KL ರಾಹುಲ್ |Photo Credit : PTI  

ವೆಲ್ಲಿಂಗ್ಟನ್: ಆತಿಥೇಯ ನ್ಯೂಝಿಲೆಂಡ್ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ 486 ರನ್ ಗಳಿಸಿದ್ದು, ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ.

ಕೆ.ಎಲ್. ರಾಹುಲ್ ಅವರ ಅಮೋಘ 136 ರನ್‌ಗಳ ಶತಕ, ದೇವದತ್ ಪಡಿಕ್ಕಲ್ (80), ನಾಯಕ ಶುಭಮನ್ ಗಿಲ್ (98) ಹಾಗೂ ರಿಷಭ್ ಪಂತ್ (55*) ಅವರ ಅರ್ಧಶತಕಗಳ ನೆರವಿನಿಂದ ಭಾರತ ಮೊದಲ ಇನಿಂಗ್ಸ್‌ನಲ್ಲಿ 118 ರನ್‌ ಗಳ ಮಹತ್ವದ ಮುನ್ನಡೆ ಗಳಿಸಿದೆ.

ಎರಡನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದ್ದ ಭಾರತಕ್ಕೆ ಕೆ.ಎಲ್. ರಾಹುಲ್ ಹಾಗೂ ದೇವದತ್ ಪಡಿಕ್ಕಲ್ ಉತ್ತಮ ಆಸರೆಯಾದರು. ಕರ್ನಾಟಕದ ಈ ಬ್ಯಾಟಿಂಗ್ ಜೋಡಿ ಎರಡನೇ ವಿಕೆಟ್‌ ಗೆ ಅಮೂಲ್ಯ 165 ರನ್‌ಗಳ ಜೊತೆಯಾಟ ನಡೆಸಿತು.

ಉತ್ತಮ ಲಯದಲ್ಲಿದ್ದ ಪಡಿಕ್ಕಲ್ ಶತಕದತ್ತ ಮುನ್ನಡೆಯುತ್ತಿದ್ದರು. ಆದರೆ, ಹೊಸ ಚೆಂಡಿನಲ್ಲಿ ಅದ್ಭುತ ಎಸೆತ ಹಾಕಿದ ಕೈಲ್ ಜೇಮಿಸನ್ ಅವರನ್ನು ಬೌಲ್ಡ್ ಮಾಡಿದರು. ಈ ಹಂತದಲ್ಲಿ ಭಾರತದ ಮೊತ್ತ ಎರಡು ವಿಕೆಟ್‌ಗೆ 295 ರನ್ ಆಗಿತ್ತು.

ಶತಕ ಗಳಿಸಿದ್ದ ರಾಹುಲ್ ಜೊತೆಗೂಡಿದ ನಾಯಕ ಶುಭಮನ್ ಗಿಲ್, ಆಕ್ರಮಣಕಾರಿ ಹಾಗೂ ರಕ್ಷಣಾತ್ಮಕ ಆಟದ ಸಮನ್ವಯದ ಮೂಲಕ ನ್ಯೂಝಿಲೆಂಡ್ ಬೌಲರ್‌ ಗಳನ್ನು ಕಾಡಿದರು. ಇವರಿಬ್ಬರ ನಡುವೆ 91 ರನ್‌ಗಳ ಜೊತೆಯಾಟ ಮೂಡಿಬಂದಿತು.

136 ರನ್ ಗಳಿಸಿದ್ದ ರಾಹುಲ್, ನಥಾನ್ ಸ್ಮಿತ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಆಗ ಭಾರತದ ಮೊತ್ತ 386 ರನ್ ಆಗಿತ್ತು.

98 ರನ್ ಗಳಿಸಿ ಶತಕದತ್ತ ಸಾಗುತ್ತಿದ್ದ ಗಿಲ್, ಜಾಕೋಬ್ ಡಫ್ಪಿ ಎಸೆದ ದಿನದ ಕೊನೆಯ ಓವರ್‌ನ ನಾಲ್ಕನೇ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಬಳಿಕ ಕ್ರೀಸ್‌ ಗೆ ಬಂದ ಅನ್ಶುಲ್ ಕಾಂಬೋಜ್ ಯಾವುದೇ ಅಪಾಯಕ್ಕೆ ಅವಕಾಶ ನೀಡದೆ ದಿನದಾಟ ಮುಗಿಸಿದರು.

ಮೊದಲ ಇನಿಂಗ್ಸ್‌ ನಲ್ಲಿ ನ್ಯೂಝಿಲೆಂಡ್ 368 ರನ್ ಗಳಿಸಿತ್ತು. ಹೀಗಾಗಿ 118 ರನ್‌ಗಳ ಮುನ್ನಡೆ ಸಾಧಿಸಿರುವ ಭಾರತ, ನಾಲ್ಕನೇ ದಿನವಾದ ನಾಳೆ ಆದಷ್ಟು ಬೇಗ ಇನ್ನಷ್ಟು ರನ್ ಗಳಿಸಿ ನ್ಯೂಝಿಲೆಂಡ್ ಮೇಲೆ ಒತ್ತಡ ಹೇರುವ ಸಾಧ್ಯತೆ ಇದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸದಾನಂದ ಗಂಗನಬೀಡು , ವಾರ್ತಾಭಾರತಿ

contributor