IPL 2026 | RCBಯ ʼರಜತʼದಾಟ; ಫೈನಲ್ ಗೇರಲು ಒಂದೇ ಇನ್ನಿಂಗ್ಸ್ ಬಾಕಿ
ಕ್ವಾಲಿಫೈಯರ್ ನಲ್ಲಿ ಗುಜರಾತ್ ಗೆ 255 ರನ್ ಗಳ ಗುರಿ
Photo : x@RCBTweets
ಧರ್ಮಶಾಲಾ: ನಾಯಕ ರಜತ್ ಪಾಟಿದಾರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು IPL 2026ರ ಕ್ವಾಲಿಫೈಯರ್–1 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 20 ಓವರ್ಗಳಲ್ಲಿ 5 ವಿಕೆಟ್ಗೆ 254 ರನ್ ಗಳಿಸಿತು.
ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ನಾಯಕ ಶುಭಮನ್ ಗಿಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆದರೆ RCB ಬ್ಯಾಟರ್ಗಳ ಅಬ್ಬರದ ಎದುರು GT ಬೌಲರ್ಗಳು ಸಂಪೂರ್ಣವಾಗಿ ಮಂಕಾದರು.
RCB ಪರ ನಾಯಕ ರಜತ್ ಪಾಟಿದಾರ್ ಕೇವಲ 33 ಎಸೆತಗಳಲ್ಲಿ 93 ರನ್ ಸಿಡಿಸಿ ತಂಡದ ಮೊತ್ತವನ್ನು ಬೃಹತ್ ಮಟ್ಟಕ್ಕೆ ಕೊಂಡೊಯ್ದರು. ಆರಂಭಿಕ ಹಂತದಲ್ಲಿ ವಿರಾಟ್ ಕೊಹ್ಲಿ 43 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿದರು. ಮಧ್ಯಮ ಕ್ರಮಾಂಕದಲ್ಲಿ ಕೃಣಾಲ್ ಪಾಂಡ್ಯ 43 ರನ್ ಸೇರಿಸಿ ಪಾಟಿದಾರ್ ಗೆ ಉತ್ತಮ ಸಾಥ್ ನೀಡಿದರು.
ಈ ಪಂದ್ಯದಲ್ಲಿ RCB ದಾಖಲಿಸಿದ 254 ರನ್ಗಳು IPL ಪ್ಲೇಆಫ್ ಇತಿಹಾಸದಲ್ಲಿ ತಂಡದ ಅತ್ಯಧಿಕ ಮೊತ್ತವಾಗಿದೆ.
ಇದೇ ವೇಳೆ ವಿರಾಟ್ ಕೊಹ್ಲಿ ಮತ್ತೊಂದು ಮೈಲಿಗಲ್ಲು ನಿರ್ಮಿಸಿದರು. IPL ಇತಿಹಾಸದಲ್ಲಿ ಸತತ ನಾಲ್ಕು ಋತುಗಳಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎಂಬ ಸಾಧನೆಗೆ ಅವರು ಪಾತ್ರರಾದರು.
ಕ್ವಾಲಿಫೈಯರ್–1 ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡವು ನೇರವಾಗಿ IPL 2026ರ ಫೈನಲ್ ಗೆ ಪ್ರವೇಶಿಸಲಿದೆ.