ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವುದು ನಮ್ಮ ಮುಂದಿನ ಗುರಿ: ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್ | Photo Credit : PTI
ಹೊಸದಿಲ್ಲಿ,ಮಾ.9: ಭಾರತ ಕ್ರಿಕೆಟ್ ತಂಡ ಸ್ವದೇಶದಲ್ಲಿ ಐತಿಹಾಸಿಕ ಟಿ-20 ವಿಶ್ವಕಪ್ ಪ್ರಶಸ್ತಿ ಗೆಲ್ಲುವಲ್ಲಿ ನಾಯಕತ್ವವಹಿಸಿರುವ ಸೂರ್ಯಕುಮಾರ್ ಯಾದವ್ ಮುಂದಿನ ಪ್ರಮುಖ ಮೈಲಿಗಲ್ಲಿನತ್ತ ತನ್ನ ಗಮನವನ್ನ್ನು ಹರಿಸಿದ್ದಾರೆ. 2028ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವುದು ತಂಡದ ಮುಂದಿನ ಗುರಿಯಾಗಿದೆ ಎಂದಿದ್ದಾರೆ.
ಅಹ್ಮದಾಬಾದ್‌ನಲ್ಲಿ ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದ ಭಾರತ ತಂಡವು ನ್ಯೂಝಿಲ್ಯಾಂಡ್ ತಂಡವನ್ನು 96 ರನ್‌ಗಳಿಂದ ಮಣಿಸಿದೆ. ಟಿ-20 ವಿಶ್ವಕಪ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡ ಮೊದಲ ತಂಡ ಎನಿಸಿಕೊಂಡಿದೆ. ಮೂರು ಬಾರಿ ಪ್ರಶಸ್ತಿ ಗೆದ್ದಿರುವ ಮೊದಲ ತಂಡವೆಂಬ ಕೀರ್ತಿಗೂ ಭಾಜನವಾಗಿದೆ.
ಮಧ್ಯರಾತ್ರಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೂರ್ಯಕುಮಾರ್, ಈ ಸಾಧನೆಯು ತಂಡದ ಪಾಲಿಗೆ ಮಹತ್ವದ ಕ್ಷಣವಾಗಿದೆ ಎಂದು ಬಣ್ಣಿಸಿದರು. ಈಗಾಗಲೆ ನಮ್ಮ ಗಮನವನ್ನು ಭವಿಷ್ಯದ ಸವಾಲುಗಳತ್ತ ಹರಿಸಲಾಗಿದೆ ಎಂದರು.
‘‘ಇದೊಂದು ಅತ್ಯಂತ ವಿಶೇಷವಾದುದು. ಮುಂದಿನ ಗುರಿ ಒಲಿಂಪಿಕ್ಸ್. 2028ರಲ್ಲಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಜೊತೆಗೆ ಟಿ-20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಪ್ರಶಸ್ತಿಯನ್ನು ಗೆಲ್ಲುವ ಯೋಜನೆ ಇದೆ’’ ಎಂದರು.
2028ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ ಗೇಮ್ಸ್‌ನಲ್ಲಿ ಕ್ರಿಕೆಟ್ ಪುನರಾಗಮನವಾಗಲಿದೆ. 1900ರ ನಂತರ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಕಾಣಿಸಿಕೊಳ್ಳಲಿದೆ. ಈ ಮೂಲಕ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ.
‘‘ದೀರ್ಘ ಸಮಯದ ನಂತರ 2024ರಲ್ಲಿ ಐಸಿಸಿ ಪ್ರಶಸ್ತಿಯ ಬರ ನೀಗಿಸಿಕೊಂಡಿದ್ದೆವು. ಆ ನಂತರ ನಾವು ಹಿಂತಿರುಗಿ ನೋಡಿಲ್ಲ. 2024ರಲ್ಲಿ ನಾವು ವಿಭಿನ್ನ ಶೈಲಿಯ ಕ್ರಿಕೆಟ್ ಆಡಿದ್ದೆವು. ಆಗ ನಮ್ಮ ತಂಡದ ಮುಂದಿನ ಭವಿಷ್ಯವನ್ನು ನಿರ್ಧರಿಸಲಾಗಿತ್ತು. ಆ ನಂತರದ ಪಯಣ ಅದ್ಭುತವಾಗಿತ್ತು ’’ಎಂದು 2023ರ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಮೂಲಕ ಭಾರತ ಪ್ರಮುಖ ಪ್ರಶಸ್ತಿಯ ಬರ ನೀಗಿಸಿಕೊಂಡಿರುವುದನ್ನು ಸೂರ್ಯಕುಮಾರ್ ಉಲ್ಲೇಖಿಸಿದರು.
2024ರ ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ನಿವೃತ್ತಿಯ ನಂತರ ಸೂರ್ಯಕುಮಾರ್ ತಂಡದ ನಾಯಕತ್ವ ವಹಿಸಿದ್ದರು.
‘‘ಸ್ವದೇಶಿ ಪ್ರೇಕ್ಷಕರ ಮುಂದೆ ಅತ್ಯಂತ ವಿಶೇಷವಾದುದನ್ನು ಸಾಧಿಸಲು ಬಯಸಿದ್ದೆವು. ನಾವದನ್ನು ಮುಂದುವರಿಸುತ್ತೇವೆ. ಇದು ಇಲ್ಲಿಗೆ ಮುಗಿಯುವುದಿಲ್ಲ’’ ಎಂದು ಸೂರ್ಯಕುಮಾರ್ ಹೇಳಿದರು.