ಜೇಮ್ಸ್ ರೊಡ್ರಿಗಸ್ | Photo Credit : AP 

ಬೊಗೊಟಾ: ಕೊಲಂಬಿಯಾ ರಾಷ್ಟ್ರೀಯ ತಂಡವನ್ನು 15 ವರ್ಷಗಳ ಕಾಲ ಪ್ರತಿನಿಧಿಸಿದ್ದ ಸ್ಟಾರ್ ಆಟಗಾರ ಜೇಮ್ಸ್ ರೊಡ್ರಿಗಸ್ ಮಂಗಳವಾರ ಅಂತರ್‌ರಾಷ್ಟ್ರೀಯ ಫುಟ್ಬಾಲ್‌ನಿಂದ ನಿವೃತ್ತಿ ಘೋಷಿಸಿದರು.

2014ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ‘ಗೋಲ್ಡನ್ ಬೂಟ್’ ಪ್ರಶಸ್ತಿಗೆ ಆಯ್ಕೆಯಾಗಿದ್ದ 35ರ ವಯಸ್ಸಿನ ರೊಡ್ರಿಗಸ್ ಇತ್ತೀಚೆಗೆ ಉತ್ತರ ಅಮೆರಿಕದಲ್ಲಿ ನಡೆದಿದ್ದ ಫಿಫಾ ವಿಶ್ವಕಪ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. ತನ್ನ ದೇಶದ ಪರ 131 ಪಂದ್ಯಗಳನ್ನು ಆಡಿದ ರೊಡ್ರಿಗಸ್ 31 ಗೋಲು ಹಾಗೂ 43 ಅಸಿಸ್ಟ್ ಮಾಡಿದ್ದರು. ಕೊಲಂಬಿಯಾದ ಪರ ಅತಿ ಹೆಚ್ಚು ಪಂದ್ಯವನ್ನಾಡಿದ ನಂತರ ರೊಡ್ರಿಗಸ್ ಇದೀಗ ತನ್ನ 10ನೇ ಕ್ರಮಾಂಕದ ಜರ್ಸಿಗೆ ವಿದಾಯ ಹೇಳಿದ್ದಾರೆ.

‘‘ಅನೇಕ ವರ್ಷಗಳು, ಪಂದ್ಯಗಳು, ಸಂತೋಷದ ಕ್ಷಣಗಳು ಹಾಗೂ ಕಠಿಣ ಸನ್ನಿವೇಶಗಳ ನಂತರ ನನ್ನ ಜೀವನದ ಒಂದು ಅಧ್ಯಾಯವನ್ನು, ಕೊಲಂಬಿಯಾ ರಾಷ್ಟ್ರೀಯ ತಂಡದೊಂದಿಗಿನ ನನ್ನ ಪಯಣವನ್ನು ಮುಕ್ತಾಯಗೊಳಿಸುವ ಸಮಯ ಬಂದಿದೆ ಎಂದು ನನಗನಿಸುತ್ತಿದೆ’’ ಎಂದು ರೊಡ್ರಿಗಸ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವೀಡಿಯೊದಲ್ಲಿ ಹೇಳಿದ್ದಾರೆ.

‘‘ಕೊಲಂಬಿಯಾ ತಂಡದ ಜರ್ಸಿ ಧರಿಸುವುದು ನನ್ನ ಕನಸಾಗಿತ್ತು. ಅದೇ ರೀತಿ ಅದೊಂದು ದೊಡ್ಡ ಜವಾಬ್ದಾರಿಯೂ ಆಗಿತ್ತು’’ಎಂದು ರೊಡ್ರಿಗಸ್ ಹೇಳಿದ್ದಾರೆ.

ರೊಡ್ರಿಗಸ್ 2011ರಲ್ಲಿ ಬೊಲಿವಿಯಾ ವಿರುದ್ಧ ಕೊಲಂಬಿಯಾ ತಂಡದ ಪರ ತನ್ನ ಚೊಚ್ಚಲ ಪಂದ್ಯವನ್ನು ಆಡಿದ್ದರು. ಗೆಲುವಿನ ಗೋಲು ಗಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. 2014, 2018 ಹಾಗೂ 2026ರ ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ್ದರು. 2022ರಲ್ಲಿ ಖತರ್‌ನಲ್ಲಿ ನಡೆದಿದ್ದ ವಿಶ್ವಕಪ್‌ಗೆ ಕೊಲಂಬಿಯಾ ತಂಡವು ಅರ್ಹತೆ ಪಡೆದಿರಲಿಲ್ಲ.

2026ರ ವಿಶ್ವಕಪ್‌ನಲ್ಲಿ ಜುಲೈ 7ರಂದು ಸ್ವಿಟ್ಸರ್‌ಲ್ಯಾಂಡ್ ವಿರುದ್ಧದ ಅಂತಿಮ-16 ಪಂದ್ಯದಲ್ಲಿ ಕೊಲಂಬಿಯಾ ತಂಡದ ಪರ ಕೊನೆಯ ಬಾರಿ ಆಡಿದ್ದಾರೆ.

ರೊಡ್ರಿಗಸ್ 2024ರ ಕೊಪಾ ಅಮೆರಿಕ ಫೈನಲ್‌ನಲ್ಲಿ ಕೊಲಂಬಿಯಾ ತಂಡದ ನಾಯಕತ್ವ ವಹಿಸಿದ್ದರು. ಆ ಪಂದ್ಯವನ್ನು ಅರ್ಜೆಂಟೀನ ತಂಡವು ಹೆಚ್ಚುವರಿ ಸಮಯದಲ್ಲಿ 1-0 ಅಂತರದಿಂದ ಗೆದ್ದುಕೊಂಡಿತ್ತು. ಕೊಲಂಬಿಯಾವು 23 ವರ್ಷಗಳ ನಂತರ ಕೊಪಾ ಅಮೆರಿಕ ಟೂರ್ನಿಯಲ್ಲಿ ಫೈನಲ್‌ನಲ್ಲಿ ಆಡಿತ್ತು. ರೊಡ್ರಿಗಸ್ ಸೀನಿಯರ್ ಇಂಟರ್‌ನ್ಯಾಶನಲ್ ಟ್ರೋಫಿ ಇಲ್ಲದೆ ತನ್ನ ವೃತ್ತಿ ಬದುಕು ಕೊನೆಗೊಳಿಸಿದ್ದಾರೆ.

2014ರ ವಿಶ್ವಕಪ್ ಟೂರ್ನಿಯಲ್ಲಿ ಐದು ಪಂದ್ಯಗಳಲ್ಲಿ ಆರು ಗೋಲುಗಳನ್ನು ಗಳಿಸಿ ‘ಗೋಲ್ಡನ್ ಬೂಟ್’ ಪ್ರಶಸ್ತಿ ಗೆದ್ದ ನಂತರ ಮೊನಾಕೊ ಕ್ಲಬ್ ತೊರೆದು ರಿಯಲ್ ಮ್ಯಾಡ್ರಿಡ್ ಎಫ್‌ಸಿಗೆ ಸೇರಿದ್ದರು. ಎಫ್‌ಸಿ ಪರ ಎರಡು ಬಾರಿ ಲಾ ಲಿಗ ಪ್ರಶಸ್ತಿಗಳನ್ನು ಗೆದ್ದಿದ್ದರು. ಎರಡು ಬಾರಿ ಚಾಂಪಿಯನ್ ಲೀಗ್ ಪ್ರಶಸ್ತಿ ಗೆದ್ದಿದ್ದಾರೆ. ಬೆಯರ್ನ್ ಮ್ಯೂನಿಚ್ ಹಾಗೂ ಎವರ್ಟನ್‌ನಲ್ಲೂ ಸ್ವಲ್ಪ ಸಮಯ ಕಳೆದಿದ್ದರು.

‘‘ನಂಬರ್ 10 ಜರ್ಸಿ ಹಾಗೂ ನಾಯಕನ ಆರ್ಮ್‌ಬ್ಯಾಂಡ್ ಧರಿಸುವ ಗೌರವ ನನಗೆ ಲಭಿಸಿತ್ತು. ಕೊಲಂಬಿಯಾ ಏನನ್ನು ಪ್ರತಿನಿಧಿಸುತ್ತದೆ ಎಂಬುದರ ಅರಿವಿನೊಂದಿಗೆ ಗೌರವ ಹಾಗೂ ಜವಾಬ್ದಾರಿಯೊಂದಿಗೆ ಅದನ್ನು ನಿಭಾಯಿಸಲು ನಾನು ಪ್ರಯತ್ನಿಸಿದ್ದೆ. ನನ್ನ ಪಾಲಿಗೆ ಒಳ್ಳೆಯ ದಿನಗಳೂ ಇದ್ದವು. ಕಠಿಣ ದಿನಗಳೂ ಇದ್ದವು. ಆದರೆ ತಂಡದ ಜರ್ಸಿಯ ಬಣ್ಣಗಳ ಬಗ್ಗೆ ಹೆಮ್ಮೆಪಡುವುದನ್ನು ನಾನು ಎಂದಿಗೂ ನಿಲ್ಲಿಸಲಿಲ್ಲ’’ಎಂದು ಕೊಲಂಬಿಯಾದ ಲೆಜೆಂಡ್ ರೊಡ್ರಿಗಸ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor