×
Ad

ಡಿ.17ರಂದು ನಾಲ್ಕನೇ T20 ಪಂದ್ಯ; ಸರಣಿ ಗೆಲುವಿನ ವಿಶ್ವಾಸದಲ್ಲಿ Team India

Update: 2025-12-16 23:03 IST

ಸೂರ್ಯಕುಮಾರ್ ಯಾದವ್ - Photo Credit: PTI

ಲಕ್ನೊ, ಡಿ.16: ಧರ್ಮಶಾಲಾದಲ್ಲಿ ನಡೆದಿದ್ದ ಮೂರನೇ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿರುವ ಟೀಮ್ ಇಂಡಿಯಾ ಬುಧವಾರ ನಡೆಯಲಿರುವ ನಾಲ್ಕನೇ T20 ಅಂತರರಾಷ್ಟ್ರೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಈಗಾಗಲೇ 2-1 ಮುನ್ನಡೆಯಲ್ಲಿರುವ ಭಾರತ ತಂಡ ಈ ಪಂದ್ಯವನ್ನು ಗೆದ್ದರೆ T20 ಸರಣಿಯನ್ನು ವಶಪಡಿಸಿಕೊಳ್ಳಬಹುದು.

ಟೆಸ್ಟ್ ಪಂದ್ಯವನ್ನು 0-2 ಅಂತರದಿಂದ ಸೋತಿರುವ ಭಾರತ ತಂಡವು T20 ಸರಣಿಯನ್ನು 4-1 ಅಂತರದಿಂದ ಗೆಲ್ಲುವ ಇರಾದೆಯಲ್ಲಿದೆ. ಒಂದು ವೇಳೆ ಲಕ್ನೊ ಅಥವಾ ಅಹ್ಮದಾಬಾದ್ ನಲ್ಲಿ T20 ಪಂದ್ಯವನ್ನು ಜಯಿಸಿದರೆ ಭಾರತ ಸತತ 14ನೇ T20 ಸರಣಿಯನ್ನು ಗೆಲ್ಲಲಿದೆ.

ನ್ಯೂ ಚಂಡಿಗಡದಲ್ಲಿ ಮಾತ್ರ ಸೋತಿರುವ ಭಾರತ ತಂಡದ ಆಟಗಾರರಾದ ಶುಭಮನ್ ಗಿಲ್ ಹಾಗೂ ಸೂರ್ಯಕುಮಾರ್ ಯಾದವ್ ಅವರ ನೀರಸ ಪ್ರದರ್ಶನ ಚರ್ಚೆಗೆ ಗ್ರಾಸವಾಗಿದೆ.

ದಕ್ಷಿಣ ಆಫ್ರಿಕಾದ ಬ್ಯಾಟರ್ ರೀಝಾ ಹೆಂಡ್ರಿಕ್ಸ್ ಸರಣಿಯಲ್ಲಿ ಈ ತನಕ 0, 10 ರನ್ ಗಳಿಸಿದ್ದಾರೆ. ಭಾರತ ವಿರುದ್ಧ ಆಡಿರುವ 15 ಇನಿಂಗ್ಸ್‌ ಗಳಲ್ಲಿ ಕೇವಲ ಒಮ್ಮೆ ಮಾತ್ರ 50 ರನ್ ಗಳಿಸಿದ್ದರು. ಅರ್ಷದೀಪ್ ಸಿಂಗ್ ರನ್ನು ಎದುರಿಸುವಾಗ ಹೆಂಡ್ರಿಕ್ಸ್ ಒತ್ತಡಕ್ಕೆ ಸಿಲುಕುತ್ತಿದ್ದಾರೆ.

►ಟೀಮ್ ನ್ಯೂಸ್:

ವೈಯಕ್ತಿಕ ಕಾರಣದಿಂದಾಗಿ ಮೂರನೇ ಪಂದ್ಯದಿಂದ ವಂಚಿತರಾಗಿದ್ದ ಜಸ್ಪ್ರಿತ್ ಬುಮ್ರಾ ಅವರು ನಾಲ್ಕನೇ ಪಂದ್ಯಕ್ಕೆ ಲಭ್ಯವಿರುವ ಸಾಧ್ಯತೆಯಿದೆ. ಇದೇ ವೇಳೆ ಅನಾರೋಗ್ಯದಿಂದ ಬಳಲುತ್ತಿರುವ ಅಕ್ಷರ್ ಪಟೇಲ್ ಸರಣಿಯಿಂದ ಹೊರಗುಳಿದಿದ್ದಾರೆ. ಬುಮ್ರಾ ವಾಪಸಾಗದೆ ಇದ್ದರೆ ಭಾರತವು 3ನೇ ಪಂದ್ಯವನ್ನಾಡಿದ ತಂಡವನ್ನೇ ಕಣಕ್ಕಿಳಿಸಲಿದೆ.

ದಕ್ಷಿಣ ಆಫ್ರಿಕಾ ತಂಡವು ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಮಾಡಬಹುದು.

►ಪಿಚ್ ಹಾಗೂ ವಾತಾವರಣ

ಲಕ್ನೊದ ವಾತಾವರಣ ತಂಪಾಗಿದ್ದರೂ ಧರ್ಮಶಾಲಾದಷ್ಟು ವಿಪರೀತ ಚಳಿ ಇಲ್ಲ. ತಾಪಮಾನವು 10 ಡಿಗ್ರಿ ಸೆಲ್ಸಿಯಸ್ನಷ್ಟೇ ಇರುವ ಸಾಧ್ಯತೆಯಿದೆ. ಇದು ಸ್ಪಿನ್ ಸ್ನೇಹಿ ಪಿಚ್ ರಚನೆಗೆ ಕಷ್ಟಕರವಾಗಿಸಲಿದೆ. ಐಪಿಎಲ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ತಂಡವು ಹೆಚ್ಚು ಗೆಲುವು ಪಡೆದಿತ್ತು. ಚಳಿಗಾಲದಲ್ಲಿ ಸಾಕಷ್ಟು ಇಬ್ಬನಿ ಇರುವ ಕಾರಣ ತಂಡಗಳು ಮೊದಲು ಫೀಲ್ಡಿಂಗ್ ಆಯ್ದುಕೊಳ್ಳಬಹುದು.

►ಅಂಕಿ-ಅಂಶ

-ಅರ್ಷದೀಪ್ ಸಿಂಗ್ ಎಲ್ಲ T20 ಕ್ರಿಕೆಟ್ನಲ್ಲಿ ಕೇವಲ 66 ರನ್ ನೀಡಿ 56 ಎಸೆತಗಳಲ್ಲಿ ಕ್ವಿಂಟನ್ ಡಿಕಾಕ್ರನ್ನು ಐದು ಬಾರಿ ಔಟ್ ಮಾಡಿದ್ದಾರೆ.

-ಸೂರ್ಯಕುಮಾರ್ ಕಳೆದ ವರ್ಷ ಅಕ್ಟೋಬರ್ನಂತರ T20 ಕ್ರಿಕೆಟ್ನಲ್ಲಿ ಅರ್ಧಶತಕ ಗಳಿಸಿಲ್ಲ. ಆ ನಂತರ ಅವರು 21 ಇನಿಂಗ್ಸ್‌ ಗಳಲ್ಲಿ 239 ರನ್ ಗಳಿಸಿದ್ದಾರೆ.

►ತಂಡಗಳು

ಭಾರತ(ಸಂಭಾವ್ಯ): 1. ಅಭಿಷೇಕ್ ಶರ್ಮಾ, 2. ಶುಭಮನ್ ಗಿಲ್, 3. ಸೂರ್ಯಕುಮಾರ್ ಯಾದವ್(ನಾಯಕ), 4. ತಿಲಕ್ ವರ್ಮಾ, 5. ಜಿತೇಶ್ ಶರ್ಮಾ(ವಿಕೆಟ್‌ ಕೀಪರ್), 6. ಹಾರ್ದಿಕ್ ಪಾಂಡ್ಯ, 7. ಶಿವಂ ದುಬೆ, 8. ಹರ್ಷಿತ್ ರಾಣಾ, 9. ಅರ್ಷದೀಪ್ ಸಿಂಗ್, 10. ಕುಲದೀಪ ಯಾದವ್, 11. ವರುಣ್ ಚಕ್ರವರ್ತಿ.

ದಕ್ಷಿಣ ಆಫ್ರಿಕಾ(ಸಂಭಾವ್ಯ): 1. ಕ್ವಿಂಟನ್ ಡಿಕಾಕ್(ವಿಕೆಟ್‌ ಕೀಪರ್), 2. ರೀಝಾ ಹೆಂಡ್ರಿಕ್ಸ್, 3. ಏಡೆನ್ ಮರ್ಕ್ರಮ್(ನಾಯಕ), 4. ಡೆವಾಲ್ಡ್ ಬ್ರೆವಿಸ್, 5. ಡೇವಿಡ್ ಮಿಲ್ಲರ್, 6. ಡೊನೊವನ್ ಫೆರೇರ, 7. ಮಾರ್ಕೊ ಜಾನ್ಸನ್, 8. ಕಾರ್ಬಿನ್ ಬಾಷ್, 9. ಜಾರ್ಜ್ ಲಿಂಡ್/ಕೇಶವ ಮಹಾರಾಜ್/ಅನ್ರಿಚ್ ನೋಟ್ಜೆ, 10. ಲುಂಗಿ ಗಿಡಿ, 11. ಒಟ್ನೀಲ್ ಬಾರ್ಟ್ಮನ್.

ಪಂದ್ಯದ ಸಮಯ: ರಾತ್ರಿ 7:00

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News