×
Ad

ಟಿ20 ವಿಶ್ವಕಪ್‌ ನಿಂದ ಸಂಜು ಸ್ಯಾಮ್ಸನ್ ಹೊರಗೆ?

Update: 2025-12-10 22:14 IST

ಸಂಜು ಸ್ಯಾಮ್ಸನ್ | Photo Credit : PTI 

ಮುಂಬೈ, ಡಿ. 10: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯಕ್ಕೆ ಸಂಜು ಸ್ಯಾಮ್ಸನ್ ಬದಲು ಜಿತೇಶ್ ಶರ್ಮಾರನ್ನು ಆಯ್ಕೆ ಮಾಡಿರುವುದು ಮುಂಬರುವ ಟಿ20 ವಿಶ್ವಕಪ್‌ಗೆ ಭಾರತೀಯ ತಂಡಾಡಳಿತವು ಯಾವ ಯೋಜನೆಯನ್ನು ರೂಪಿಸಿದೆ ಎನ್ನುವುದರ ಸ್ಪಷ್ಟ ಚಿತ್ರಣವೊಂದನ್ನು ನೀಡಿದೆ.

ಈ ಆಯ್ಕೆಯನ್ನು ಪ್ರಶ್ನಿಸುವುದು ಕಷ್ಟ. ಶುಭಮನ್ ಗಿಲ್ ಟಿ20 ತಂಡಕ್ಕೆ ಮರಳಿದ ಬಳಿಕ, ಸ್ಯಾಮ್ಸನ್‌ ರನ್ನು ಅಗ್ರ ಕ್ರಮಾಂಕದಿಂದ ಹೊರಗಿಡಲಾಗಿದೆ. ಅಂದಿನಿಂದ, ಆಡುವ 11ರಲ್ಲಿ ಸ್ಥಾನ ಪಡೆಯಲು ಅವರು ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಕೆಳ ಕ್ರಮಾಂಕಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿರುವ ಅಗ್ರ ಕ್ರಮಾಂಕದ ಆಟಗಾರನೊಬ್ಬನ ಬದಲು, ಪಂದ್ಯಗಳ ಕೊನೆಯಲ್ಲಿ ಉತ್ತಮ ನಿರ್ವಹಣೆಗಳನ್ನು ನೀಡಿರುವ ಕೆಳ ಕ್ರಮಾಂಕದ ಆಟಗಾರನನ್ನೇ ತಂಡಾಡಳಿತವು ಆಯ್ಕೆ ಮಾಡಿರುವುದು ಎದ್ದು ಕಾಣುತ್ತಿದೆ.

ಪಂದ್ಯಗಳನ್ನು ಉತ್ತಮವಾಗಿ ಮುಗಿಸುವುದೇ ತನ್ನ ಪ್ರಧಾನ ಕೆಲಸ ಎಂಬುದಾಗಿ ಭಾವಿಸಿರುವ ಜಿತೇಶ್ ಈಗ ವಿಶ್ವಕಪ್ ತಂಡಕ್ಕೆ ಸೇರ್ಪಡೆಗೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ ಅನಿಸುತ್ತದೆ. ಆದರೆ, ಇದು ದಕ್ಷಿಣ ಆಫ್ರಿಕಾ ಮತ್ತು ನ್ಯೂಝಿಲ್ಯಾಂಡ್ ವಿರುದ್ಧದ ಸರಣಿಗಳಲ್ಲಿ ಅವರ ನಿರ್ವಹಣೆಯನ್ನು ಅವಲಂಬಿಸಿದೆ. ಈ ಹಂತದಲ್ಲಿ ವಿಕೆಟ್‌ ಕೀಪರ್ ಸ್ಥಾನಕ್ಕೆ ಜಿತೇಶ್ ಮತ್ತು ಸ್ಯಾಮ್ಸನ್ ನಡುವೆ ಸ್ಪರ್ಧೆ ಇದೆ. ಉಳಿದವರಿಗೆ ಇಲ್ಲಿ ಅವಕಾಶ ಇಲ್ಲ.

‘‘ಇದು ಸರಿಯಾದ ನಿರ್ಧಾರ. ಸಂಜು ಅಗ್ರ ಮೂರರ ಕ್ರಮಾಂಕದಲ್ಲಿ ಆಡದಿದ್ದರೆ ಮತ್ತು ವಿಕೆಟ್‌ ಕೀಪರ್ ಮಧ್ಯ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದಾದರೆ, ಅಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್ ಬದಲು ಕೆಳ ಕ್ರಮಾಂಕದಲ್ಲಿ ಆಡುವ ಪರಿಣತ ಬ್ಯಾಟರನ್ನೇ ಇಳಿಸುವುದು ಉತ್ತಮ. ಕೊನೆಯಲ್ಲಿ ಎರಡು ಅಥವಾ ನಾಲ್ಕು ಎಸೆತಗಳನ್ನು ಆಡುವುದು ಸುಲಭವಲ್ಲ’’ ಎಂದು ಮಾಜಿ ವಿಕೆಟ್‌ಕೀಪರ್ ದೀಪ್ ದಾಸ್‌ಗುಪ್ತ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News