ಎಂಟು ತಿಂಗಳಲ್ಲಿ ಮದ್ಯ ಮಾರಾಟದಲ್ಲಿ 24,287ಕೋಟಿ ರೂ.ಆದಾಯ!
ರಾಜ್ಯಾದ್ಯಂತ 14,099 ಮದ್ಯದಂಗಡಿಗಳು ಚಾಲ್ತಿ : ಆರ್.ಬಿ.ತಿಮ್ಮಾಪುರ
ಬೆಳಗಾವಿ : ರಾಜ್ಯದಲ್ಲಿ ಅಬಕಾರಿ ಆದಾಯದ ಪ್ರಮಾಣ ಏರಿಕೆಯಾಗುತ್ತಿದ್ದು, ಪ್ರಸಕ್ತ 2025-26ನೇ ಹಣಕಾಸು ವರ್ಷದ ನವೆಂಬರ್ ಅಂತ್ಯದ ವೇಳೆಗೆ ಸರಕಾರಕ್ಕೆ 24,287 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ತಿಳಿಸಿದ್ದಾರೆ.
ಗುರುವಾರ ವಿಧಾನ ಪರಿಷತ್‍ನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ದಿನೇಶ್ ಗೂಳಿಗೌಡ ಪ್ರಶ್ನೆಗೆ ಉತ್ತರಿಸಿದ ಅವರು, 2024-25ನೇ ಸಾಲಿನಲ್ಲಿ ಒಟ್ಟು ಅಬಕಾರಿ ಆದಾಯ 34,636 ಕೋಟಿ ರೂ. ಆಗಿತ್ತು (ಇದರಲ್ಲಿ 28,852 ಕೋಟಿ ರೂ. ಮೌಲ್ಯದ ಹಾಟ್ ಡ್ರಿಂಕ್ಸ್ ಮತ್ತು ಬಿಯರ್‍ನಿಂದ 5,783 ಕೋಟಿ ರೂ. ಆದಾಯ ಬಂದಿತ್ತು). ಪ್ರಸಕ್ತ ಸಾಲಿನ ನವೆಂಬರ್ 2025ರ ಅಂತ್ಯಕ್ಕೆ ಹಾಟ್ ಡ್ರಿಂಕ್ಸ್ ನಿಂದ 20,614 ಕೋಟಿ ರೂ. ಹಾಗೂ ಬಿಯರ್ ಮಾರಾಟದಿಂದ 3,673 ಕೋಟಿ ರೂ. ಸಂಗ್ರಹವಾಗಿದೆ ಎಂದು ಆರ್.ಬಿ.ತಿಮ್ಮಾಪುರ ಉತ್ತರಿಸಿದರು.
ರಾಜ್ಯದಲ್ಲಿ ಒಟ್ಟು ಎಲ್ಲ ವಿಧವಾದ ಅಬಕಾರಿ ಪರವಾನಗಿಗಳು ಒಟ್ಟು 14,099 ಇವೆ. ಸಿಎಲ್-2(ಚಿಲ್ಲರೆ ಅಂಗಡಿಗಳು) 4,006, ಸಿಎಲ್-7(ಹೋಟೆಲ್ ಮತ್ತು ವಸತಿಗೃಹ) 3,472, ಸಿಎಲ್-9(ಬಾರ್ ಮತ್ತು ರೆಸ್ಟೋರೆಂಟ್) 3,652, ಸಿಎಲ್-11ಸಿ(ಎಂ.ಎಸ್.ಐ.ಎಲ್)1,077 ಸನ್ನದುಗಳು ಚಾಲ್ತಿಯಲ್ಲಿವೆ ಎಂದು ಆರ್.ಬಿ.ತಿಮ್ಮಾಪುರ ತಿಳಿಸಿದರು.
ಮದ್ಯದ ಮಾರಾಟದ ಅಂಕಿ-ಅಂಶಗಳನ್ನು ಗಮನಿಸಿದರೆ, 2024-25ರಲ್ಲಿ 708 ಲಕ್ಷ ಕೇಸ್ ಹಾಟ್ ಡ್ರಿಂಕ್ಸ್ ಹಾಗೂ 450 ಲಕ್ಷ ಕೇಸ್ ಬಿಯರ್ ಮಾರಾಟವಾಗಿತ್ತು. 2025-26ರ ನವೆಂಬರ್ ಅಂತ್ಯಕ್ಕೆ 458 ಲಕ್ಷ ಕೇಸ್ ಹಾಟ್ ಡ್ರಿಂಕ್ಸ್ ಹಾಗೂ 257 ಲಕ್ಷ ಕೇಸ್ ಬಿಯರ್ ಮಾರಾಟವಾಗಿದೆ ಎಂದು ಆರ್.ಬಿ.ತಿಮ್ಮಾಪುರ ವಿವರಿಸಿದರು.