ಪ್ಯಾರಿಸ್ ಒಲಿಂಪಿಕ್ಸ್ ಗಿಂತಲೂ ದೊಡ್ಡದು ಜಪಾನ್ ಏಶ್ಯನ್ ಗೇಮ್ಸ್
Photo Credit : PTI
ಟೋಕಿಯೊ, ಸೆ. 19: ಜಪಾನಿನ ಐಚಿ–ನಗೋಯಾದಲ್ಲಿ ಶನಿವಾರ ಏಶ್ಯನ್ ಗೇಮ್ಸ್ ಅಧಿಕೃತವಾಗಿ ಆರಂಭಗೊಂಡಿದೆ. ಕ್ರೀಡಾಪಟುಗಳ ಭಾಗವಹಿಸುವಿಕೆಯ ವಿಷಯದಲ್ಲಿ ಇದು ಪ್ಯಾರಿಸ್ ಒಲಿಂಪಿಕ್ಸ್‌ಗಿಂತಲೂ ದೊಡ್ಡ ಕ್ರೀಡಾಕೂಟವಾಗಿದೆ. ಒಲಿಂಪಿಕ್ಸ್‌ಗಿಂತ ಭಿನ್ನವಾದ ಕಾರ್ಯಕ್ರಮವನ್ನೂ ಇದು ಒಳಗೊಂಡಿದೆ.
2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸುಮಾರು 10,700 ಕ್ರೀಡಾಪಟುಗಳು ಭಾಗವಹಿಸಿದ್ದರು. 20ನೇ ಏಶ್ಯನ್ ಗೇಮ್ಸ್‌ನಲ್ಲಿ 11,000ಕ್ಕೂ ಅಧಿಕ ಕ್ರೀಡಾಪಟುಗಳು ಸ್ಪರ್ಧಿಸುವ ನಿರೀಕ್ಷೆ ಇದೆ. ಭಾಗವಹಿಸುವ ಕ್ರೀಡಾಪಟುಗಳ ಸಂಖ್ಯೆಯ ದೃಷ್ಟಿಯಿಂದ ಈ ಕ್ರೀಡಾಕೂಟವು ಮತ್ತೊಮ್ಮೆ ಒಲಿಂಪಿಕ್ಸ್ ಅನ್ನು ಮೀರಿಸಿದೆ.
ಏಶ್ಯನ್ ಗೇಮ್ಸ್ ಆಯೋಜಕರು ಕ್ರೀಡಾಪಟುಗಳ ಅಂತಿಮ ಅಧಿಕೃತ ಸಂಖ್ಯೆಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಆದರೆ, 11,000ಕ್ಕೂ ಅಧಿಕ ಕ್ರೀಡಾಪಟುಗಳು ನೋಂದಾಯಿಸಿಕೊಂಡಿದ್ದಾರೆ. ಭಾಗವಹಿಸುವ ಕ್ರೀಡಾಪಟುಗಳ ಸಂಖ್ಯೆಯು ಅಂತಿಮವಾಗಿ 2023ರ ಏಶ್ಯನ್ ಕ್ರೀಡಾಕೂಟದ ಸಂಖ್ಯೆಯನ್ನು ತಲುಪಬಹುದು. ಅಲ್ಲಿ ಸುಮಾರು 12,000 ಕ್ರೀಡಾಪಟುಗಳು ಸ್ಪರ್ಧಿಸಿದ್ದರು.
ಜಪಾನ್ ಅತಿದೊಡ್ಡ ತಂಡವನ್ನು (933 ಕ್ರೀಡಾಪಟುಗಳು) ಹೊಂದಿದೆ. ಚೀನಾ 815 ಕ್ರೀಡಾಪಟುಗಳನ್ನು ಕಳುಹಿಸುತ್ತಿದೆ. ಹಾಂಕಾಂಗ್ ಸುಮಾರು 7.5 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದ್ದರೂ, ಅಲ್ಲಿಂದ ಸುಮಾರು 580 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಚೀನಾ ಹಿಂದಿನ ಆವೃತ್ತಿಯ ಗೇಮ್ಸ್‌ನಲ್ಲಿ 201 ಚಿನ್ನದ ಪದಕಗಳನ್ನು ಜಯಿಸಿತ್ತು. ನಂತರದ ಸ್ಥಾನಗಳಲ್ಲಿ ಜಪಾನ್ (52 ಪದಕಗಳು) ಹಾಗೂ ದಕ್ಷಿಣ ಕೊರಿಯಾ (42 ಪದಕಗಳು) ಇದ್ದವು. ಭಾರತ 28 ಚಿನ್ನ ಗೆದ್ದು ನಾಲ್ಕನೇ ಸ್ಥಾನ ಪಡೆದಿತ್ತು.
ರವಿವಾರ ಕ್ರೀಡಾಕೂಟದ ಮೊದಲ ಚಿನ್ನದ ಪದಕ ನಿರೀಕ್ಷಿಸಲಾಗಿದೆ. ಟ್ರಯಥ್ಲಾನ್ ಮೊದಲ ಚಾಂಪಿಯನ್ ಅನ್ನು ನೀಡಲಿದೆ.