ಜೋಸ್ ಬಟ್ಲರ್ | Photo Credit : PTI 

ಲಂಡನ್: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾರ ದಾಖಲೆಯನ್ನು ಮುರಿದ ಇಂಗ್ಲೆಂಡ್‌ನ ವಿಕೆಟ್‌ಕೀಪರ್-ಬ್ಯಾಟರ್ ಜೋಸ್ ಬಟ್ಲರ್ ಪುರುಷರ ಟಿ-20 ಕ್ರಿಕೆಟ್‌ನಲ್ಲಿ ಎರಡನೇ ಗರಿಷ್ಠ ರನ್ ಸ್ಕೋರರ್ ಆಗಿ ಹೊರಹೊಮ್ಮಿದರು. ಇದರೊಂದಿಗೆ ತಮ್ಮ ಯಶಸ್ವಿ ವೃತ್ತಿಜೀವನದಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲು ತಲುಪಿದರು.

ಶ್ರೀಲಂಕಾದ ವಿರುದ್ಧ ಸೌತಾಂಪ್ಟನ್‌ನಲ್ಲಿ ಮಂಗಳವಾರ ನಡೆದ ಮೊದಲ ಟಿ-20 ಪಂದ್ಯದ ವೇಳೆ ಬಟ್ಲರ್ ಈ ಸಾಧನೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು 119 ರನ್‌ಗಳಿಂದ ಜಯಶಾಲಿಯಾಗಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಲಂಕಾದ ವಿರುದ್ಧ 44 ಎಸೆತಗಳಲ್ಲಿ 80 ರನ್ ಗಳಿಸಿರುವ ಬಟ್ಲರ್ 161 ಪಂದ್ಯಗಳಿಂದ 34.33ರ ಸರಾಸರಿಯಲ್ಲಿ ಎರಡು ಶತಕ ಹಾಗೂ 29 ಅರ್ಧಶತಕಗಳ ಸಹಿತ 4,292 ರನ್ ಕಲೆ ಹಾಕಿದರು. ಇದರೊಂದಿಗೆ ರೋಹಿತ್(4,231 ರನ್)ದಾಖಲೆಯನ್ನು ಮುರಿದರು. ಸಾರ್ವಕಾಲಿಕ ಶ್ರೇಷ್ಠ ಟಿ-20 ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದರು.

ಪಾಕಿಸ್ತಾನದ ಬ್ಯಾಟರ್ ಬಾಬರ್ ಆಝಂ 145 ಪಂದ್ಯಗಳಲ್ಲಿ 38.94ರ ಸರಾಸರಿಯಲ್ಲಿ 4,596 ರನ್ ಗಳಿಸಿ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

ಬಟ್ಲರ್ ಇನಿಂಗ್ಸ್‌ನಲ್ಲಿ 8 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳಿದ್ದವು. ಕೇವಲ 29 ಎಸೆತಗಳಲ್ಲಿ ತನ್ನ ಅರ್ಧಶತಕ ಪೂರೈಸಿದರು. ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ಅವರೊಂದಿಗೆ ಕೈಜೋಡಿಸಿದ ಬಟ್ಲರ್ ಶ್ರೀಲಂಕಾ ತಂಡಕ್ಕೆ ಒತ್ತಡ ಹೇರಿದರು. ಈ ಜೋಡಿಯ ಎರಡನೇ ವಿಕೆಟ್‌ಗೆ 128 ರನ್ ಸೇರಿಸಿತು. ಈ ಹಿಂದೆ ಇಂಗ್ಲೆಂಡ್ ಆಡಿರುವ ಟಿ-20 ಪಂದ್ಯದಲ್ಲಿ ದಾಖಲೆಯ 233 ರನ್ ಜೊತೆಯಾಟ ನಡೆಸಿದ್ದ ಬಟ್ಲರ್ ಭರ್ಜರಿ ಜೊತೆಯಾಟ ಮುಂದುವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor