ಟಿ20 ವಿಶ್ವಕಪ್ | ಮಿಂಚಿದ ಭಾರತದ ಪ್ರಮುಖ ಐವರು ಆಟಗಾರರು
ಸಂಜು ಸ್ಯಾಮ್ಸನ್ , ಇಶಾನ್ ಕಿಶನ್ , ಅಭಿಷೇಕ್ ಶರ್ಮಾ | Photo Credit : PTI
ಅಹ್ಮದಾಬಾದ್, ಮಾ. 9: ಈಗಷ್ಟೇ ಮುಕ್ತಾಯಗೊಂಡಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ, ಪರದಾಡುತ್ತಿದ್ದ ಭಾರತೀಯ ಅಗ್ರ ಕ್ರಮಾಂಕಕ್ಕೆ ಸಂಜು ಸ್ಯಾಮ್ಸನ್ ಸೇರ್ಪಡೆ ಶಕ್ತಿ ತುಂಬಿದೆ. ಮೊದಲ ಐದು ಪಂದ್ಯಗಳಲ್ಲಿ, ಭಾರತದ ಆರಂಭಿಕ ಭಾಗೀದಾರಿಕೆಯ ಸರಾಸರಿ 6.80 ಆಗಿತ್ತು. ಈ ಪೈಕಿ ನಾಲ್ಕು ಪಂದ್ಯಗಳಲ್ಲಿ, ಸ್ಯಾಮ್ಸನ್ ಭಾರತೀಯ ಆಡುವ 11ರ ತಂಡದ ಭಾಗವಾಗಿರಲಿಲ್ಲ. ಇಶಾನ್ ಕಿಶನ್ ಮತ್ತು ಅಭಿಷೇಕ್ ಶರ್ಮಾ ಆರಂಭಿಕ ಆಟಗಾರರಾಗಿದ್ದರು.
ಝಿಂಬಾಬ್ವೆ ವಿರುದ್ಧದ ಸೂಪರ್ ಎಂಟು ಪಂದ್ಯದಿಂದ ಆರಂಭಿಸಿ ಮುಂದಿನ ನಾಲ್ಕು ಪಂದ್ಯಗಳಲ್ಲಿ ಭಾರತೀಯ ಆರಂಭಿಕ ಭಾಗೀದಾರಿಕೆಯ ಸರಾಸರಿ 48.75ಕ್ಕೆ ಏರಿತು. ಈ ಪಂದ್ಯಗಳಲ್ಲಿ ಅಭಿಷೆೇಕ್‌ರೊಂದಿಗೆ ಸ್ಯಾಮ್ಸನ್ ಆರಂಭಿಕ ಆಟಗಾರನಾಗಿ ಆಡಿದರು. ಸೂಪರ್ ಎಂಟು ಹಂತದಲ್ಲಿ, ಕೇವಲ ಎರಡು ತಂಡಗಳು- ಪಾಕಿಸ್ತಾನ ಮತ್ತು ನ್ಯೂಝಿಲ್ಯಾಂಡ್- ಇದಕ್ಕಿಂತ ಉತ್ತಮ ಸಾಧನೆಯನ್ನು ಮಾಡಿವೆ. ಆದರೆ, ರನ್‌ಧಾರಣೆ ಗತಿಯನ್ನು ಭಾರತದಷ್ಟು ವೇಗವಾಗಿ ಏರಿಸಲು ಬೇರೆ ಯಾವುದೇ ತಂಡಕ್ಕೆ ಸಾಧ್ಯವಾಗಿಲ್ಲ.
ಸ್ಯಾಮ್ಸನ್ ಈ ಪಂದ್ಯಾವಳಿಯಲ್ಲಿ ಒಟ್ಟು 321 ರನ್‌ಗಳನ್ನು ಗಳಿಸಿದರು. ಆ ಮೂಲಕ, ಟಿ20 ವಿಶ್ವಕಪ್ ಒಂದರಲ್ಲಿ ಗರಿಷ್ಠ ರನ್‌ಗಳನ್ನು ದಾಖಲಿಸಿದ ಭಾರತೀಯ ಎಂಬ ವಿರಾಟ್ ಕೊಹ್ಲಿಯ 2014ರ ದಾಖಲೆಯನ್ನು ಸ್ಯಾಮ್ಸನ್ ಹಿಂದಿಕ್ಕಿದ್ದಾರೆ.
ಜಸ್‌ಪ್ರಿತ್ ಬುಮ್ರಾ: ಜಸ್‌ಪ್ರೀತ್ ಬುಮ್ರಾ ಮತ್ತೊಮ್ಮೆ ಭಾರತದ ಪ್ರಶಸ್ತಿ ವಿಜಯದಲ್ಲಿ ಬೌಲರ್ ಆಗಿ ಮಹತ್ವದ ಪಾತ್ರವನ್ನು ವಹಿಸಿದರು. ಅವರು ಈ ಪಂದ್ಯಾವಳಿಯಲ್ಲಿ ಒಟ್ಟು 14 ವಿಕೆಟ್‌ಗಳನ್ನು ಉರುಳಿಸಿದರು. ಇದರಲ್ಲಿ, ನ್ಯೂಝಿಲ್ಯಾಂಡ್ ವಿರುದ್ಧದ ಫೈನಲ್‌ನಲ್ಲಿ ಅವರು ಗಳಿಸಿದ ನಾಲ್ಕು ವಿಕೆಟ್‌ಗಳೂ ಸೇರಿವೆ. ಅವರು ಫೈನಲ್‌ನಲ್ಲಿ 15 ರನ್‌ಗಳನ್ನು ಕೊಟ್ಟು ನಾಲ್ಕು ವಿಕೆಟ್‌ಗಳನ್ನು ಉರುಳಿಸಿದರು. ಇದು ಅವರ ಜೀವನಶ್ರೇಷ್ಠ ನಿರ್ವಹಣೆಯಾಗಿದೆ.
ಅಕ್ಷರ್ ಪಟೇಲ್: ಈ ವಿಶ್ವಕಪ್‌ನಲ್ಲಿ ಭಾರತೀಯ ಆಟಗಾರರ ಕ್ಯಾಚ್ ಹಿಡಿಯುವಿಕೆ ಭಾರೀ ಚರ್ಚೆಯ ವಿಷಯವಾಗಿತ್ತು. ಭಾರತೀಯರು 13 ಕ್ಯಾಚ್‌ಗಳನ್ನು ಕೈಚೆಲ್ಲಿದರು. ಸೂಪರ್ 8 ಹಂತದ ಕೊನೆಯವರೆಗೆ ಭಾರತದ ಕ್ಯಾಚಿಂಗ್ ದಕ್ಷತೆ 71.7 ಶೇಕಡ ಆಗಿತ್ತು. ಅದು ಸೂಪರ್ 8ರಲ್ಲಿದ್ದ 8 ತಂಡಗಳ ಪೈಕಿ ಅತ್ಯಂತ ಕಳಪೆಯಾಗಿತ್ತು.
ಆದರೆ, ಅಕ್ಷರ್ ಪಟೇಲ್ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಮಹತ್ವದ ಕ್ಯಾಚ್‌ಗಳನ್ನು ಪಡೆದರು.
ಶಿವಮ್ ದುಬೆ: ಇನಿಂಗ್ಸ್ ಕೊನೆಯಲ್ಲಿ ಶಿವಮ್ ದುಬೆಯ ಸ್ಫೋಟಕ ಬ್ಯಾಟಿಂಗ್ ಭಾರತದ ಯಶಸ್ಸಿಗೆ ಮಹತ್ವದ ದೇಣಿಗೆಯನ್ನು ನೀಡಿದೆ. ಫೈನಲ್‌ನಲ್ಲಿ ಜೇಮ್ಸ್ ನೀಶ್ ಹಾಕಿದ ಅಂತಿಮ ಓವರ್‌ನಲ್ಲಿ ಅವರು 24 ರನ್‌ಗಳನ್ನು ಸೂರೆಗೈದರು. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲೂ ದುಬೆ ಕೇವಲ 25 ಎಸೆತಗಳಲ್ಲಿ 43 ರನ್‌ಗಳನ್ನು ಸಿಡಿಸಿದ್ದರು.
ಸೂರ್ಯಕುಮಾರ್ ಯಾದವ್: ಕಳಪೆ ಬ್ಯಾಟಿಂಗ್ ನಿರ್ವಹಣೆಗಾಗಿ ಟೀಕೆಯನ್ನು ಎದುರಿಸುತ್ತಿದ್ದರೂ ಸೂರ್ಯಕುಮಾರ್ ಯಾದವ್ ನಾಯಕನಾಗಿ ಭಾರತವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಅವರು ಫಾರ್ಮ್ ಕೊರತೆ ಎದುರಿಸುತ್ತಿದ್ದ ಅಭಿಷೆೇಕ್ ಶರ್ಮಾ ಮತ್ತು ವರುಣ್ ಚಕ್ರವರ್ತಿ ಮೇಲೆ ಭರವಸೆ ಇರಿಸಿದರು. ಅದು ಫಲ ನೀಡಿತು. ಫೈನಲ್‌ನಲ್ಲಿ ಅಭಿಷೆೇಕ್ ಅರ್ಧ ಶತಕ ಬಾರಿಸಿದರು ಹಾಗೂ ವರುಣ್ ಜಂಟಿ ಗರಿಷ್ಠ ವಿಕೆಟ್ ಗಳಿಕೆದಾರನಾದರು.