ಕ್ರಿಕೆಟ್ ವೃತ್ತಿಬದುಕಿಗೆ ಇಂದು ರಾತ್ರಿ ಚೆಪಾಕ್ ಕ್ರೀಡಾಂಗಣದಲ್ಲಿ ಧೋನಿ ಗುಡ್ ಬೈ?
ಕ್ರಿಕೆಟ್ ದಿಗ್ಗಜ ಇಂದೇ ಕೊನೆ ಪಂದ್ಯ ಆಡುವ ಸಾಧ್ಯತೆ
ಮಹೇಂದ್ರ ಸಿಂಗ್ ಧೋನಿ (Photo: PTI)
ಚೆನ್ನೈ: ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಿಗೆ ಈ ಬಾರಿಯ ಐಪಿಎಲ್ ಲೀಗ್ ಹಂತದಲ್ಲಿ ಇನ್ನು ಎರಡು ಪಂದ್ಯಗಳು ಮಾತ್ರ ಬಾಕಿ ಉಳಿದಿದ್ದು, ಇಂದು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಈ ಪೈಕಿ ಮೊದಲ ಪಂದ್ಯವಾಡಲಿದೆ. ಇದು ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ತವರಿನಲ್ಲಿ ಕೊನೆಯ ಲೀಗ್ ಪಂದ್ಯವಾಗಿದೆ.
ಲೀಗ್ ಹಂತದಲ್ಲಿ ಇನ್ನು ಕೇವಲ ಎರಡು ಪಂದ್ಯಗಳು ಮಾತ್ರ ಬಾಕಿ ಉಳಿದಿದ್ದರೂ, ಮಹೇಂದ್ರ ಸಿಂಗ್ ಧೋನಿ ಈವರೆಗೆ ಒಂದೂ ಲೀಗ್ ಪಂದ್ಯವನ್ನಾಡಿಲ್ಲ. ಹೀಗಾಗಿ, ಈ ಪಂದ್ಯದಲ್ಲಾದರೂ ಮಹೇಂದ್ರ ಸಿಂಗ್ ಧೋನಿ ಆಡಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಮೇಲಾಗಿ ಈ ಪಂದ್ಯದ ಬಳಿಕ ಅವರು ತಮ್ಮ ಐಪಿಎಲ್ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಅವರು ಮೈದಾನಕ್ಕಿಳಿಯಬಹುದು ಎಂಬ ಭಾರಿ ನಿರೀಕ್ಷೆ ಇದೆ.
ಐದು ವರ್ಷಗಳ ಹಿಂದೆ ತಮ್ಮ ನಿವೃತ್ತಿಯ ಕುರಿತು ಸುಳಿವು ನೀಡಿದ್ದ ಮಹೇಂದ್ರ ಸಿಂಗ್ ಧೋನಿ, “ನಾನು ನನ್ನ ಕ್ರಿಕೆಟ್ ಜೀವನವನ್ನು ಯಾವಾಗಲೂ ಯೋಜಿಸಿದ್ದೇನೆ. ನನ್ನ ಕೊನೆಯ ಏಕದಿನ ಪಂದ್ಯ ನನ್ನ ತವರು ನೆಲವಾದ ರಾಂಚಿಯಲ್ಲಿ ನಡೆದಿತ್ತು. ಅದೇ ರೀತಿ, ನನ್ನ ಕೊನೆಯ ಟಿ-20 ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. ಅದು ಮುಂದಿನ ವರ್ಷವೊ ಅಥವಾ ಇನ್ನು ಐದು ವರ್ಷದ ಬಳಿಕವೊ ನನಗೆ ತಿಳಿದಿಲ್ಲ” ಎಂದು ಸೂಚ್ಯವಾಗಿ ಹೇಳಿದ್ದರು.
ಇಂದು ಸನ್ ರೈಸರ್ಸ್ ಹೈದರಾಬಾದ್ ನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿದೆ. ಅವರ ನಿವೃತ್ತಿಯ ಬಳಿಕ ಯಾವ ಪಂದ್ಯವೂ ಚೆನ್ನೈನಲ್ಲಿ ನಿಗದಿಯಾಗಿಲ್ಲ. ಹೀಗಾಗಿ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ತವರು ಸ್ಥಳವಾದ ಚೆಪಾಕ್ ಕ್ರೀಡಾಂಗಣದಲ್ಲಿ ಇಂದು ರಾತ್ರಿ ನಡೆಯಲಿರುವ ಪಂದ್ಯ ಧೋನಿಯ ಕೊನೆಯ ಪಂದ್ಯವಾಗುವ ಸಾಧ್ಯತೆ ಇದೆ ಎಂದು ಬಲವಾಗಿ ನಂಬಲಾಗಿದೆ.