ಕಿವೀಸ್ ಟೆಸ್ಟ್ | WTCಯಲ್ಲಿ 43 ವಿಕೆಟ್ ಪಡೆದ ಸಿರಾಜ್ ಗೆ ಮತ್ತೆ ಅವಕಾಶ ನಿರಾಕರಣೆ
‘ನಂಬಲಸಾಧ್ಯ, ಇದು ತೀರಾ ಅನ್ಯಾಯ’: ಕೈಫ್, ಹರ್ಷ ಭೋಗ್ಲೆ ಅಸಮಾಧಾನ
ಮುಹಮ್ಮದ್ ಸಿರಾಜ್ Photo: ANI
ಹೊಸದಿಲ್ಲಿ, ನ. 27: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್(WTC)ನ ಪ್ರಸಕ್ತ ಆವೃತ್ತಿಯಲ್ಲಿ 11 ಪಂದ್ಯಗಳಿಂದ 43 ವಿಕೆಟ್ ಕಬಳಿಸಿರುವ ಭಾರತದ ವೇಗದ ಬೌಲರ್ ಮುಹಮ್ಮದ್ ಸಿರಾಜ್ರನ್ನು ನ್ಯೂಝಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೂ ಆಡುವ ಬಳಗದಿಂದ ಕೈಬಿಟ್ಟಿರುವುದು ಕ್ರಿಕೆಟ್ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಭಾರತದ ಈ ಆಯ್ಕೆ ನಿರ್ಧಾರವನ್ನು ಮಾಜಿ ಕ್ರಿಕೆಟಿಗ ಮುಹಮ್ಮದ್ ಕೈಫ್ ಹಾಗೂ ಹಿರಿಯ ಕ್ರಿಕೆಟ್ ವಿಶ್ಲೇಷಕ ಹರ್ಷ ಭೋಗ್ಲೆ ಟೀಕಿಸಿದ್ದಾರೆ.
ವಿದೇಶಿ ಟೆಸ್ಟ್ ಸರಣಿಗಳಲ್ಲಿ ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಸಿರಾಜ್ ಕೂಡ ಭಾರತದ ಬೌಲಿಂಗ್ ದಾಳಿಯ ಪ್ರಮುಖ ಭಾಗವಾಗಿರಬೇಕು ಎಂಬುದು ಕೈಫ್ ಅಭಿಪ್ರಾಯ. ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಇತ್ತೀಚೆಗಷ್ಟೇ ಸಿರಾಜ್ ರನ್ನು 'ವಿಶ್ವ ದರ್ಜೆಯ ಬೌಲರ್' ಎಂದು ಹೇಳಿದ್ದರು. ಅವರು ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ ಎಂದೂ ಶ್ಲಾಘಿಸಿದ್ದರು. ಇಂತಹ ಸಂದರ್ಭದಲ್ಲಿ ಅವರನ್ನು ಆಡುವ ಬಳಗದಿಂದ ಹೊರಗಿಟ್ಟಿರುವುದು ಅಚ್ಚರಿ ಮೂಡಿಸಿದೆ ಎಂದು ಕೈಫ್ ಹೇಳಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಬೌಲರ್ ಗಳು ನ್ಯೂಝಿಲೆಂಡ್ ತಂಡವನ್ನು ಆಲೌಟ್ ಮಾಡಲು ಪರದಾಡಿದ್ದರು. ಪ್ರವಾಸಿ ತಂಡವು ಕ್ರೀಸ್ ಗೆ ಅಂಟಿಕೊಂಡು ನಿಂತು ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಈ ಹಿನ್ನೆಲೆಯಲ್ಲಿ ಎರಡನೇ ಪಂದ್ಯದಲ್ಲಿ ಸಿರಾಜ್ ಗೆ ಅವಕಾಶ ನೀಡಬೇಕೆಂಬ ಒತ್ತಾಯ ಕೇಳಿಬಂದಿದ್ದರೂ ಆಯ್ಕೆಗಾರರು ಮತ್ತು ಟೀಮ್ ಮ್ಯಾನೇಜ್ಮೆಂಟ್ ಅವರನ್ನು ಕಡೆಗಣಿಸಿದ್ದಾರೆ.
'ಭಾರತದ ಪ್ರಮುಖ ವೇಗದ ಬೌಲರ್ ಗಳಲ್ಲಿ ಒಬ್ಬರಾದ ಮುಹಮ್ಮದ್ ಸಿರಾಜ್ ರನ್ನು ಮತ್ತೆ ಕೈಬಿಟ್ಟಿರುವುದನ್ನು ನಂಬಲು ಕಷ್ಟವಾಗುತ್ತಿದೆ. ವಿದೇಶಿ ಟೆಸ್ಟ್ ಸರಣಿಗಳಲ್ಲಿ ಭಾರತದ ಬೌಲಿಂಗ್ ದಾಳಿಯನ್ನು ರೂಪಿಸುವಾಗ ಬುಮ್ರಾ ಅವರೊಂದಿಗೆ ಸಿರಾಜ್ ಹೆಸರನ್ನೂ ಮೊದಲ ಆದ್ಯತೆಯಾಗಿ ಪರಿಗಣಿಸಬೇಕು. ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಅವರೇ ಸಿರಾಜ್ ರನ್ನು ವಿಶ್ವ ದರ್ಜೆಯ ಬೌಲರ್ ಎಂದು ಕರೆದಿದ್ದರು ಮತ್ತು ಅವರು ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ ಎಂದಿದ್ದರು' ಎಂದು ಕೈಫ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹಿರಿಯ ಕ್ರಿಕೆಟ್ ವಿಶ್ಲೇಷಕ ಹರ್ಷ ಭೋಗ್ಲೆ ಕೂಡ ಈ ಆಯ್ಕೆ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. WTCಯ ಪ್ರಸಕ್ತ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಅಗ್ರ ಐವರು ಬೌಲರ್ ಗಳ ಪೈಕಿ ಭಾರತದ ಪರ ಜಸ್ಪ್ರೀತ್ ಬುಮ್ರಾ ಅವರಿಗೆ ಮಾತ್ರ ಆಡುವ ಬಳಗದಲ್ಲಿ ಸ್ಥಾನ ದೊರೆತಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಸಿರಾಜ್ ಅವರ ಸಾಧನೆಯನ್ನು ಪರಿಗಣಿಸಿದರೆ ಅವರನ್ನು ಕೈಬಿಟ್ಟಿರುವುದು ತೀರಾ ಅನ್ಯಾಯ ಎಂದು ಭೋಗ್ಲೆ ಹೇಳಿದ್ದಾರೆ.
ಇಂತಹ ನಿರ್ಧಾರಗಳು ತಂಡದ ಇತರ ಬೌಲರ್ ಗಳಲ್ಲೂ ಅನಿಶ್ಚಿತತೆ ಮೂಡಿಸಬಹುದು. ಉತ್ತಮವಾಗಿ ಬೌಲಿಂಗ್ ಮಾಡಿದರೂ ಮುಂದಿನ ಪಂದ್ಯದಲ್ಲಿ ಅವಕಾಶ ಸಿಗುತ್ತದೆ ಎಂಬ ಖಾತರಿ ಇಲ್ಲದಿದ್ದರೆ, ಅದು ಆಟಗಾರರ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರಬಹುದು ಎಂದೂ ಅವರು ಹೇಳಿದ್ದಾರೆ.
'ಸಿರಾಜ್ ಈಗ ಭಾರತದ ಆರನೇ ಶ್ರೇಯಾಂಕದ ವೇಗದ ಬೌಲರ್ ಆಗಿದ್ದಾರೆ. ಇದು ನನಗೆ ತೀರಾ ಅನ್ಯಾಯವೆನಿಸುತ್ತದೆ. ಈ WTC ಋತುವಿನಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಅಗ್ರ ಐವರು ಬೌಲರ್ ಗಳ ಪೈಕಿ ಭಾರತದ ತಂಡದಲ್ಲಿ ಈಗ ಬುಮ್ರಾ ಅವರಿಗೆ ಮಾತ್ರ ಸ್ಥಾನವಿದೆ. ಆಯ್ಕೆಯಾಗಿರುವ ಬೌಲರ್ ಗಳು ಉತ್ತಮ ಪ್ರದರ್ಶನ ನೀಡಲಿ ಎಂದು ಆಶಿಸೋಣ. ಅವರಿಗೆ ಬೌಲಿಂಗ್ ಮಾಡಲು ಅತ್ಯುತ್ತಮ ಅವಕಾಶಗಳಿವೆ. ಆದರೆ, ತಮ್ಮ ಸರದಿ ಬಂದಾಗ ತಮಗೆ ಹೆಚ್ಚಿನ ಅವಕಾಶಗಳು ಸಿಗುವುದಿಲ್ಲ ಎಂಬುದು ಅವರಿಗೆ ತಿಳಿದಿರುತ್ತದೆ' ಎಂದು ಭೋಗ್ಲೆ 'ಎಕ್ಸ್'ನಲ್ಲಿ ನ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಮೊದಲ ಟೆಸ್ಟ್ ಗೆ ಭಾರತವು ಬುಮ್ರಾ, ಪ್ರಸಿದ್ಧ ಕೃಷ್ಣ, ಆಕಾಶ್ ದೀಪ್ ಮತ್ತು ಅಂಶುಲ್ ಕಂಬೋಜ್ ಅವರನ್ನು ಪ್ರಮುಖ ವೇಗದ ಬೌಲರ್ಗಳಾಗಿ ಆಯ್ಕೆ ಮಾಡಿತ್ತು. ವಾಷಿಂಗ್ಟನ್ ಸುಂದರ್ ಹೆಚ್ಚುವರಿ ಬೌಲರ್ ಆಗಿ ಆಯ್ಕೆಯಾಗಿದ್ದರು. ಬೌಲಿಂಗ್ ವಿಭಾಗದ ಸಂಯೋಜನೆಯನ್ನು ಸರಿದೂಗಿಸುವುದರ ಜೊತೆಗೆ ಬ್ಯಾಟಿಂಗ್ ಆಳವನ್ನು ಹೆಚ್ಚಿಸುವ ಉದ್ದೇಶದಿಂದ ಈ ಆಯ್ಕೆ ಮಾಡಲಾಗಿತ್ತು ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.