ಫಾರ್ಮ್ ಬಗ್ಗೆ ಮರಳಿದ ಆತ್ಮವಿಶ್ವಾಸ: ಅಭಿಷೇಕ್ ಶರ್ಮಾ ಹೇಳಿದ್ದೇನು?
PC: x.com/OfficialAbhi04
ಅಹ್ಮದಾಬಾದ್: ಟಿ20 ವಿಶ್ವಕಪ್ ಫೈನಲ್ ನಲ್ಲಿ ಕೇವಲ 21 ಎಸೆತಗಳಲ್ಲಿ 52 ರನ್ ಸಿಡಿಸಿ ಭಾರತಕ್ಕೆ ಸಿಡಿಲಬ್ಬರದ ಆರಂಭ ಒದಗಿಸಿದ ಆರಂಭಿಕ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮಾ, ಟೂರ್ನಿಯುದ್ದಕ್ಕೂ ನೀರಸ ಪ್ರದರ್ಶನ ಮೂಡಿಬಂದ ಸಂದರ್ಭದಲ್ಲಿ ನಾಯಕ ಸೂರ್ಯಕುಮಾರ್ ಯಾದವ್, ಕೋಚ್ ಗೌತಮ್ ಗಂಭೀರ್ ಮತ್ತು ತಂಡದ ವ್ಯವಸ್ಥಾಪಕ ವರ್ಗ ತೋರಿದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಸಂಜು ಸ್ಯಾಮ್ಸನ್ ಜತೆಗೆ ಇನ್ನಿಂಗ್ಸ್ ಆರಂಭಿಸಿದ ಅಭಿಷೇಕ್ ಶರ್ಮಾ ಅವರ ಅರ್ಧಶತಕದ ನೆರವಿನಿಂದ ಭಾರತ 5 ವಿಕೆಟ್ ನಷ್ಟಕ್ಕೆ 255 ರನ್ ಗಳ ಭಾರಿ ಮೊತ್ತ ಕಲೆ ಹಾಕಿ, 96 ರನ್ ಅಂತರದಿಂದ ಪಂದ್ಯ ಜಯಿಸಿ, ವಿಶ್ವಕಪ್ ಟಿ20 ಕಿರೀಟ ಉಳಿಸಿಕೊಂಡ ಮೊಟ್ಟಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
"ಒಂದಂಶವಂತೂ ಸುಸ್ಪಷ್ಟ. ನಾನು ಈ ಮೊದಲೇ ಹಂಚಿಕೊಳ್ಳಲು ಬಯಸಿದ್ದೆ; ಆದರೆ ಇದು ಅತ್ಯುತ್ತಮ ಸಂದರ್ಭ. ನನ್ನ ಬಗ್ಗೆಯೇ ನನಗೆ ಸಂದೇಹ ಮೂಡಿದ ಸಂದರ್ಭದಲ್ಲೂ ನನ್ನ ಬಗ್ಗೆ ನಾಯಕ ಹಾಗೂ ಕೋಚ್ ವಿಶ್ವಾಸ ಇರಿಸಿದರು. ಈ ಹಿಂದೆ ಎಂದೂ ಇಂಥ ಅನುಭವ ಆಗಿರಲಿಲ್ಲ; ಕಠಿಣ ಟೂರ್ನಿ" ಎಂದು ಪಂದ್ಯದ ಬಳಿಕ ಶರ್ಮಾ ನುಡಿದರು.
"ನಾನು ನನ್ನ ಪ್ರಯತ್ನ ಮಾಡುತ್ತಲೇ ಇದ್ದೆ. ಒಂದೊಂದು ಪಂದ್ಯದಲ್ಲೂ ಪ್ರಯತ್ನ ಇತ್ತು. ಆದರೆ ಅದು ಸುಲಭವಾಗಿರಲಿಲ್ಲ"ಎಂದು ಸ್ಪಷ್ಟಪಡಿಸಿದರು.
"ಆದರೆ ನನ್ನನ್ನು ಬೆಂಬಲಿಸಿದ್ದಕ್ಕಾಗಿ ನಾನು ಈ ತಂಡವನ್ನು ಅಪಾರವಾಗಿ ಪ್ರೀತಿಸುತ್ತೇನೆ. ಇದು ನನಗೆ ಸುಲಭವಾಗಿರಲಿಲ್ಲ. ಇಡೀ ವರ್ಷ ತಂಡಕ್ಕಾಗಿ ಕೊಡುಗೆ ನೀಡಲು ಸಾಧ್ಯವಾದರೂ, ಈ ದೊಡ್ಡ ಟೂರ್ನಿಯಲ್ಲಿ ಸಾಧ್ಯವಾಗಲಿಲ್ಲ. ಆದರೆ ತಂಡ ಹಾಗೂ ವ್ಯವಸ್ಥಾಪಕರು ನನ್ನ ಮೇಲೆ ವಿಶ್ವಾಸ ಇಟ್ಟರು. ಟೂರ್ನಿ ಮಧ್ಯದಲ್ಲಂತೂ ತೀರಾ ಭಾವುಕನಾಗಿದ್ದೆ ಹಾಗೂ ನಾಯಕ ಹಾಗೂ ಕೋಚ್ ಜತೆ ಮಾತನಾಡಲು ಬಯಸಿದ್ದೆ. ದೊಡ್ಡ ಪಂದ್ಯಗಳನ್ನು ಜಯಿಸಿ ಕೊಡುತ್ತೀರಿ ಎಂಬ ಆತ್ಮವಿಶ್ವಾಸ ತುಂಬಿದರು. ಕಠಿಣ ಸಂದರ್ಭದಲ್ಲೂ ಅಭಿಮಾನಿಗಳು ಕೂಡಾ ಬೆಂಬಲಕ್ಕೆ ನಿಂತರು" ಎಂದು ಬಣ್ಣಿಸಿದರು.