×
Ad

2026ರ IPL ಆಟಗಾರರ ಹರಾಜು | ಅವಕಾಶದ ನಿರೀಕ್ಷೆಯಲ್ಲಿ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಅಗ್ರ ಐವರು ಆಟಗಾರರು

Update: 2025-12-15 22:06 IST

credit: sports.ndtv

ಚೆನ್ನೈ, ಡಿ.15: ಕಳೆದ ಕೆಲವು ವರ್ಷಗಳಿಂದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ(ಎಸ್‌ಎಂಎಟಿ)ಟೂರ್ನಿಯು ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಹರಾಜಿಗಿಂತ ಮೊದಲು ಸಾಮರ್ಥ್ಯ ಪರೀಕ್ಷೆಯಾಗಿದ್ದು, ಈ ಬಾರಿಯ ಮಿನಿ ಹರಾಜು ಅಬುಧಾಬಿಯಲ್ಲಿ ಮಂಗಳವಾರ(ಡಿ.16)ನಡೆಯಲಿದೆ.

ಐಪಿಎಲ್ ಆಟಗಾರರ ಹರಾಜಿಗೆ ಮೂರು ವಾರಗಳ ಮುಂಚಿತವಾಗಿ ದೇಶೀಯ ಟಿ-20 ಪಂದ್ಯಾವಳಿಯು ಆರಂಭವಾಗಿದ್ದು, ಪಂದ್ಯಗಳು ನಡೆಯುತ್ತಿದ್ದ ವಿವಿಧ ಕೇಂದ್ರಗಳಿಗೆ ಐಪಿಎಲ್ ಫ್ರಾಂಚೈಸಿಗಳು ಭೇಟಿ ನೀಡಿವೆ. ಈ ಟೂರ್ನಿಯು ಆಟಗಾರರಿಗೆ ತಮ್ಮ ಸಾಮರ್ಥ್ಯವನ್ನು ತೋರಿಸುವುದಕ್ಕೆ ಉತ್ತಮ ಅವಕಾಶವಾಗಿದ್ದು, 10 ಫ್ರಾಂಚೈಸಿಗಳ ಪೈಕಿ ಒಂದರಲ್ಲಿ ಸ್ಥಾನ ಗಿಟ್ಟಿಸುವ ಸ್ಪರ್ಧೆಯಲ್ಲಿದ್ದಾರೆ.

ಈ ವರ್ಷದ ಐಪಿಎಲ್ ಹರಾಜಿನಲ್ಲಿ ಆಸಕ್ತಿ ಕೆರಳಿಸಿರುವ 2025-26ರ ಎಸ್‌ಎಂಎಟಿ ಟೂರ್ನಿಯ ಅಗ್ರ ಐವರು ಸ್ಪರ್ಧಿಗಳತ್ತ ಒಂದು ನೋಟ ಇಲ್ಲಿದೆ.

*ಕೆ.ಎಂ. ಆಸಿಫ್(ಕೇರಳ)

ಬಲಗೈ ವೇಗದ ಬೌಲರ್ ನಿರಂತರವಾಗಿ ಗರಿಷ್ಠ ವೇಗದಲ್ಲಿ ಬೌಲಿಂಗ್ ಮಾಡಬಲ್ಲ ಕೇರಳದ ವೇಗದ ಬೌಲರ್ ಆಸಿಫ್ ಅವರು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಗ್ರೂಪ್ ಹಂತದಲ್ಲಿ ಬೌಲಿಂಗ್ ನೇತೃತ್ವವಹಿಸಿದ್ದರು. ಕೇವಲ ಆರು ಪಂದ್ಯಗಳಲ್ಲಿ 6.73ರ ಇಕಾನಮಿ ರೇಟ್‌ನಲ್ಲಿ 15 ವಿಕೆಟ್‌ಗಳನ್ನು ಪಡೆದಿದ್ದಾರೆ. ಆಸಿಫ್ ಎಲ್ಲ ಹಂತದಲ್ಲೂ ಅದರಲ್ಲೂ ಮುಖ್ಯವಾಗಿ ಡೆತ್ ಓವರ್‌ ನಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.

2018 ಹಾಗೂ 2023ರ ನಡುವೆ ಏಳು ಐಪಿಎಲ್ ಪಂದ್ಯಗಳನ್ನು ಆಡಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳನ್ನು ಪ್ರತಿನಿಧಿಸಿದ್ದರು. ಆದರೆ ಕಳೆದ ವರ್ಷ ಹರಾಜಿನಲ್ಲಿ ಮಾರಾಟವಾಗದೆ ಉಳಿದರು. ಈ ಬಾರಿಯ ಎಸ್‌ಎಂಎಟಿ ಅಭಿಯಾನದಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಆಸಿಫ್ ಅವರು ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಥವಾ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ.

ಪೃಥ್ವಿ ರಾಜ್(ಆಂಧ್ರ)

ಇತ್ತೀಚೆಗಿನ ದಿನಗಳಲ್ಲಿ ಭಾರತದ ಎಡಗೈ ವೇಗದ ಬೌಲರ್‌ಗಳು ಅಪರೂಪವಾಗಿದ್ದು ಪೃಥ್ವಿ ರಾಜ್ ತಮ್ಮ ವಿಭಿನ್ನ ಶೈಲಿಯ ಬೌಲಿಂಗ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈಗ ನಡೆಯುತ್ತಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಅಭಿಯಾನದಲ್ಲಿ 27ರ ಹರೆಯದ ರಾಜ್ ಅವರು 8 ಪಂದ್ಯಗಳಲ್ಲಿ 7.23ರ ಇಕಾನಮಿ ರೇಟ್‌ನಲ್ಲಿ 11 ವಿಕೆಟ್‌ಗಳನ್ನು ಪಡೆದಿದ್ದಾರೆ.2019ರ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ಎರಡು ಪಂದ್ಯಗಳನ್ನು ಆಡಿದ್ದಾರೆ. ಕೇವಲ ಒಂದು ವಿಕೆಟ್ ಪಡೆದಿದ್ದರು.

ಸರ್ಫರಾಝ್ ಖಾನ್(ಮುಂಬೈ)

ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್‌ಇಂಡೀಸ್ ವಿರುದ್ದ ಸ್ವದೇಶದಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಟೀಮ್‌ಇಂಡಿಯಾಕ್ಕೆ ಆಯ್ಕೆಯಾಗದೆ ಸುದ್ದಿಯಾಗಿರುವ ಸರ್ಫರಾಝ್ ಅವರು 2025-26ರ ಋತುವಿನಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಪರ 47 ಎಸೆತಗಳಲ್ಲಿ ಶತಕ ಗಳಿಸಿ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಸೈ ಎನಿಸಿಕೊಂಡಿದ್ದಾರೆ.

ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಸರ್ಫರಾಝ್ ಅವರು 31 ಎಸೆತಗಳಲ್ಲಿ ತನ್ನ ಅರ್ಧಶತಕವನ್ನು ಗಳಿಸಿದ್ದರು. ಆ ನಂತರ ತನ್ನ ಚೊಚ್ಚಲ ಟಿ-20 ಶತಕವನ್ನು ಪೂರೈಸಿದ್ದರು. ಶತಕದ ನಂತರ ಕೇರಳ ವಿರುದ್ಧದ ಪಂದ್ಯದಲ್ಲಿ ಬಿರುಸಿನ ಅರ್ಧಶತಕ ಗಳಿಸಿದ್ದರು. ಸೂಪರ್ ಲೀಗ್ ಹಂತದಲ್ಲಿ ಹರ್ಯಾಣ ತಂಡದ ವಿರುದ್ಧ 25 ಎಸೆತಗಳಲ್ಲಿ 64 ರನ್ ಗಳಿಸಿದ್ದರು.

ಕಳೆದ ಎರಡು ಆವೃತ್ತಿಯ ಐಪಿಎಲ್‌ ನಲ್ಲಿ ಮಾರಾಟವಾಗದೆ ಉಳಿದಿದ್ದರೂ 2015ರಲ್ಲಿ ಐಪಿಎಲ್‌ಗೆ ಕಾಲಿಟ್ಟ ನಂತರ 50 ಪಂದ್ಯಗಳನ್ನು ಆಡಿದ್ದಾರೆ. 130ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿರುವ ಸರ್ಫರಾಝ್ ಲೀಗ್‌ನಲ್ಲಿ ಮಧ್ಯಮ ಸರದಿಯಲ್ಲಿ ಮಿಂಚುವಲ್ಲಿ ವಿಫಲರಾಗಿದ್ದರು. ಎಸ್‌ಎಂಎಟಿಯಲ್ಲಿ ಮಿಂಚುತ್ತಿರುವ ಸರ್ಫರಾಝ್ ಐಪಿಎಲ್‌ಗೆ ಮತ್ತೊಮ್ಮೆ ಪ್ರವೇಶಿಸುವ ನಿರೀಕ್ಷೆಯಲ್ಲಿದ್ದಾರೆ.

ಸಾದಿಕ್ ಹುಸೇನ್(ಅಸ್ಸಾಂ)

ಅಸ್ಸಾಂನ ವಿಭಿನ್ನ ಶೈಲಿಯ ಮಧ್ಯಮ ವೇಗದ ಬೌಲರ್ ಸಾದಿಕ್ ಹುಸೇನ್ ಐಪಿಎಲ್‌ನಲ್ಲಿ ತಂಡಗಳ ಎಕ್ಸ್ ಫ್ಯಾಕ್ಟರ್ ಆಗಿ ಹೊರಹೊಮ್ಮಬಹುದು. ಹುಸೇನ್ ಬೌಲಿಂಗ್ ಶೈಲಿಯು ಲಸಿತ್ ಮಾಲಿಂಗ ಶೈಲಿಯನ್ನು ಹೋಲುತ್ತದೆ. ಮಾಲಿಂಗ ಅವರು ಸ್ಲಿಂಗ್ ಶೈಲಿಯಲ್ಲಿ ಬ್ಯಾಟರ್‌ಗಳನ್ನು ಕಾಡಿದ್ದರು. ಶಿವಸಾಗರದಲ್ಲಿ ಸ್ಥಳೀಯ ಟೆನಿಸ್ ಪಂದ್ಯಾವಳಿಗಳಲ್ಲಿ ಆಡುತ್ತಾ ಬೆಳೆದಿರುವ ಹುಸೇನ್, ಅಸ್ಸಾಂ ಟಿ-20 ತಂಡದಲ್ಲಿ ಅಡಿದ್ದರು. ಈ ತಿಂಗಳಾರಂಭದಲ್ಲಿ ಮುಂಬೈ ವಿರುದ್ಧ ಎಸ್‌ಎಂಎಟಿ ಟೂರ್ನಿಯಲ್ಲಿ ಮೊದಲ ಪಂದ್ಯ ಆಡಿದ್ದರು. ಕೇರಳ ವಿರುದ್ಧ್ದದ ಪಂದ್ಯದಲ್ಲಿ 19 ರನ್‌ಗೆ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದ್ದರು.

ಮುಹಮ್ಮದ್ ಶರಾಫುದ್ದೀನ್(ಕೇರಳ)

ಕೇರಳದ ಆಲ್‌ರೌಂಡರ್ ಶರಾಫುದ್ದೀನ್ ಅವರು ಸ್ಲಾಗ್ ಓವರ್‌ಗಳಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಬಲ್ಲರು ಹಾಗೂ ಹೊಸ ಚೆಂಡಿನಲ್ಲಿ ಬೌಲಿಂಗ್ ಮಾಡಬಲ್ಲರು. ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಗ್ರೂಪ್ ಹಂತದಲ್ಲಿ ಮುಂಬೈ ತಂಡದ ವಿರುದ್ಧ 15 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ಸಹಿತ ಔಟಾಗದೆ 35 ರನ್ ಗಳಿಸಿದ್ದರು. ಮೂರು ಓವರ್‌ಗಳಲ್ಲಿ 23 ರನ್‌ಗೆ 1 ವಿಕೆಟ್ ಪಡೆದಿದ್ದರು. 30ರ ವಯಸ್ಸಿನ ಶರಾಫುದ್ದೀನ್ 60 ರನ್ ಗಳಿಸಿದ್ದಲ್ಲದೆ, 7.87ರ ಇಕಾನಮಿ ರೇಟ್‌ನಲ್ಲಿ ಆರು ವಿಕೆಟ್‌ಗಳನ್ನು ಪಡೆದಿದ್ದರು. ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಐಪಿಎಲ್‌ನಲ್ಲಿ ಆಲ್‌ರೌಂಡರ್‌ಗಳ ಪಾಲ್ಗೊಳ್ಳುವಿಕೆಯನ್ನು ಕಡಿಮೆಗೊಳಿಸಿದೆ. ಆದರೆ ತಂಡದಲ್ಲಿ ಕೆಲವು ಉತ್ತಮ ಓವರ್‌ಗಳು ತಂಡಗಳ ಗೆಲುವಿಗೆ ನೆರವಾಗಬಹುದು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News