ಪ್ರೀತಿ ಪವಾರ್ ಮತ್ತು ಜೈಸ್ಮಿನ್ (Photo: X) 

ಗ್ಲಾಸ್ಗೊ: ಹಾಲಿ ವಿಶ್ವ ಚಾಂಪಿಯನ್ ಜೈಸ್ಮಿನ್ ಲ್ಯಾಂಬೋರಿಯಾಹಾಗೂ ಪ್ರೀತಿ ಪವಾರ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಹಿಳೆಯರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಸ್ವರ್ಣದ ಪದಕ ಗೆದ್ದಿದ್ದಾರೆ.

ಶನಿವಾರ ನಡೆದ ಮಹಿಳೆಯರ 57 ಕೆಜಿ ತೂಕ ವಿಭಾಗದ ಬಾಕ್ಸಿಂಗ್ ಸ್ಪರ್ಧೆಯ ಫೈನಲ್‌ನಲ್ಲಿ ಜೈಸ್ಮೀನ್ ಅವರು ಉತ್ತರ ಐರ್‌ಲ್ಯಾಂಡ್‌ನ ಮೈಕೆಲಾ ವಾಲ್ಶ್‌ರನ್ನು 5-0 ಅಂತರದಿಂದ ಒಮ್ಮತದ ತೀರ್ಪಿನಲ್ಲಿ ಸದೆಬಡಿದರು.

ಹಾಲಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ವಾಲ್ಶ್ ವಿರುದ್ದ ಅತ್ಯುತ್ತಮ ಪ್ರದರ್ಶನ ನೀಡಿದ ಜೈಸ್ಮಿನ್ ಅವರು ಪ್ರಸಕ್ತ ಗೇಮ್ಸ್‌ನಲ್ಲಿ ಭಾರತದ ಖಾತೆಗೆ ಏಳನೇ ಚಿನ್ನದ ಪದಕ ಜಮೆ ಮಾಡಿದರು.

ಮಹಿಳೆಯರ 54 ಕೆಜಿ ತೂಕ ವಿಭಾಗದ ಬಾಕ್ಸಿಂಗ್ ಸ್ಪರ್ಧೆಯ ಫೈನಲ್‌ನಲ್ಲಿ ಪ್ರೀತಿ ಪವಾರ್ ಕೆನಡಾದ ಸ್ಕಾರ್‌ಲೆಟ್ ಡೆಲ್ಗಾಡೊರನ್ನು ಒಮ್ಮತದ ತೀರ್ಪಿನಲ್ಲಿ ಮಣಿಸಿದರು.

ಭಾರತೀಯ ಬಾಕ್ಸರ್ ಅರಂಭದಲ್ಲೇ ಸ್ಪರ್ಧೆಯ ಮೇಲೆ ಹಿಡಿತ ಸಾಧಿಸಿದರು. ಅತ್ಯುತ್ತಮ ನಿಖರತೆ, ಹಿಡಿತ ಹಾಗೂ ರಿಂಗ್ ಕ್ರಾಫ್ಟ್ ಅನ್ನು ಪ್ರದರ್ಶಿಸಿದರು. ಈ ಮೂಲಕ ಗೇಮ್ಸ್‌ನ 10ನೇ ದಿನವಾದ ಶನಿವಾರ ಭಾರತಕ್ಕೆ ಆರಂಭದಲ್ಲೇ ಚಿನ್ನದ ಪದಕ ಗೆದ್ದುಕೊಟ್ಟರು.

ಡೆಲ್ಗಾಡೊ ಉತ್ತಮ ಆರಂಭ ಪಡೆದಿದ್ದು, ಕೆಲವು ಪಂಚ್‌ಗಳ ಮೂಲಕ ಭಾರತೀಯ ಬಾಕ್ಸರ್‌ರನ್ನು ಪರೀಕ್ಷಿಸಿದರು. ಆದರೆ ಪ್ರೀತಿ ತಕ್ಷಣವೇ ತನ್ನ ಲಯವನ್ನು ಕಂಡುಕೊಂಡರು. ಸ್ಪರ್ಧೆಯ ಮೇಲೆ ಹಿಡಿತ ಸಾಧಿಸಿದರು. ಸ್ಪರ್ಧೆ ಮುಂದುವರಿದಂತೆ ಪ್ರಾಬಲ್ಯ ಮೆರೆದರು. ಪರಿಣಾಮವಾಗಿ ಐವರು ತೀರ್ಪುಗಾರರು ಮೊದಲ ಸುತ್ತಿನಲ್ಲಿ ಪ್ರೀತಿ ಪರ ತೀರ್ಪು ನೀಡಿದರು.

ಎರಡನೇ ಸುತ್ತಿನಲ್ಲೂ 5-0 ಮುನ್ನಡೆ ಪಡೆದ ಪ್ರೀತಿ ಕೊನೆಯ ಸುತ್ತಿನಲ್ಲಿ ಇದರ ಲಾಭ ಪಡೆದರು. ಕೊನೆಯ ಗಂಟೆ ಮೊಳಗಿದಾಗ ಪ್ರೀತಿ ಒಮ್ಮತದ ತೀರ್ಪಿನಲ್ಲಿ ವಿಜಯಶಾಲಿ ಎಂದು ಘೋಷಿಸಲ್ಪಟ್ಟರು.

ಜಾದುಮಣಿಗೆ ಬೆಳ್ಳಿ:

ಭಾರತದ ಬಾಕ್ಸರ್ ಜಾದುಮಣಿ ಸಿಂಗ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಶನಿವಾರ ನಡೆದ ಬಾಕ್ಸಿಂಗ್ ಫೈನಲ್‌ನಲ್ಲಿ ಸೋಲನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಜಾದುಮಣಿ ಪುರುಷರ 55 ಕೆಜಿ ತೂಕ ವಿಭಾಗದಲ್ಲಿ ಆಸ್ಟ್ರೇಲಿಯದ ಐ ಡಿಕ್ಸೊನ್ ವಿರುದ್ಧ ಸೋತಿದ್ದಾರೆ.

ಜಾದುಮಣಿ ಹಾಗೂ ಡಿಕ್ಸೋನ್ ನಡುವೆ ಮೊದಲ ಸುತ್ತಿನಲ್ಲಿ ನಿಕಟ ಪೈಪೋಟಿ ಕಂಡುಬಂತು. ಜಾದುಮಣಿ ಆರಂಭಿಕ ಮೇಲುಗೈ ಸಾಧಿಸಿದರು. ಆಸ್ಟ್ರೇಲಿಯದ ಬಾಕ್ಸರ್ ಎರಡನೇ ಸುತ್ತಿನಲ್ಲಿ ಪ್ರಬಲ ಪ್ರತಿಹೋರಾಟ ನೀಡಿದರು.ಅಂತಿಮವಾಗಿ 5-0 ಅಂತರದಿಂದ ಎರಡನೇ ಸುತ್ತು ಗೆದ್ದುಕೊಂಡರು.

ಸ್ಪರ್ಧೆಯು ಸಮತೋಲನದಲ್ಲಿದ್ದಾಗ ಮೂರನೇ ಹಾಗೂ ಕೊನೆಯ ಸುತ್ತಿನಲ್ಲಿ ಜಾದುಮಣಿ ಮುನ್ನಡೆ ಸಾಧಿಸಲು ಯತ್ನಿಸಿದರು. ಆದರೆ ಡಿಕ್ಸೋನ್ ನಿಖರ ಪಂಚ್‌ಗಳನ್ನೇ ಅವಲಂಬಿತವಾಗಿ ಅನಗತ್ಯ ಅಪಾಯವನ್ನು ತಪ್ಪಿಸಿಕೊಂಡರು. ಜಾದುಮಣಿ ಕೊನೆಯ ಗಳಿಗೆಯಲ್ಲಿ ತಿರುಗೇಟು ನೀಡಿದರೂ ಇದು ತೀರ್ಪುಗಾರರ ಮನಸ್ಸು ಬದಲಿಸಲು ಸಾಕಾಗಲಿಲ್ಲ.

ಸ್ಪರ್ಧೆಯನ್ನು ಗೆದ್ದುಕೊಂಡ ಡಿಕ್ಸೋನ್‌ಗೆ ಚಿನ್ನದ ಪದಕ ಒಲಿಯಿತು. ಜಾದುಮಣಿ ಬೆಳ್ಳಿ ಪದಕ ಜಯಿಸಿ ಭಾರತದ ಬಾಕ್ಸಿಂಗ್ ಖಾತೆಗೆ ಮತ್ತೊಂದು ಪದಕ ಸೇರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor