ಮೂರನೇ ಟಿ-20 ವಿಶ್ವಕಪ್ ಪ್ರಶಸ್ತಿಯೊಂದಿಗೆ ಅದ್ವಿತೀಯ ಸಾಧನೆಗೈದ ಭಾರತ
Photo Credit : PTI
ಹೊಸದಿಲ್ಲಿ,ಮಾ.9: ಭಾರತ ಕ್ರಿಕೆಟ್ ತಂಡವು ಮೂರನೇ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಟಿ-20 ವಿಶ್ವಕಪ್‌ನಲ್ಲಿ ಯಾವ ತಂಡವೂ ಮಾಡದ ಸಾಧನೆ ಮಾಡಿದೆ. ಅಹ್ಮದಾಬಾದ್‌ನಲ್ಲಿ ನಡೆದಿದ್ದ ಫೈನಲ್ ಪಂದ್ಯದ ಅಂಕಿ-ಅಂಶಗಳು ಇಂತಿವೆ.
3: ಭಾರತ ತಂಡವು 2007 ಹಾಗೂ 2024ರ ನಂತರ ಮೂರನೇ ಬಾರಿ ಟಿ-20 ವಿಶ್ವಕಪ್ ಜಯಿಸಿದೆ. ವೆಸ್ಟ್‌ಇಂಡೀಸ್(2012 ಹಾಗೂ 2016)ಮತ್ತು ಇಂಗ್ಲೆಂಡ್(2010 ಹಾಗೂ 2022)ತಲಾ ಎರಡು ಬಾರಿ ಈ ಸಾಧನೆ ಮಾಡಿವೆ.
ಭಾರತ ತಂಡವು ಪುರುಷರ ಟಿ-20 ವಿಶ್ವಕಪ್‌ನಲ್ಲಿ ಸತತವಾಗಿ ಪ್ರಶಸ್ತಿಗಳನ್ನು ಗೆದ್ದಿರುವ ಮೊದಲ ತಂಡವಾಗಿದೆ. ಈ ಹಿಂದೆ ಹಾಲಿ ಚಾಂಪಿಯನ್ ತಂಡ ಫೈನಲ್‌ಗೂ ತಲುಪಿಲ್ಲ. ಭಾರತ ತಂಡವು ಸ್ವದೇಶದಲ್ಲಿ ವಿಶ್ವಕಪ್ ಟೂರ್ನಿ ಗೆದ್ದಿರುವ ಮೊದಲ ತಂಡವಾಗಿದೆ.
1-3: ಪುರುಷರ ಟಿ-20 ವಿಶ್ವಕಪ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಭಾರತ ತಂಡ ಒಂದು ಗೆಲುವು-ಮೂರರಲ್ಲಿ ಸೋತಿದೆ. ಭಾರತ ತಂಡ ಈ ಹಿಂದೆ ಕಿವೀಸ್ ವಿರುದ್ಧದ ಎಲ್ಲ ಮೂರೂ ವಿಶ್ವಕಪ್ ಪಂದ್ಯಗಳನ್ನು ಸೋತಿತ್ತು.
255/5: ನ್ಯೂಝಿಲ್ಯಾಂಡ್ ವಿರುದ್ಧ ಫೈನಲ್‌ನಲ್ಲಿ ಭಾರತ ತಂಡವು 5 ವಿಕೆಟ್‌ಗಳ ನಷ್ಟಕ್ಕೆ 255 ರನ್ ಗಳಿಸಿದೆ. ಇದು ಟಿ-20 ಕ್ರಿಕೆಟ್‌ನ ನಾಕೌಟ್ ಪಂದ್ಯದಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿದೆ. ಇದು ಪುರುಷರ ಟಿ-20 ವಿಶ್ವಕಪ್ ಪಂದ್ಯದಲ್ಲಿ ದಾಖಲಾದ ಮೂರನೇ ಗರಿಷ್ಠ ಮೊತ್ತವಾಗಿದೆ.
96: ಪುರುಷರ ಟಿ-20 ವಿಶ್ವಕಪ್‌ನಲ್ಲಿ ಭಾರತ ತಂಡವು ನ್ಯೂಝಿಲ್ಯಾಂಡ್ ವಿರುದ್ಧ ಭಾರೀ ರನ್ ಅಂತರದಿಂದ ಜಯಶಾಲಿಯಾಗಿದೆ. ಭಾರತವು ಪ್ರಸಕ್ತ ವಿಶ್ವಕಪ್‌ನಲ್ಲಿ ನಮೀಬಿಯಾ ವಿರುದ್ಧ 93 ರನ್ ಅಂತರದಿಂದ ಗೆಲುವು ದಾಖಲಿಸಿತ್ತು. ನ್ಯೂಝಿಲ್ಯಾಂಡ್ ತಂಡವು ಪ್ರಸಕ್ತ ಪಂದ್ಯಾವಳಿಯಲ್ಲಿ ಹೀನಾಯ ಸೋಲನುಭವಿಸಿದೆ. ಪುರುಷರ ಟಿ-20 ಕ್ರಿಕೆಟ್‌ನಲ್ಲಿ ಕಿವೀಸ್ ತಂಡದ ಮೂರು ಹೀನಾಯ ಸೋಲುಗಳ ಪೈಕಿ ಎರಡನ್ನು ಭಾರತ ವಿರುದ್ಧ ಅಹ್ಮದಾಬಾದ್‌ನಲ್ಲಿ ಎದುರಿಸಿದೆ.
4/15: ಜಸ್‌ಪ್ರಿತ್ ಬುಮ್ರಾ ಟಿ-20 ಪಂದ್ಯದಲ್ಲಿ ಮೊದಲ ಬಾರಿ ನಾಲ್ಕು ವಿಕೆಟ್ ಗೊಂಚಲು ಪಡೆದಿದ್ದಾರೆ. ಪುರುಷರ ಟಿ-20 ವಿಶ್ವಕಪ್ ಫೈನಲ್‌ನಲ್ಲಿ ಈ ಸಾಧನೆ ಮಾಡಿದ ಎರಡನೇ ಬೌಲರ್ ಆಗಿದ್ದಾರೆ. ಲಂಕಾದ ಅಜಂತಾ ಮೆಂಡಿಸ್ 2012ರಲ್ಲಿ ವೆಸ್ಟ್‌ಇಂಡೀಸ್ ತಂಡದ ವಿರುದ್ಧ 12 ರನ್‌ಗೆ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದ್ದರು.
1: ಸೆಮಿ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 7ಕ್ಕೆ 253 ರನ್ ಗಳಿಸಿದ್ದ ಭಾರತ ತಂಡವು ಪುರುಷರ ಟಿ-20 ಕ್ರಿಕೆಟ್‌ನಲ್ಲಿ ಸತತ ಎರಡನೇ ಬಾರಿ 250ಕ್ಕೂ ಅಧಿಕ ರನ್ ಗಳಿಸಿದ ಮೊದಲ ತಂಡವಾಗಿದೆ. ಭಾರತ ತಂಡ ರವಿವಾರದ ಪಂದ್ಯದಲ್ಲಿ ಮೂರನೇ ಬಾರಿ 250ಕ್ಕೂ ಅಧಿಕ ರನ್ ಗಳಿಸಿದೆ. ಭಾರತ ತಂಡವು 2026ರಲ್ಲಿ ಟಿ-20 ಪಂದ್ಯದಲ್ಲಿ ನಾಲ್ಕನೇ ಬಾರಿ 250ಕ್ಕೂ ಅಧಿಕ ರನ್ ಕಲೆ ಹಾಕಿದೆ. ಒಂದೇ ವರ್ಷದಲ್ಲಿ ಎಲ್ಲ ಟಿ-20 ಕ್ರಿಕೆಟ್‌ನಲ್ಲಿ ತಂಡವೊಂದರ ಶ್ರೇಷ್ಠ ಸಾಧನೆ ಇದಾಗಿದೆ.
18: ಅಭಿಷೇಕ್ ಶರ್ಮಾ ನ್ಯೂಝಿಲ್ಯಾಂಡ್ ವಿರುದ್ಧ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಟಿ-20 ವಿಶ್ವಕಪ್‌ನ ನಾಕೌಟ್ ಪಂದ್ಯದಲ್ಲಿ ಬ್ಯಾಟರ್‌ವೊಬ್ಬನ ವೇಗದ ಅರ್ಧಶತಕ ಇದಾಗಿದೆ. ಈ ಹಿಂದೆ ಸೆಮಿ ಫೈನಲ್ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಫಿನ್ ಅಲೆನ್(19 ಎಸೆತ)ಹಾಗೂ ಭಾರತ ವಿರುದ್ಧ ಜೇಕಬ್ ಬೆಥೆಲ್(19 ಎಸೆತ)ವೇಗದ ಅರ್ಧಶತಕ ಗಳಿಸಿದ್ದರು.
89: ಸಂಜು ಸ್ಯಾಮ್ಸನ್ ನ್ಯೂಝಿಲ್ಯಾಂಡ್ ವಿರುದ್ಧ 89 ರನ್ ಗಳಿಸಿದ್ದಾರೆ. ಇದು ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಾಖಲಾದ ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ. 2016ರಲ್ಲಿ ಇಂಗ್ಲೆಂಡ್ ವಿರುದ್ಧ ವಿಂಡೀಸ್‌ನ ಮರ್ಲಾನ್ ಸ್ಯಾಮುಯೆಲ್ಸ್ ಔಟಾಗದೆ 85 ಹಾಗೂ 2021ರಲ್ಲಿ ಆಸ್ಟ್ರೇಲಿಯದ ವಿರುದ್ಧ ಕಿವೀಸ್‌ನ ಕೇನ್ ವಿಲಿಯಮ್ಸನ್ 85 ರನ್ ಗಳಿಸಿದ್ದರು.
ಸ್ಯಾಮ್ಸನ್ ಪುರುಷರ ಟಿ-20 ವಿಶ್ವಕಪ್‌ನ ಸೆಮಿ ಫೈನಲ್ ಹಾಗೂ ಫೈನಲ್ ಎರಡರಲ್ಲೂ ಅರ್ಧಶತಕ ಗಳಿಸಿದ ಮೂರನೇ ಬ್ಯಾಟರ್ ಆಗಿದ್ದಾರೆ. ಶಾಹೀದ್ ಅಫ್ರಿದಿ(2009) ಹಾಗೂ ವಿರಾಟ್ ಕೊಹ್ಲಿ(2014)ಈ ಸಾಧನೆ ಮಾಡಿದ್ದರು.
92/0: ಪುರುಷರ ಟಿ-20 ವಿಶ್ವಕಪ್‌ನಲ್ಲಿ ಭಾರತ ತಂಡವು ಪವರ್‌ಪ್ಲೇನಲ್ಲಿ ಜಂಟಿ ಗರಿಷ್ಠ ಸ್ಕೋರ್(92/0) ಗಳಿಸಿದೆ. 2024ರಲ್ಲಿ ಅಫ್ಘಾನಿಸ್ತಾನದ ವಿರುದ್ಧ ವೆಸ್ಟ್‌ಇಂಡೀಸ್ ತಂಡದ ಸಾಧನೆ(92/1)ಯನ್ನು ಸರಿಗಿಟ್ಟಿದೆ.
4: ಅಭಿಷೇಕ್ ಶರ್ಮಾ ಟಿ-20 ಕ್ರಿಕೆಟ್‌ನಲ್ಲಿ ಪವರ್‌ಪ್ಲೇ ಒಳಗೆ ನಾಲ್ಕನೇ ಬಾರಿ ಅರ್ಧಶತಕ ಗಳಿಸಿದರು. ಪುರುಷರ ಟಿ-20 ವಿಶ್ವಕಪ್‌ನಲ್ಲಿ ಪವರ್‌ಪ್ಲೇನಲ್ಲಿ ಅರ್ಧಶತಕ ಸಿಡಿಸಿದ ಏಳನೇ ಬ್ಯಾಟರ್ ಆಗಿದ್ದಾರೆ.
