ಹಾಕಿಯಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಡ್ರಾ ಸಾಧಿಸಿದ ಭಾರತ: ಸರಣಿ ಕೈವಶ
Photo Credit ; PTI
ಆಕ್ಲೆಂಡ್, ನ. 22: ಭಾರತ-ನ್ಯೂಝಿಲ್ಯಾಂಡ್ ನಡುವಿನ ಕ್ರೀಡಾ ಏಕತಾ ಶತಮಾನೋತ್ಸವ ಪುರುಷರ ಹಾಕಿ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ರವಿವಾರ 2-2 ಗೋಲುಗಳಿಂದ ಡ್ರಾಗೊಂಡಿದೆ. ಇದರೊಂದಿಗೆ ಭಾರತ ಮೂರು ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿದೆ.
ನ. 19ರಂದು ನಡೆದ ಮೊದಲ ಪಂದ್ಯದಲ್ಲಿ ಭಾರತ 3-2 ಗೋಲುಗಳಿಂದ ಗೆಲುವು ಸಾಧಿಸಿತ್ತು. ಉಳಿದ ಎರಡು ಪಂದ್ಯಗಳು 2-2 ಗೋಲುಗಳಿಂದ ಡ್ರಾಗೊಂಡಿವೆ.
ರವಿವಾರ ಆಕ್ಲೆಂಡ್ ನ ಲಾಯ್ಡ್ ಎಲ್ಸ್ಮೋರ್ ಹಾಕಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ಉತ್ತಮ ಆರಂಭ ಪಡೆಯಿತು. 9ನೇ ನಿಮಿಷದಲ್ಲಿ ಡೈಲನ್ ಥಾಮಸ್ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ತಂಡಕ್ಕೆ ಮುನ್ನಡೆ ಒದಗಿಸಿದರು. 16ನೇ ನಿಮಿಷದಲ್ಲಿ ಭಾರತೀಯ ನಾಯಕ ಸಂಜಯ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿ ಅಂಕವನ್ನು ಸಮಬಲಗೊಳಿಸಿದರು.
ಇದಾದ ಕೇವಲ ಎರಡು ನಿಮಿಷಗಳ ಬಳಿಕ, 18ನೇ ನಿಮಿಷದಲ್ಲಿ ಕಾರ್ತಿ ಸೆಲ್ವಂ ಫೀಲ್ಡ್ ಗೋಲು ಬಾರಿಸಿ ಭಾರತಕ್ಕೆ 2-1ರ ಮುನ್ನಡೆ ತಂದುಕೊಟ್ಟರು.
ಪಂದ್ಯದ ಬಹುಪಾಲು ಸಮಯ ಮುನ್ನಡೆಯನ್ನು ಕಾಯ್ದುಕೊಂಡ ಭಾರತಕ್ಕೆ 55ನೇ ನಿಮಿಷದಲ್ಲಿ ನ್ಯೂಝಿಲ್ಯಾಂಡ್ ಆಘಾತ ನೀಡಿತು. ಬೆಂಜಿ ಕಲ್ಲಾನೆಯ ಫೀಲ್ಡ್ ಗೋಲಿನ ಮೂಲಕ ಆತಿಥೇಯ ತಂಡ ಅಂಕವನ್ನು 2-2ರಿಂದ ಸಮಬಲಗೊಳಿಸಿತು.
ಕೊನೆಯ ಹಂತದಲ್ಲಿ ಗೆಲುವಿನ ಗೋಲು ಗಳಿಸಲು ಉಭಯ ತಂಡಗಳು ತೀವ್ರ ಪ್ರಯತ್ನ ನಡೆಸಿದರೂ ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಪಂದ್ಯ ಡ್ರಾಗೊಂಡಿತು.
ಭಾರತ ಮತ್ತು ನ್ಯೂಝಿಲ್ಯಾಂಡ್ ನಡುವಿನ 100 ವರ್ಷಗಳ ಕ್ರೀಡಾ ಬಾಂಧವ್ಯದ ಸವಿನೆನಪಿಗಾಗಿ ಈ ಮೂರು ಪಂದ್ಯಗಳ ಹಾಕಿ ಸರಣಿಯನ್ನು ಆಯೋಜಿಸಲಾಗಿತ್ತು. 1926ರಲ್ಲಿ ಮೇಜರ್ ಧ್ಯಾನ್ ಚಂದ್ ಅವರನ್ನೊಳಗೊಂಡ ಭಾರತೀಯ ಸೇನೆಯ ಹಾಕಿ ತಂಡ ನ್ಯೂಝಿಲ್ಯಾಂಡ್ ಪ್ರವಾಸ ಕೈಗೊಂಡಿದ್ದ ಐತಿಹಾಸಿಕ ಕ್ಷಣವನ್ನು ಈ ಸರಣಿ ಸ್ಮರಿಸುತ್ತದೆ.