×
Ad

ಅಫ್ಘಾನಿಸ್ತಾನದ ವಿರುದ್ಧ ಭಾರತಕ್ಕೆ 6 ವಿಕೆಟ್ ಗಳ ಜಯ

Update: 2024-01-11 22:12 IST
Photo: X/@bcci

ಮೊಹಾಲಿ : ಇಲ್ಲಿನ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನದ ವಿರುದ್ಧದ ಟಿ 20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಶಿವಂ ದುಬೆ ಅವರ ಅರ್ಧ ಶತಕದ ನೆರವಿನಿಂದ ಭಾರತ ತಂಡ ಅಫ್ಘಾನಿಸ್ತಾನವನ್ನು ಮಣಿಸಿತು.

40 ಎಸೆತ ಎದುರಿಸಿದ ಶಿವಂ ದುಬೆ 5 ಬೌಂಡರಿ, 2 ಸಿಕ್ಸರ್ ಸಹಿತ 60 ರನ್ ಭಾರಿಸಿ ಭಾರತ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಗೆಲ್ಲಲು 159 ರನ್ ಗುರಿ ಬೆನ್ನಟ್ಟಿದ ಭಾರತ 17.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಮೊದಲ ಓವರ್‌ನ 2ನೇ ಎಸೆತದಲ್ಲಿ ನಾಯಕ ರೋಹಿತ್ ಶರ್ಮಾ(0) ರನೌಟಾದ ಕಾರಣ ಕಳಪೆ ಆರಂಭ ಪಡೆದಿದ್ದ ಭಾರತ ಶುಭಮನ್ ಗಿಲ್(23 ರನ್)ವಿಕೆಟನ್ನು ಬೇಗನೆ ಕಳೆದುಕೊಂಡಿತು. ತಿಲಕ್ ವರ್ಮಾ 26 ರನ್, ರಿಂಕು ಸಿಂಗ್ ಔಟಾಗದೆ 16 ರನ್ ಗಳಿಸಿದರು.

ಅಫ್ಘಾನಿಸ್ತಾನದ ಪರ ಮುಜೀಬ್ ಉರ್ ರೆಹಮಾನ್(2-21) ಯಶಸ್ವಿ ಬೌಲರ್ ಎನಿಸಿಕೊಂಡರು.

ಅಫ್ಘಾನಿಸ್ತಾನ 158/5 :

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಬಂದ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 158 ರನ್ ಕಲೆ ಹಾಕಿತು. ಅಫ್ಘಾನ್ ತಂಡ ಭಾರತ ವಿರುದ್ಧದ ಟಿ-20 ಪಂದ್ಯದಲ್ಲಿ ಗರಿಷ್ಠ ರನ್ ಗಳಿಸಿದ ಸಾಧನೆ ಮಾಡಿತು. ಈ ಹಿಂದೆ 2021ರಲ್ಲಿ ಅಬುಧಾಬಿಯಲ್ಲಿ ನಡೆದಿದ್ದ ಟಿ-20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧ 7 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತ್ತು.

ಪ್ರವಾಸಿ ತಂಡದ ಪರ ಮುಹಮ್ಮದ್ ನಬಿ ಸರ್ವಾಧಿಕ ಸ್ಕೋರ್ ಗಳಿಸಿದರು. ನಬಿ 27 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್‌ಗಳ ಸಹಿತ 42 ರನ್ ಗಳಿಸಿ ಇನಿಂಗ್ಸ್ ಆಧರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News