ಪಾಕಿಸ್ತಾನದ ಟೆಸ್ಟ್ ತಂಡದ ನಾಯಕನಾಗಿ ಬಾಬರ್ ಆಝಂ ಮರು ನೇಮಕ
Photo credit: PTI
ಕರಾಚಿ, ಜು.5: ಈ ತಿಂಗಳಾಂತ್ಯದಲ್ಲಿ ವೆಸ್ಟ್‌ಇಂಡೀಸ್‌ನಲ್ಲಿ ಆರಂಭವಾಗಲಿರುವ ಎರಡು ಪಂದ್ಯಗಳ ಸರಣಿಗಾಗಿ ಶಾನ್ ಮಸೂದ್ ಬದಲಿಗೆ ಬಾಬರ್ ಆಝಂ ಅವರು ಪಾಕಿಸ್ತಾನದ ಟೆಸ್ಟ್ ತಂಡದ ನಾಯಕನಾಗಿ ಮರು ನೇಮಕಗೊಂಡಿದ್ದಾರೆ.
ಬಾಬರ್ ಎರಡನೇ ಬಾರಿ ಟೆಸ್ಟ್ ತಂಡದ ನಾಯಕನಾಗಿ ನೇಮಕವಾಗಿದ್ದು, 16 ಟೆಸ್ಟ್ ಪಂದ್ಯಗಳಲ್ಲಿ ಪಾಕಿಸ್ತಾನ ತಂಡದ ನಾಯಕನಾಗಿ 12ರಲ್ಲಿ ಸೋತಿರುವ ಮಸೂದ್ ತನ್ನ ಸ್ಥಾನ ಕಳೆದುಕೊಂಡಿದ್ದಾರೆ.
‘‘ಶಾನ್ ಮಸೂದ್ ನಾಯಕತ್ವದಲ್ಲಿ ನಾವು ಹಲವು ಟೆಸ್ಟ್ ಪಂದ್ಯಗಳನ್ನು ಸೋತಿದ್ದನ್ನು ನೋಡಿದ್ದೇವೆ. ಸೆಂಚೂರಿಯನ್ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾದ ಇಬ್ಬರು ಬ್ಯಾಟರ್‌ಗಳು 10ನೇ ವಿಕೆಟ್‌ನಲ್ಲಿ 51 ರನ್ ಜೊತೆಯಾಟ ನಡೆಸಿದ್ದರು. ಪಂದ್ಯವು ನಮ್ಮ ಕೈಯಲ್ಲಿರುವುದಿಲ್ಲ. ಆದರೆ, ಮುಲ್ತಾನ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಸುಲಭವಾಗಿ ಸೋತಿದ್ದೆವು’’ ಎಂದು ಪಾಕಿಸ್ತಾನದ ಉನ್ನತ ಪ್ರದರ್ಶನದ ನಿರ್ದೇಶಕ ಆಕಿಬ್ ಜಾವೇದ್ ಹೇಳಿದ್ದಾರೆ.
ಬಾಬರ್ ಆಝಂ ಈ ಹಿಂದೆ 2021ರಲ್ಲಿ ನಾಯಕನಾಗಿ ನೇಮಕವಾಗಿದ್ದರು. 20 ಪಂದ್ಯಗಳಲ್ಲಿ ಪಾಕಿಸ್ತಾನ ತಂಡದ ನಾಯಕತ್ವವಹಿಸಿದ್ದ ಬಾಬರ್ ಅವರು ಮಸೂದ್‌ಗೆ ನಾಯಕತ್ವವಹಿಸಿಕೊಡುವ ಮೊದಲು 10 ಪಂದ್ಯಗಳಲ್ಲಿ ಗೆದ್ದಿದ್ದರು.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಪಾಕಿಸ್ತಾನ ತಂಡವು ಸದ್ಯ 9ನೇ ಸ್ಥಾನದಲ್ಲಿದೆ. ವೆಸ್ಟ್‌ಇಂಡೀಸ್ ಕ್ರಿಕೆಟ್ ಪ್ರವಾಸದ ನಂತರ ಪಾಕಿಸ್ತಾನ ತಂಡವು ಮೂರು ಪಂದ್ಯಗಳ ಸರಣಿಯನ್ನಾಡಲು ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದೆ. ಆರು ವರ್ಷಗಳ ನಂತರ ಮೊದಲ ಬಾರಿ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲಿದೆ.