×
Ad

IPL ಹರಾಜು 2026 | 25.20 ಕೋಟಿ ರೂ.ಗೆ KKR ಪಾಲಾದ ಕ್ಯಾಮರೂನ್ ಗ್ರೀನ್‌

ವೆಂಕಟೇಶ್ ಅಯ್ಯರ್ RCB ತೆಕ್ಕೆಗೆ

Update: 2025-12-16 15:32 IST

Photo source:X/@RCBTweets,@KKRiders

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಹರಾಜಿನ ಅತಿ ದುಬಾರಿ ಆಟಗಾರರಾಗಿ ಹೊರಹೊಮ್ಮಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ಅವರನ್ನು 25.20 ಕೋಟಿ ರೂ.ಗೆ ತನ್ನದಾಗಿಸಿಕೊಂಡಿತು.

ಈ ಬಾರಿ ಹರಾಜಿನಲ್ಲಿ 10 ಫ್ರಾಂಚೈಸಿಗಳಲ್ಲಿ ಒಟ್ಟು 77 ಸ್ಥಾನಗಳು ಮಾತ್ರ ಖಾಲಿ ಉಳಿದಿವೆ. ಈ ಸ್ಥಾನಗಳನ್ನು ತುಂಬಿಕೊಳ್ಳಲು ತಂಡಗಳು ಒಟ್ಟಾರೆ 237.55 ಕೋಟಿ ರೂ.ವರೆಗೆ ವೆಚ್ಚ ಮಾಡುವ ಅವಕಾಶವಿದೆ. ಹರಾಜಿನ ಬಳಿಕ ತಂಡಗಳು ಕನಿಷ್ಠ 18 ಹಾಗೂ ಗರಿಷ್ಠ 25 ಆಟಗಾರರನ್ನು ಹೊಂದಿರಬಹುದು.

ಹರಾಜಿನ ಮೊದಲ ಆಟಗಾರರಾಗಿ ಆಸ್ಟ್ರೇಲಿಯಾದ ಜೇಕ್ ಫ್ರೇಸರ್–ಮ್ಯಾಕ್‌ಗರ್ಕ್ ಹೆಸರು ಕೂಗಿದರೂ, ಯಾವುದೇ ಫ್ರಾಂಚೈಸಿಯಿಂದ ಬಿಡ್ಡಿಂಗ್ ನಡೆಯಲಿಲ್ಲ. ಹರಾಜಿನಲ್ಲಿ ಮೊದಲ ಬಾರಿ ಬೇಡಿಕೆ ಕಂಡ ಆಟಗಾರ ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್. ಅವರು ಮೂಲಬೆಲೆ 2 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾದರು.

ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿನಲ್ಲಿ ಭಾರತದ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು 7 ಕೋಟಿ ರೂಪಾಯಿ ಮೊತ್ತಕ್ಕೆ ಖರೀದಿಸಿದೆ.

ಹರಾಜಿನ ಪ್ರಮುಖ ಆಕರ್ಷಣೆಯಾಗಿದ್ದ ಕ್ಯಾಮರೂನ್ ಗ್ರೀನ್‌ಗೆ ಆರಂಭದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಆಸಕ್ತಿ ತೋರಿದವು. ಬಳಿಕ ಕೋಲ್ಕತ್ತಾ ನೈಟ್ ರೈಡರ್ಸ್ ಸ್ಪರ್ಧೆಗೆ ಇಳಿಯಿತು. 13.60 ಕೋಟಿ ರೂ. ಹಂತದಲ್ಲಿ ರಾಜಸ್ಥಾನ ಹಿಂದೆ ಸರಿದರೆ, ಚೆನ್ನೈ ಸೂಪರ್ ಕಿಂಗ್ಸ್ ಬಿಡ್ಡಿಂಗ್‌ಗೆ ಪ್ರವೇಶಿಸಿತು. ಕೆಕೆಆರ್ ಮತ್ತು ಸಿಎಸ್‌ಕೆ ನಡುವೆ ನಡೆದ ತೀವ್ರ ಬಿಡ್ಡಿಂಗ್ ಪೈಪೋಟಿಯಲ್ಲಿ ಕೊನೆಗೆ ಗ್ರೀನ್ 25.20 ಕೋಟಿ ರೂ.ಗೆ ಕೆಕೆಆರ್ ತಂಡದ ಪಾಲಾದರು.

ಇನ್ನೊಂದೆಡೆ, ಭಾರತದ ಬ್ಯಾಟರ್ ಗಳಾದ ಪೃಥ್ವಿ ಶಾ ಮತ್ತು ಸರ್ಫರಾಜ್ ಖಾನ್ ಸೇರಿದಂತೆ ಕೆಲ ಪ್ರಮುಖ ಆಟಗಾರರಿಗೆ ಯಾವುದೇ ತಂಡದಿಂದ ಬಿಡ್ಡರ್‌ ಸಿಗದಿರುವುದು ಹರಾಜಿನ ಅಚ್ಚರಿ ಬೆಳವಣಿಗೆಯಾಗಿ ಗಮನ ಸೆಳೆದಿದೆ. ನ್ಯೂಜಿಲೆಂಡ್‌ನ ಡೆವೋನ್ ಕಾನ್ವೆಗೂ ಯಾರು ಆಸಕ್ತಿ ತೋರಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News