3: ಸ್ಯಾಮ್ಸನ್ ಸತತ ಮೂರನೇ ಬಾರಿ 80ಕ್ಕೂ ಅಧಿಕ ರನ್ ಗಳಿಸಿದರು. ಈ ಹಿಂದಿನ ಎರಡು ಪಂದ್ಯಗಳಲ್ಲಿ ವಿಂಡೀಸ್ ವಿರುದ್ಧ ಔಟಾಗದೆ 97, ಇಂಗ್ಲೆಂಡ್ ವಿರುದ್ಧ 89 ರನ್ ಕಲೆ ಹಾಕಿದ್ದರು. ಮಹೇಲ ಜಯವರ್ಧನೆ 2010ರ ಟಿ-20 ವಿಶ್ವಕಪ್‌ನಲ್ಲಿ ಸತತವಾಗಿ ಮೂರು ಬಾರಿ 80 ಪ್ಲಸ್ ಸ್ಕೋರ್ ಗಳಿಸಿದ ಇನ್ನೋರ್ವ ಆಟಗಾರನಾಗಿದ್ದಾರೆ.
321: ಸ್ಯಾಮ್ಸನ್ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 321 ರನ್ ಗಳಿಸಿದರು. ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟರ್ ಆಗಿರುವ ಸ್ಯಾಮ್ಸನ್, ವಿರಾಟ್ ಕೊಹ್ಲಿ ದಾಖಲೆಯನ್ನು(2014ರಲ್ಲಿ 319 ರನ್) ಮುರಿದಿದ್ದಾರೆ.
ಸ್ಯಾಮ್ಸನ್ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯದಲ್ಲಿ ಒಟ್ಟು 178 ರನ್ ಗಳಿಸಿದ್ದು, ಮತ್ತೊಮ್ಮೆ ಕೊಹ್ಲಿ ದಾಖಲೆ(2014ರಲ್ಲಿ 149)ಯನ್ನು ಮುರಿದಿದ್ದಾರೆ.
24: ಪ್ರಸಕ್ತ ವಿಶ್ವಕಪ್‌ನಲ್ಲಿ ಸ್ಯಾಮ್ಸನ್ ಒಟ್ಟು 24 ಸಿಕ್ಸರ್‌ಗಳನ್ನು ಸಿಡಿಸಿದರು. ಒಂದೇ ಆವೃತ್ತಿಯ ಟಿ-20 ವಿಶ್ವಕಪ್‌ನಲ್ಲಿ ಬ್ಯಾಟರ್‌ವೊಬ್ಬನ ಶ್ರೇಷ್ಠ ಸಾಧನೆ ಇದಾಗಿದೆ. ಫಿನ್ ಅಲೆನ್ ಒಟ್ಟು 20 ಸಿಕ್ಸರ್ ಸಿಡಿಸಿ ಎರಡನೇ ಸ್ಥಾನದಲ್ಲಿದ್ದಾರೆ.
ಪವರ್‌ಪ್ಲೇನಲ್ಲಿನ ಕಳಪೆ ಪ್ರದರ್ಶನಕ್ಕೆ ಬೆಲೆ ತೆರಬೇಕಾಯಿತು: ಸ್ಯಾಂಟ್ನರ್
ಭಾರತ ತಂಡದ ವಿರುದ್ಧ ರವಿವಾರ ನಡೆದ ಪುರುಷರ ಟಿ-20 ವಿಶ್ವಕಪ್ ಫೈನಲ್‌ನಲ್ಲಿ ಎರಡೂ ಪವರ್‌ಪ್ಲೇಗಳಲ್ಲಿ ನೀಡಿರುವ ಕಳಪೆ ಪ್ರದರ್ಶನಕ್ಕೆ ನ್ಯೂಝಿಲ್ಯಾಂಡ್ ತಂಡ ಬೆಲೆ ತೆರಬೇಕಾಯಿತು ಎಂದು ನಾಯಕ ಮಿಚೆಲ್ ಸ್ಯಾಂಟ್ನರ್ ಅಭಿಪ್ರಾಯಪಟ್ಟಿದ್ದಾರೆ.
ಫೈನಲ್ ಪಂದ್ಯದಲ್ಲಿ 96 ರನ್‌ಗಳ ಅಂತರದಿಂದ ಸೋತಿರುವ ಕಿವೀಸ್ ಪಡೆ ತನ್ನ ಬಹುಕಾಲದ ಚೊಚ್ಚಲ ವಿಶ್ವಕಪ್ ಪ್ರಶಸ್ತಿ ಕನಸು ಈಡೇರಿಸಿಕೊಳ್ಳಲು ಮತ್ತೊಮ್ಮೆ ವಿಫಲವಾಯಿತು.
‘‘ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ಭಾರತ ತಂಡವು ತನ್ನ ಶಕ್ತಿಯನ್ನು ತೋರಿಸಿಕೊಟ್ಟಿದೆ. ಎರಡು ಪವರ್‌ಪ್ಲೇಗಳಲ್ಲಿ ನಾವು ಸಂಪೂರ್ಣ ವಿಫಲವಾದೆವು. ಬೌಲಿಂಗ್ ಪವರ್‌ಪ್ಲೇನಲ್ಲಿ ಒಂದೂ ವಿಕೆಟ್ ಪಡೆಯದೆ 90ಕ್ಕೂ ಅಧಿಕ ರನ್ ಬಿಟ್ಟುಕೊಟ್ಟೆವು. ಬ್ಯಾಟಿಂಗ್ ಪವರ್‌ಪ್ಲೇನಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ 40 ರನ್ ಗಳಿಸಿದ್ದೆವು’’ಎಂದು ಸ್ಯಾಂಟ್ನರ್ ಹೇಳಿದರು.
ಭಾರತದ ಆರಂಭಿಕ ಆಟಗಾರರಾದ ಸ್ಯಾಮ್ಸನ್ ಹಾಗೂ ಅಭಿಷೇಕ್ ಮೊದಲ ಆರು ಓವರ್‌ಗಳ ಪವರ್‌ಪ್ಲೇನಲ್ಲಿ 92 ರನ್ ಗಳಿಸಿದ್ದರು. ಇದೇ ಅವಧಿಯಲ್ಲಿ ರನ್ ಚೇಸ್ ವೇಳೆ ಕಿವೀಸ್ 52 ರನ್‌ಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು.
ಸಚಿನ್ ತೆಂಡುಲ್ಕರ್‌ಗೆ ಎಲ್ಲ ಶ್ರೇಯಸ್ಸು ಸಲ್ಲಿಸಿದ ‘ಸರಣಿಶ್ರೇಷ್ಠ‘ ಸ್ಯಾಮ್ಸನ್
ಭಾರತ ಕ್ರಿಕೆಟ್ ತಂಡವು 2026ರ ಆವೃತ್ತಿಯ ಟಿ-20 ಚಾಂಪಿಯನ್‌ಪಟ್ಟಕ್ಕೇರಿದ ನಂತರ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್, ತನ್ನ ಸಾಧನೆಯ ಎಲ್ಲ ಶ್ರೇಯಸ್ಸನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್‌ಗೆ ಸಮರ್ಪಿಸಿದರು.
ಫೈನಲ್ ಪಂದ್ಯದ ನಂತರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸ್ಯಾಮ್ಸನ್, ಭಾರತ ತಂಡವು ಆಸ್ಟ್ರೇಲಿಯಕ್ಕೆ ಪ್ರವಾಸ ಕೈಗೊಂಡಿದ್ದಾಗ ಕೇವಲ ಎರಡು ಪಂದ್ಯಗಳನ್ನು ಆಡಿದ ನಂತರ ಆಡುವ 11ರ ಬಳಗದಿಂದ ಹೊರಗುಳಿದಿದ್ದ ಸಂದರ್ಭದಲ್ಲಿ ನಾನು ತೆಂಡುಲ್ಕರ್‌ರನ್ನು ಭೇಟಿಯಾಗಿದ್ದೆ ಎಂದು ಬಹಿರಂಗಪಡಿಸಿದರು.
‘‘ನಾನು ಆಸ್ಟ್ರೇಲಿಯ ಪ್ರವಾಸ ಕೈಗೊಂಡಾಗ ಆಡುವ 11ರ ಬಳಗದಲ್ಲಿ ಸ್ಥಾನ ಕಳೆದುಕೊಂಡು ಯೋಚಿಸುತ್ತಾ ಕುಳಿತ್ತಿದ್ದೆ. ನಂತರ ಸಚಿನ್ ಸರ್ ಬಳಿ ತೆರಳಿ ಅವರೊಂದಿಗೆ ದೀರ್ಘಸಮಯ ಸಮಾಲೋಚಿಸಿದೆ. ಸಚಿನ್‌ರಂತಹ ಆಟಗಾರರಿಂದ ಮಾರ್ಗದರ್ಶನ ಪಡೆಯುವ ಅಪೂರ್ವ ಅವಕಾಶ ಲಭಿಸಿತು. ನನಗೆ ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ’’ ಎಂದು ಸ್ಯಾಮ್ಸನ್ ಹೇಳಿದರು.
ಪಂದ್ಯಾವಳಿಯಲ್ಲಿ ಒಟ್ಟು 321 ರನ್ ಗಳಿಸಿದ ಗರಿಷ್ಠ ರನ್ ಸ್ಕೋರರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿರುವ ಸ್ಯಾಮ್ಸನ್ ಭಾರತ ತಂಡವು ಮೂರನೇ ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು.
‘‘2024ರಲ್ಲಿ ವೆಸ್ಟ್‌ಇಂಡೀಸ್‌ನಲ್ಲಿ ಟಿ-20 ವಿಶ್ವಕಪ್ ಗೆದ್ದಿರುವ ಭಾರತ ತಂಡದಲ್ಲಿ ನಾನಿದ್ದೆ. ಆಗ ನಾನು ಪಂದ್ಯವನ್ನು ಆಡಿರಲಿಲ್ಲ. ಆದರೆ ನಾನು ಎಲ್ಲವನ್ನೂ ನೋಡುತ್ತಿದ್ದೆ, ಕನಸು ಕಾಣುತ್ತಿದ್ದೆ, ಕೆಲಸ ಮಾಡುತ್ತಲ್ಲೇ ಇದ್ದೆ. ನಾನು ಇನ್ನಷ್ಟು ಶ್ರಮಪಡುವ ಅಗತ್ಯವಿದೆ ಎಂದು ಯೋಚಿಸಿದೆ. ಇದೀಗ ನಾನು ಬಯಸಿದ್ದನ್ನು ಸಾಧಿಸಿದ್ದೇನೆ. ದೇವರ ದಯೆಯಿಂದ ನಾನು ಯೋಚಿಸಿದಂತೆ ಆಗಿದೆ’’ ಎಂದರು.
‘‘ವಿಶ್ವಕಪ್ ಟೂರ್ನಿಗಿಂತ ಮೊದಲು ಸ್ವದೇಶದಲ್ಲಿ ನಡೆದಿದ್ದ ನ್ಯೂಝಿಲ್ಯಾಂಡ್ ವಿರುದ್ಧದ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ಕಳಪೆ ಫಾರ್ಮ್‌ನಿಂದಾಗಿ ತಂಡದಿಂದ ಕೈಬಿಡಲ್ಪಟ್ಟಾಗ ಮಾನಸಿಕವಾಗಿ ಪರದಾಟ ನಡೆಸಿದ್ದೆ. ನನ್ನ ಕನಸು ಭಗ್ನವಾಯಿತು, ಏನು ಮಾಡಲಿ ಎಂದು ಯೋಚಿಸುತ್ತಿದ್ದೆ. ಆದರೆ ದೇವರ ದಯೆಯಿಂದ ಏಕಾಏಕಿ ವಿಶ್ವಕಪ್‌ನ ನಿರ್ಣಾಯಕ ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದೆ. ನನ್ನ ದೇಶಕ್ಕಾಗಿ ಏನು ಮಾಡಬೇಕೊ ಅದನ್ನು ಮಾಡಿದೆ. ನನ್ನ ಕನಸು ಈಡೇರಿದ್ದಕ್ಕೆ ತುಂಬಾ ಹೆಮ್ಮೆ ಹಾಗೂ ಖುಷಿಯಾಗುತ್ತಿದೆ’’ ಎಂದು ಸ್ಯಾಮ್ಸನ್ ಹೇಳಿದ್ದಾರೆ.