KL ರಾಹುಲ್ | Photo Credit : PTI 

ವೆಲಿಂಗ್ಟನ್: ವೆಲಿಂಗ್ಟನ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶುಕ್ರವಾರ ನ್ಯೂಝಿಲೆಂಡ್ ಆಟಗಾರ ಗ್ಲೆನ್ ಫಿಲಿಪ್ಸ್ ಮಾಡಿದ DSR ಎಡವಟ್ಟಿನ ಸಂಪೂರ್ಣ ಪ್ರಯೋಜನವನ್ನು ಭಾರತೀಯ ಬ್ಯಾಟರ್ ಕೆ.ಎಲ್. ರಾಹುಲ್ ಪಡೆದುಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ, ಫಿಲಿಪ್ಸ್ ಗೆ ಕೆಲವು ಬಾಟಲಿ ಪಾನೀಯವನ್ನು ತೆಗೆಸಿಕೊಡುವುದಾಗಿ ರಾಹುಲ್ ತಮಾಷೆಯಾಗಿ ಹೇಳಿದ್ದಾರೆ.

ಶುಕ್ರವಾರ ರಾಹುಲ್ 5 ರನ್ ಗಳಿಸಿದ್ದಾಗ, ಮ್ಯಾಟ್ ಹೆನ್ರಿಯ ಎಸೆತವೊಂದು ಅವರ ಪ್ಯಾಡ್ ಗೆ ಬಡಿಯಿತು. ಆಗ ಹೆನ್ರಿ ಸೇರಿದಂತೆ ಎಲ್ಲಾ ಫೀಲ್ಡರ್ ಗಳು ಎಲ್ಬಿಡಬ್ಯುಗಾಗಿ ಅಂಪೈರ್ ಗೆ ಮನವಿ ಮಾಡಿದರು. ಆದರೆ, ಆ ಮನವಿಯನ್ನು ಅಂಪೈರ್ ಪುರಸ್ಕರಿಸಲಿಲ್ಲ.

DSR (ಮರುಪರಿಶೀಲನಾ ಮನವಿ)ಗೆ ಮನವಿ ಮಾಡಲು ಫಿಲಿಪ್ಸ್ ಮುಂದಾಗಲಿಲ್ಲ. ಅವರು ‘‘ಚೆಂಡು ಬ್ಯಾಟ್ ಗೆ ತಗುಲಿದೆ, ಬ್ಯಾಟ್ ಗೆ ತಗುಲಿದೆ’’ ಎಂದು ಹೇಳುತ್ತಿರುವುದು ಕೇಳಿಸಿತು. ಅಂತಿಮವಾಗಿ ನ್ಯೂಝಿಲೆಂಡ್ ಮರುಪರಿಶೀಲನೆಗೆ ಮನವಿ ಮಾಡದಿರಲು ನಿರ್ಧರಿಸಿತು.

ಆದರೆ, ರೀಪ್ಲೇನಲ್ಲಿ ಚೆಂಡು ಸ್ಟಂಪ್ ಗಳಿಗೆ ಬಡಿಯುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿತು. ಒಂದು ವೇಳೆ ನ್ಯೂಝಲ್ಯಾಂಡ್ DSR ತೆಗೆದುಕೊಂಡಿದ್ದರೆ ರಾಹುಲ್ ಔಟ್ ಆಗುತ್ತಿದ್ದರು.

ಶನಿವಾರ ದಿನದಾಟದ ನಂತರ ಆ ಉದ್ವಿಗ್ನ ಕ್ಷಣಗಳನ್ನು ನೆನಪಿಸಿಕೊಂಡ ರಾಹುಲ್, ‘‘ಆ ಎಸೆತಕ್ಕೆ ರಿವ್ಯು ತೆಗೆದುಕೊಳ್ಳದ ಕಾರಣಕ್ಕಾಗಿ ಪಂದ್ಯದ ನಂತರ ನಾನು ಗ್ಲೆನ್ ಫಿಲಿಪ್ಸ್ ಗೆ ಕೆಲವು ಡ್ರಿಂಕ್ಸ್ ಕೊಡಿಸುತ್ತೇನೆ. ಅದು ನನ್ನ ಜೀವನದ ಅತ್ಯಂತ ನಿಧಾನವಾಗಿ ಕಳೆದ 15 ಸೆಕೆಂಡುಗಳಾಗಿದ್ದವು. ಎಲ್ಲರೂ ಗ್ಲೆನ್ ಫಿಲಿಪ್ಸ್ ಮಾತನ್ನು ಕೇಳಲಿ ಎಂದು ನಾನು ಆಶಿಸುತ್ತಿದ್ದೆ’’ ಎಂದು ತಮಾಷೆಯಾಗಿ ಹೇಳಿದರು.

►3,000 ಡಬ್ಲ್ಯುಟಿಸಿ ರನ್ ಗಳಿಸಿದ ಶುಭಮನ್, ರಿಶಭ್ ಪಂತ್

ಭಾರತದ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಶುಭಮನ್ ಗಿಲ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯುಟಿಸಿ) ಇತಿಹಾಸದಲ್ಲಿ 3,000 ರನ್ ಪೂರೈಸಿದ ದೇಶದ ಮೊದಲ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ವೆಲಿಂಗ್ಟನ್ ನ ಬೇಸಿನ್ ರಿಸರ್ವ್ನಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನವಾದ ಶನಿವಾರ ಅವರು ಈ ಸಾಧನೆ ಮಾಡಿದರು.

ಅದರ ಬೆನ್ನಿಗೇ, ಸ್ಫೋಟಕ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಕೂಡ ಈ ಮೈಲಿಗಲ್ಲನ್ನು ತಲುಪಿದ ಎರಡನೇ ಭಾರತೀಯ ಆಟಗಾರ ಎನಿಸಿಕೊಂಡರು. 2019ರಲ್ಲಿ ಆರಂಭವಾದ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ, ಈ ಪಂದ್ಯಕ್ಕೂ ಮುನ್ನ ಗಿಲ್ 76 ಇನ್ನಿಂಗ್ಸ್ಗಳಿಂದ 2,917 ರನ್ ಗಳಿಸಿದ್ದರು ಹಾಗೂ ಪಂತ್ ಅವರ ಖಾತೆಯಲ್ಲಿ 2,948 ರನ್ಗಳಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor