ಅಮಿತ್ ಶಾ | Photo Credit : PTI  

ಅಹ್ಮದಾಬಾದ್, ಆ. 28: ಗೃಹ ಸಚಿವ ಅಮಿತ್ ಶಾ ಅವರು 2030ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕಾಗಿ ಭಾರತದ ಸಿದ್ಧತೆಗಳನ್ನು ಪರಿಶೀಲಿಸಿದರು. ದೇಶದ 2036ರ ಒಲಿಂಪಿಕ್ಸ್ ಬಿಡ್ ಬಗ್ಗೆಯೂ ಚರ್ಚಿಸಿದರು. ಈ ಸಭೆಯಲ್ಲಿ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಹಾಗೂ ಗುಜರಾತ್ ಉಪ ಮುಖ್ಯಮಂತ್ರಿ ಹರ್ಷ ಸಾಂಘವಿ ಅವರು ಭಾಗವಹಿಸಿದ್ದರು.

‘ಅಂತರ್‌ರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸುವುದರೊಂದಿಗೆ ಭಾರತವನ್ನು ಜಾಗತಿಕ ಕ್ರೀಡಾ ತಾಣವನ್ನಾಗಿ ಸ್ಥಾಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ. 2036ರ ಒಲಿಂಪಿಕ್ಸ್‌ಗೆ ಭಾರತದ ಬಿಡ್ ಕುರಿತು ಹಾಗೂ 2029ರ ಪೊಲೀಸ್ ಹಾಗೂ ಅಗ್ನಿಶಾಮಕ ಕ್ರೀಡಾಕೂಟ ಮತ್ತು 2030ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಅಹ್ಮದಾಬಾದ್‌ ನಲ್ಲಿ ಆಯೋಜಿಸುವ ಸಿದ್ಧತೆಗಳ ಕುರಿತು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದೇನೆ’ ಎಂದು ಶಾ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್ ಎರಡು ದಶಕಗಳ ನಂತರ ಭಾರತಕ್ಕೆ ವಾಪಸಾಗಲಿದೆ. ಅದು ಅಹ್ಮದಾಬಾದ್‌ ನಲ್ಲಿ ನಡೆಯಲಿದೆ. 2010ರಲ್ಲಿ ಹೊಸದಿಲ್ಲಿಯು ಮೊದಲ ಬಾರಿ ಗೇಮ್ಸ್ ಆಯೋಜಿಸಿತ್ತು.

2036ರ ಒಲಿಂಪಿಕ್ ಗೇಮ್ಸ್ ಆಯೋಜಿಸಲು ಅಹ್ಮದಾಬಾದ್ ನಗರ ಸ್ಪರ್ಧೆಯಲ್ಲಿದೆ. ಇವೆಲ್ಲದರ ಮೊದಲು ಅಹ್ಮದಾಬಾದ್‌ನಲ್ಲಿ ಪ್ರಮುಖ ಬಹು-ಕ್ರೀಡಾ ಅಂತರ್‌ರಾಷ್ಟ್ರೀಯ ಸ್ಪರ್ಧೆ ವಿಶ್ವ ಪೊಲೀಸ್ ಹಾಗೂ ಅಗ್ನಿಶಾಮಕ ಕ್ರೀಡಾಕೂಟವು 2029ರಲ್ಲಿ ನಡೆಯಲಿದೆ. ಇದರಲ್ಲಿ 70 ದೇಶಗಳಿಂದ ಸುಮಾರು 10,000 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor