ಐದನೇ ಟೆಸ್ಟ್ | ಅಟ್ಕಿನ್ಸನ್ ಗೆ ಐದು ವಿಕೆಟ್ ಗೊಂಚಲು; ಇಂಗ್ಲೆಂಡ್ ವಿರುದ್ಧ ಭಾರತ 224 ರನ್ ಗೆ ಆಲೌಟ್
PC ; X
ಲಂಡನ್, ಆ.1: ಟೆಸ್ಟ್ ಕ್ರಿಕೆಟ್ ನಲ್ಲಿ 4ನೇ ಬಾರಿ ಐದು ವಿಕೆಟ್ ಗೊಂಚಲು ಪಡೆದಿರುವ ವೇಗದ ಬೌಲರ್ ಗಸ್ ಅಟ್ಕಿನ್ಸನ್(5-33) ಹಾಗೂ ಜೋಶ್ ಟಂಗ್(3-57) ಅವರ ಅಮೋಘ ಬೌಲಿಂಗ್ ನೆರವಿನಿಂದ ಇಂಗ್ಲೆಂಡ್ ಕ್ರಿಕೆಟ್ ತಂಡವು ಭಾರತ ಕ್ರಿಕೆಟ್ ತಂಡವನ್ನು ಐದನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 224 ರನ್ ಗೆ ಆಲೌಟ್ ಮಾಡುವಲ್ಲಿ ಶಕ್ತವಾಗಿದೆ.
ಎರಡು ತಿಂಗಳ ನಂತರ ಇಂಗ್ಲೆಂಡ್‌ನ ಆಡುವ 11ರ ಬಳಗಕ್ಕೆ ವಾಪಸಾಗಿದ್ದ ಬಲಗೈ ವೇಗಿ ಅಟ್ಕಿನ್ಸನ್ 33 ರನ್ ಗೆ 5 ವಿಕೆಟ್‌ಗಳನ್ನು ಉರುಳಿಸಿದರು. ಗುರುವಾರ ಸಂಜೆ ಮೊದಲ ದಿನದಾಟದಲ್ಲಿ ಫೀಲ್ಡಿಂಗ್ ನಿರತರಾಗಿದ್ದಾಗ ಭುಜನೋವಿನ ಸಮಸ್ಯೆಗೆ ಒಳಗಾಗಿದ್ದ ಕ್ರಿಸ್ ವೋಕ್ಸ್ ಪ್ರಸಕ್ತ ಪಂದ್ಯದಿಂದ ಹೊರಗುಳಿದಿರುವ ಕಹಿ ಸುದ್ದಿ ಬಂದ ಬೆನ್ನಲ್ಲೇ ಅಟ್ಕಿನ್ಸನ್ ಅವರು ಕೆಳ ಸರದಿಯ ಬ್ಯಾಟರ್‌ಗಳನ್ನು ಪೆವಿಲಿಯನ್ ಕಳುಹಿಸಿ ಭಾರತದ ಮೊದಲ ಇನಿಂಗ್ಸ್‌ಗೆ ತೆರೆ ಎಳೆದರು.
ಭಾರತ ತಂಡವು ಶುಕ್ರವಾರ 6 ವಿಕೆಟ್‌ಗಳ ನಷ್ಟಕ್ಕೆ 204 ರನ್‌ನಿಂದ ತನ್ನ ಬ್ಯಾಟಿಂಗ್ ಮುಂದುವರಿಸಿತು. ಅರ್ಧಗಂಟೆಯಲ್ಲಿ ನಿನ್ನೆಯ ಸ್ಕೋರ್‌ಗೆ 20 ರನ್ ಸೇರಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಇಂದು ಭಾರತ ತಂಡ ಕಳೆದುಕೊಂಡಿರುವ 4 ವಿಕೆಟ್‌ಗಳ ಪೈಕಿ ಮೂರನ್ನು ಸರ್ರೆಯ ವೇಗದ ಬೌಲರ್ ಅಟ್ಕಿನ್ಸನ್ ಉರುಳಿಸಿದರು. ಈ ಮೂಲಕ ತನ್ನ ತವರು ಮೈದಾನದಲ್ಲಿ ಬೌಲಿಂಗ್ ನಲ್ಲಿ ಮಿಂಚಿದರು.
ಜೋಶ್ ಟಂಗ್ ಇಂದು ಎಸೆದ ತನ್ನ ಮೊದಲ ಓವರ್‌ನಲ್ಲಿ 9 ರನ್ ನೀಡಿದರು. ಆದರೆ ತನ್ನ 2ನೇ ಓವರ್ ನಲ್ಲಿ ಭಾರತದ ಪರ ಗರಿಷ್ಠ ಸ್ಕೋರ್ ಗಳಿಸಿದ್ದ ಕರುಣ್ ನಾಯರ್(57 ರನ್, 109 ಎಸೆತ, 8 ಬೌಂಡರಿ)ವಿಕೆಟನ್ನು ಪಡೆಯುವಲ್ಲಿ ಸಫಲರಾದರು.
ಔಟಾಗದೆ 19 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಆಲ್ ರೌಂಡರ್ ವಾಶಿಂಗ್ಟನ್ ಸುಂದರ್ ನಿನ್ನೆಯ ಮೊತ್ತಕ್ಕೆ 7 ರನ್ ಸೇರಿಸಿ ಅಟ್ಕಿನ್ಸನ್ ಗೆ ವಿಕೆಟ್ ಒಪ್ಪಿಸಿದರು. ಆ ನಂತರ ಅಟ್ಕಿನ್ಸನ್ ಅವರು ಮುಹಮ್ಮದ್ ಸಿರಾಜ್(0) ಹಾಗೂ ಪ್ರಸಿದ್ಧ ಕೃಷ್ಣ(0)ಅವರನ್ನು ಪೆವಿಲಿಯನ್ ಗೆ ಕಳುಹಿಸಿದರು. ದಿಢೀರ್ ಕುಸಿತ ಕಂಡ ಭಾರತ ತಂಡವು 18 ಎಸೆತಗಳಲ್ಲಿ 6 ರನ್ ಸೇರಿಸುವಷ್ಟರಲ್ಲಿ ಕೊನೆಯ 4 ವಿಕೆಟ್‌ಗಳನ್ನು ಕಳೆದುಕೊಂಡಿತು.
ಇದು ಪ್ರಸಕ್ತ ಸರಣಿಯಲ್ಲಿ ಮೊದಲ ಇನಿಂಗ್ಸ್ ನಲ್ಲಿ ದಾಖಲಾದ ಕನಿಷ್ಠ ಮೊತ್ತವಾಗಿದೆ. ಭಾರತ ತಂಡವು ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಮೊದಲ ಇನಿಂಗ್ಸ್ ನಲ್ಲಿ 358 ರನ್ ಗಳಿಸಿತ್ತು.
ಅಟ್ಕಿನ್ಸನ್ ತನ್ನ ಬೌಲಿಂಗ್ ಸರಾಸರಿಯನ್ನು 21ಕ್ಕೆ ಏರಿಸಿಕೊಂಡರು. ಐದು ಹಾಗೂ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಇಂಗ್ಲೆಂಡ್ ನ ವೇಗದ ಬೌಲರ್ ಗಳ ಪೈಕಿ ಇದು 4ನೇ ಶ್ರೇಷ್ಠ ಸರಾಸರಿ ಇದಾಗಿದೆ. 60 ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪೈಕಿ 2ನೇ ಶ್ರೇಷ್ಠ ಸ್ಟ್ರೈಕ್‌ರೇಟ್(34.9)ದಾಖಲಿಸಿದರು.