ರಾಜ್‌ಕೋಟ್: ರಾಜ್‌ಕೋಟ್‌ನಲ್ಲಿ ಶುಕ್ರವಾರ ನಡೆದ ಮಳೆ ಬಾಧಿತ ಮೊದಲ ಯುವ ಏಕದಿನ ಪಂದ್ಯದಲ್ಲಿ, ಭಾರತ ಅಂಡರ್-19 ತಂಡವು ಆಸ್ಟ್ರೇಲಿಯ ಅಂಡರ್-19 ತಂಡವನ್ನು 7 ರನ್‌ಗಳಿಂದ ಸೋಲಿಸಿದೆ. ಅನ್ವಯ್ ದ್ರಾವಿಡ್ ಅವರ ಬಿರುಸಿನ ಬ್ಯಾಟಿಂಗ್ ಮತ್ತು ಯಶವರ್ಧನ್ ಚೌಹಾಣ್ ಅವರ ಅರ್ಧಶತಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವು.

ನಿರಂಜನ್ ಶಾ ಕ್ರೀಡಾಂಗಣದಲ್ಲಿ ಮಳೆಯ ಅಡಚಣೆಯಿಂದಾಗಿ ಪಂದ್ಯವನ್ನು ತಲಾ 20 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು.

ಆಸ್ಟ್ರೇಲಿಯ ನಾಯಕ ಜ್ಯಾಕ್ ಝೋಸ್ನೆಕ್ ಟಾಸ್ ಗೆದ್ದು ಭಾರತವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿದರು. ಭಾರತವು 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಚೌಹಾಣ್ 34 ಎಸೆತಗಳಲ್ಲಿ 54 ರನ್ ಗಳಿಸಿದರೆ, ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ಕೇವಲ 18 ಎಸೆತಗಳಲ್ಲಿ 38 ರನ್ ಸಿಡಿಸಿದರು.

ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ ಅವರಿಗೆ ಇದು ಭಾರತ ಅಂಡರ್-19 ಪರ ಚೊಚ್ಚಲ ಪಂದ್ಯವಾಗಿತ್ತು. ಇನಿಂಗ್ಸ್ ಆರಂಭಿಸಿದ ಆರ್ಯವೀರ್ 5 ಬೌಂಡರಿಗಳ ನೆರವಿನಿಂದ 26 ಎಸೆತಗಳಲ್ಲಿ 28 ರನ್ ಗಳಿಸಿದರು. ಮಗನ ಆಟವನ್ನು ವೀಕ್ಷಿಸಲು ತಂದೆ ವೀರೇಂದ್ರ ಸೆಹ್ವಾಗ್ ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದರು.

ಗೆಲುವಿಗೆ 183 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯ ತಂಡಕ್ಕೆ ಆರಂಭಿಕರಾದ ನೀಲ್ ಪಟೇಲ್ ಮತ್ತು ಹೇಡನ್ ಬಾರ್ಬುಲೋವಿಕ್ ಉತ್ತಮ ಆರಂಭ ನೀಡಿದರು. ಪಟೇಲ್ 31 ಎಸೆತಗಳಲ್ಲಿ 45 ರನ್ ಗಳಿಸಿದರೆ, ಬಾರ್ಬುಲೋವಿಕ್ 24 ಎಸೆತಗಳಲ್ಲಿ 40 ರನ್ ಗಳಿಸಿದರು. ನಂತರ ನಾಯಕ ಜ್ಯಾಕ್ ಝೋಸ್ನೆಕ್ ಕೇವಲ 27 ಎಸೆತಗಳಲ್ಲಿ 55 ರನ್ ಸಿಡಿಸಿ ತಂಡವನ್ನು ಗೆಲುವಿನ ಹಾದಿಯಲ್ಲೇ ಉಳಿಸಿದ್ದರು.

ಆದರೆ 19ನೇ ಓವರ್‌ನಲ್ಲಿ ಝೋಸ್ನೆಕ್ ಔಟಾಗುವುದರೊಂದಿಗೆ ಆಸ್ಟ್ರೇಲಿಯದ ಗೆಲುವಿನ ನಿರೀಕ್ಷೆ ಹುಸಿಯಾಯಿತು. ಆಸ್ಟ್ರೇಲಿಯಕ್ಕೆ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 175 ರನ್‌ಗಳನ್ನು ಗಳಿಸಲಷ್ಟೇ ಸಾಧ್ಯವಾಯಿತು.

ಬೌಲಿಂಗ್‌ನಲ್ಲೂ ಮಿಂಚಿದ ಚೌಹಾಣ್ 4 ಓವರ್‌ಗಳಲ್ಲಿ 28 ರನ್ ನೀಡಿ 2 ವಿಕೆಟ್ ಕಬಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor