ನೀರಜ್ ಚೋಪ್ರಾ | Photo Credit : PTI  

ಹೊಸದಿಲ್ಲಿ, ಆ. 28: ಈ ಋತುವಿನಲ್ಲಿ ಕೇವಲ ಎರಡು ಡೈಮಂಡ್ ಲೀಗ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದರೂ ಕೂಡ ಭಾರತದ ಖ್ಯಾತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಸೆಪ್ಟೆಂಬರ್ 5ರಂದು ಬ್ರಸೆಲ್ಸ್‌ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ ಫೈನಲ್ಸ್‌ ಗೆ ಅರ್ಹತೆ ಪಡೆದಿದ್ದಾರೆ.

ಝೂರಿಚ್‌ನಲ್ಲಿ ಗುರುವಾರ ಕೊನೆಯ ಡೈಮಂಡ್ ಲೀಗ್ ಕ್ರೀಡಾಕೂಟ ಕೊನೆಗೊಂಡ ನಂತರ ಅಂತಿಮ ಅಂಕಪಟ್ಟಿಯನ್ನು ನವೀಕರಿಸಲಾಗಿದೆ.

ಜೂನ್ 19ರಂದು ದೋಹಾ ಹಾಗೂ ಆಗಸ್ಟ್ 21ರಂದು ಲೌಸಾನ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಚೋಪ್ರಾ ಒಟ್ಟು 12 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಪಡೆದಿದ್ದಾರೆ.

ಪುರುಷರ ಜಾವೆಲಿನ್ ಅಂಕಪಟ್ಟಿಯಲ್ಲಿ ಅಗ್ರ ಆರು ಸ್ಥಾನದಲ್ಲಿರುವ ಕ್ರೀಡಾಪಟುಗಳು ಡೈಮಂಡ್ ಲೀಗ್ ಫೈನಲ್ಸ್‌ಗೆ ಅರ್ಹತೆ ಪಡೆಯುತ್ತಾರೆ.

ಈ ವರ್ಷ 14 ಡೈಮಂಡ್ ಲೀಗ್ ಕ್ರೀಡಾಕೂಟಗಳು ನಡೆದಿದ್ದವು. ಕೇವಲ ಐದು ಕ್ರೀಡಾಕೂಟಗಳಲ್ಲಿ ಪುರುಷರ ಜಾವೆಲಿನ್ ಸ್ಪರ್ಧೆ ಇತ್ತು. ಕಳೆದ ವರ್ಷದ ಸೆಪ್ಟೆಂಬರ್‌ನಿಂದ ಕಾಡುತ್ತಿರುವ ಬೆನ್ನುನೋವಿನಿಂದ ಚೇತರಿಸಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಚೋಪ್ರಾ ಅವರು ಕೇವಲ ಎರಡು ಕ್ರೀಡಾಕೂಟಗಳಲ್ಲಿ ಸ್ಪರ್ಧಿಸಿದ್ದಾರೆ.

ಗಾಯದಿಂದಾಗಿ ವಿಳಂಬವಾಗಿ ಸ್ಪರ್ಧಾ ಕಣಕ್ಕೆ ಮರಳಿದ್ದ ಚೋಪ್ರಾ ದೋಹಾದಲ್ಲಿ ಜೂನ್‌ನಲ್ಲಿ ನಡೆದಿದ್ದ ಡೈಮಂಡ್ ಲೀಗ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

ಗ್ಲಾಸ್ಗೊ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸಂಪೂರ್ಣ ಫಿಟ್ ಆಗಿದ್ದ ಚೋಪ್ರಾ ಅವರು ವರ್ಷದ ಶ್ರೇಷ್ಠ ಪ್ರದರ್ಶನವಾದ (85.83 ಮೀಟರ್) ಮೂಲಕ ಬೆಳ್ಳಿ ಪದಕವನ್ನು ಗೆದ್ದಿದ್ದರು. ಲೌಸಾನ್ ಡೈಮಂಡ್ ಲೀಗ್‌ನಲ್ಲಿ 88.05 ಮೀಟರ್ ದೂರ ಜಾವೆಲಿನ್ ಎಸೆದು ತಮ್ಮ ಪ್ರದರ್ಶನ ಮಟ್ಟವನ್ನು ಉತ್ತಮಪಡಿಸಿಕೊಂಡಿದ್ದರು.

ಡೈಮಂಡ್ ಲೀಗ್ ಫೈನಲ್ಸ್ ಬ್ರಸೆಲ್ಸ್‌ನಲ್ಲಿ ಸೆಪ್ಟೆಂಬರ್ 4 ಹಾಗೂ 5ರಂದು ಎರಡು ದಿನಗಳ ಕಾಲ ನಡೆಯಲಿದೆ. ಪುರುಷರ ಜಾವೆಲಿನ್ ಫೈನಲ್ ಪಂದ್ಯವು ಸೆ. 5ರಂದು ನಿಗದಿಯಾಗಿದೆ.

ಪ್ರತಿಯೊಂದು ಸ್ಪರ್ಧೆಯ ವಿಜೇತರು ಟ್ರೋಫಿ ಹಾಗೂ ಕನಿಷ್ಠ 30,000 ಅಮೆರಿಕನ್ ಡಾಲರ್ ಬಹುಮಾನ ಮೊತ್ತ ಸ್ವೀಕರಿಸಲಿದ್ದಾರೆ. 8ನೇ ಸ್ಥಾನ ಪಡೆಯುವ ಸ್ಪರ್ಧಾಳು 1,000 ಯುಎಸ್ ಡಾಲರ್ ಪಡೆಯಲಿದ್ದಾರೆ.

ಎಲ್ಲ ಐದು ಡೈಮಂಡ್ ಲೀಗ್ ಜಾವೆಲಿನ್ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಶ್ರೀಲಂಕಾದ ಅತ್ಲೀಟ್ ರುಮೇಶ್ ಪಥಿರಗೆ ಒಟ್ಟು 39 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. 23ರ ವಯಸ್ಸಿನ ರುಮೇಶ್ ನಾಲ್ಕು ಸ್ಪರ್ಧೆಗಳಲ್ಲಿ ಜಯಶಾಲಿಯಾದರೆ, ಒಂದು ಸ್ಪರ್ಧೆಯಲ್ಲಿ ರನ್ನರ್-ಅಪ್ ಆಗಿದ್ದಾರೆ. ಝೂರಿಚ್‌ನಲ್ಲಿ 92.07 ಮೀ. ದೂರ ಜಾವೆಲಿನ್ ಎಸೆದಿರುವ ರುಮೇಶ್ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಡೈಮಂಡ್ ಲೀಗ್ ಫೈನಲ್ಸ್‌ನಲ್ಲಿ ಪ್ರಶಸ್ತಿ ಫೇವರಿಟ್ ಆಗಿದ್ದಾರೆ.

ಟ್ರಿನಿಡಾಡ್‌ನ ಕೆಶೋರ್ನ್ ವಾಲ್ಕಟ್ (23 ಅಂಕ), ಅಮೆರಿಕದ ಕಾರ್ಟಿಸ್ ಥಾಮ್ಸನ್ (20 ಅಂಕ) ಹಾಗೂ ಕೀನ್ಯದ ಜುಲಿಯಸ್ ಯೆಗೊ (13 ಅಂಕ) ಕ್ರಮವಾಗಿ 3ನೇ, 4ನೇ ಹಾಗೂ 5ನೇ ಸ್ಥಾನದಲ್ಲಿದ್ದಾರೆ.

ನೀರಜ್ ಚೋಪ್ರಾ 2022ರಲ್ಲಿ ಡೈಮಂಡ್ ಲೀಗ್ ಫೈನಲ್ ಪ್ರಶಸ್ತಿ ಜಯಿಸಿದ್ದರು. ಆ ನಂತರ ಮೂರು ಬಾರಿ ರನ್ನರ್-ಅಪ್ ಆಗಿದ್ದರು. ಇದೀಗ ಮತ್ತೊಂದು ಡೈಮಂಡ್ ಲೀಗ್ ಟ್ರೋಫಿಯನ್ನು ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor