×
Ad

ಅಡುಗೆ ಅನಿಲ ಪೂರೈಕೆಯಲ್ಲಿ ಅಡಚಣೆ: ಐಪಿಎಲ್ ಮೇಲೂ ಪರಿಣಾಮ!

Update: 2026-03-10 22:57 IST

Photo : PTI

ಮುಂಬೈ: ಇನ್ನೆರಡು ವಾರಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಗೊಳ್ಳಲಿದ್ದು, ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಗಳ ಪೂರೈಕೆಯಲ್ಲಿ ಆಗಿರುವ ಅಡಚಣೆಯು ದೊಡ್ಡ ಸವಾಲಾಗಿದೆ. ಅಡುಗೆ ಅನಿಲ ಸಿಲಿಂಡರ್ಗಳ ಅನುಪಸ್ಥಿತಿಯಲ್ಲಿ ರೆಸ್ಟೋರೆಂಟ್ ಗಳು, ಹೊಟೇಲ್ ಗಳು ಮತ್ತು ಆಹಾರ ಉದ್ಯಮಗಳು ಮುಚ್ಚುವುದರಿಂದ ಐಪಿಎಲ್ ನಡೆಸುವುದು ಕಷ್ಟಕರವಾಗುತ್ತದೆ. ಹಾಗಾಗಿ, ಈ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು, ಅಗತ್ಯ ಬಿದ್ದರೆ ಪರ್ಯಾಯ ಕ್ರಮಗಳನ್ನು ಅನ್ವೇಷಿಸಲಾಗುವುದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.

ಐಪಿಎಲ್ ಮಾರ್ಚ್ 28ರಂದು ಆರಂಭಗೊಳ್ಳಲು ನಿಗದಿಯಾಗಿದೆ. ಫೈನಲ್ ಪಂದ್ಯವು ಮೇ 31ರಂದು ನಡೆಯಲಿದೆ.

‘‘ಪರಿಸ್ಥಿತಿಯು ನಿರಂತರವಾಗಿ ಬದಲಾಗುತ್ತಿದೆ. ಮಾರ್ಚ್ 28ರ ವೇಳೆಗೆ ಪರಿಸ್ಥಿತಿಯು ನಿಯಂತ್ರಣಕ್ಕೆ ಬರಲಿದೆ ಎಂದು ನಾವು ಆಶಿಸುತ್ತೇವೆ. ಆದರೆ, ಇದು ಹೀಗೆಯೇ ಮುಂದುವರಿದರೆ ಬೇರೆ ಆಯ್ಕೆಗಳತ್ತ ನೋಡಬೇಕಾಗುತ್ತದೆ. ಯಾಕೆಂದರೆ ಇದು ತಂಡಗಳು ಮತ್ತು ಆಟಗಾರರ ಮೇಲೆ ಮಾತ್ರವಲ್ಲ, ಪ್ರೇಕ್ಷಕರ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ, ಈ ವಿಷಯದ ಮೇಲೆ ನಾವು ನಿಕಟ ಗಮನ ಇಟ್ಟಿದ್ದೇವೆ’’ ಎಂದು ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಅರುಣ್ ಧುಮಾಲ್ ‘ಸ್ಪೋರ್ಟ್ಸ್ ಸ್ಟಾರ್’ಗೆ ತಿಳಿಸಿದರು.

ತಮ್ಮಲ್ಲಿ ಒಂದು ಅಥವಾ ಎರಡು ದಿನಗಳಿಗೆ ಮಾತ್ರ ಸಾಕಾಗುವಷ್ಟು ಅಡುಗೆ ಅನಿಲವಿದೆ ಎಂದು ಬೆಂಗಳೂರಿನಲ್ಲಿ ಹೊಟೇಲ್ ಮಾಲೀಕರ ಸಂಘ ಹೇಳಿದೆ. ಮುಂಬೈಯಲ್ಲಿ, ಅಡುಗೆ ಅನಿಲ ಕೊರತೆಯಿಂದಾಗಿ ಈಗಾಗಲೇ 20 ಶೇಕಡ ಹೊಟೇಲ್ ಗಳು ಮತ್ತು ರೆಸ್ಟೋರೆಂಟ್ ಗಳು ಮುಚ್ಚಿವೆ.

ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ಮೇಲೆ ನಡೆಸುತ್ತಿರುವ ಜಂಟಿ ದಾಳಿಯಿಂದಾಗಿ ಪಶ್ಚಿಮ ಏಶ್ಯದಿಂದ ಬರುವ ತೈಲ ನಿಂತುಹೋಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News