯಕ), ತಿಲಕ್ ವರ್ಮಾ(ಉಪ ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್(ವಿಕೆಟ್‌ಕೀಪರ್), ಇಶಾನ್ ಕಿಶನ್(ವಿಕೆಟ್‌ಕೀಪರ್), ವೈಭವ ಸೂರ್ಯವಂಶಿ, ಶಿವಂ ದುಬೆ, ಅಕ್ಷರ್ ಪಟೇಲ್, ವಾಶಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಕುಲದೀಪ ಯಾದವ್, ರವಿ ಬಿಷ್ಣೋಯಿ, ಅರ್ಷದೀಪ್ ಸಿಂಗ್, ಮಯಾಂಕ್ ಯಾದವ್, ಪ್ರಿನ್ಸ್ ಯಾದವ್.
ವೆಸ್ಟ್‌ಇಂಡೀಸ್: ಶಾಯ್ ಹೋಪ್(ನಾಯಕ, ವಿಕೆಟ್‌ಕೀಪರ್), ಶಿಮ್ರೊನ್ ಹೆಟ್ಮೆಯರ್, ರೊವ್‌ಮನ್ ಪೊವೆಲ್, ಶೆರ್ಫಾನ್ ರುದರ್‌ಫೋರ್ಡ್, ಆಮಿರ್ ಜಾಂಗೂ(ವಿಕೆಟ್‌ಕೀಪರ್), ಕಮಿಲ್ ಪೂರನ್, ರೊಮಾರಿಯೊ ಶೆಫರ್ಡ್, ರೋಸ್ಟನ್ ಚೇಸ್, ಕೀಮೋ ಪೌಲ್, ಕ್ವೆಂಟಿನ್ ಸ್ಯಾಂಪ್ಸನ್, ಶಮರ್ ಸ್ಪ್ರಿಂಗರ್, ಮ್ಯಾಥ್ಯೂ ಫೋರ್ಡ್, ಅಕೀಲ್ ಹುಸೇನ್, ಗುಡಕೇಶ್ ಮೋಟಿ, ಶಮರ್ ಜೋಸೆಫ್.