ಡಿ.11ರಂದು ಎರಡನೇ ಟಿ-20: ಭಾರತ-ದಕ್ಷಿಣ ಆಫ್ರಿಕಾ ಹಣಾಹಣಿ
Photo Credit : PTI
ನ್ಯೂ ಚಂಡಿಗಡ, ಡಿ.10: ಆಲ್ ರೌಂಡ್ ಪ್ರದರ್ಶನದ ಮೂಲಕ ಸರಣಿಯ ಮೊದಲ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿರುವ ಟೀಮ್ ಇಂಡಿಯಾ ಗುರುವಾರ ನಡೆಯಲಿರುವ ಎರಡನೇ ಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವನ್ನು ಎದುರಿಸಲಿದೆ.
ಕುತ್ತಿಗೆ ನೋವಿನಿಂದ ಚೇತರಿಸಿಕೊಂಡು ವಾಪಸಾಗಿರುವ ಆರಂಭಿಕ ಆಟಗಾರ ಶುಭಮನ್ ಗಿಲ್ ಚುಟುಕು ಮಾದರಿಯ ಕ್ರಿಕೆಟ್ ನಲ್ಲಿ ತನ್ನ ಫಾರ್ಮ್ ಕಂಡುಕೊಳ್ಳುವತ್ತ ಗಮನ ಹರಿಸಲಿದ್ದಾರೆ.
ಸೆಪ್ಟಂಬರ್‌ನಲ್ಲಿ ನಡೆದ ಏಶ್ಯಕಪ್ ಟೂರ್ನಿಯ ವೇಳೆ ಟಿ-20 ಕ್ರಿಕೆಟಿಗೆ ವಾಪಸಾದ ನಂತರ ಗಿಲ್ ಅವರು ತನ್ನ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಆದರೆ ಟೀಮ್ ಮ್ಯಾನೇಜ್‌ಮೆಂಟ್ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾಗೆ ಅವಕಾಶ ನೀಡದೆ ಗಿಲ್ ಅವರನ್ನು ಅಗ್ರ ಸರದಿಯಲ್ಲೇ ಕಣಕ್ಕಿಳಿಸುವ ಮೂಲಕ ಬೆಂಬಲಕ್ಕೆ ನಿಂತಿದೆ.
ಎಂಟನೇ ಕ್ರಮಾಂಕದ ತನಕವೂ ಭಾರತದ ಬ್ಯಾಟಿಂಗ್ ಸರದಿ ವಿಸ್ತರಿಸಿದೆ. ತಂಡವು ನಿರ್ಭೀತಿಯಿಂದ ಆಕ್ರಮಣಕಾರಿ ಶೈಲಿಯಲ್ಲಿ ಬ್ಯಾಟಿಂಗ್ ಮಾಡುತ್ತಿದೆ. ಗಿಲ್ ಇದಕ್ಕೆ ಕ್ಷಿಪ್ರವಾಗಿ ಹೊಂದಿಕೊಳ್ಳುವ ಅಗತ್ಯವಿದೆ. ಕಳೆದ ವರ್ಷ ಟಿ-20 ವಿಶ್ವಕಪ್ ತನಕ ವಿರಾಟ್ ಕೊಹ್ಲಿ ನಿರ್ವಹಿಸುತ್ತಿದ್ದ ಪಾತ್ರವನ್ನು ನಿಭಾಯಿಸುವವರು ಈಗ ತಂಡದಲ್ಲಿಲ್ಲ.
ನಾಯಕ ಸೂರ್ಯಕುಮಾರ್ ಯಾದವ್ ಕಳೆದೊಂದು ವರ್ಷದಿಂದ ಉತ್ತಮ ಫಾರ್ಮ್‌ನಲ್ಲಿಲ್ಲ. ಸ್ವದೇಶದಲ್ಲಿ ನಡೆಯಲಿರುವ 2026ರ ಟಿ-20 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಯಾದವ್ ಅವರು ಫಾರ್ಮ್ ಅಡಚಣೆಯಾದಂತೆ ಕಂಡುಬಂದಿದೆ.
ಭಾರತ ತಂಡವು ಮುಲ್ಲನ್‌ಪುರದ ಮಹಾರಾಜ ಯದವೀಂದ್ರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗೆಲುವಿನ ಆಡುವ 11ರ ಬಳಗಕ್ಕೆ ಅಂಟಿಕೊಳ್ಳುವ ಸಾಧ್ಯತೆಯಿದೆ. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 28 ಎಸೆತಗಳಲ್ಲಿ ಔಟಾಗದೆ 59 ರನ್ ಗಳಿಸಿದ್ದರು. ಮಾತ್ರವಲ್ಲ ಹಿರಿಯ ಬ್ಯಾಟರ್ ಡೇವಿಡ್ ಮಿಲ್ಲರ್ ವಿಕೆಟನ್ನು ಪಡೆದಿದ್ದರು.
ಭಾರತ ತಂಡ ಇತ್ತೀಚೆಗಿನ ದಿನಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 6-2 ಹೆಡ್-ಟು-ಹೆಡ್ ದಾಖಲೆಯನ್ನು ಹೊಂದಿದ್ದರೂ ಟಿ-20 ಕ್ರಿಕೆಟ್‌ನಲ್ಲಿ ಅಚ್ಚರಿ ಫಲಿತಾಂಶ ಬರುವ ಬಗ್ಗೆ ಅರಿವು ಹೊಂದಿದೆ. ವಿಶ್ವಕಪ್‌ಗಿಂತ ಮೊದಲು ಸ್ವದೇಶದಲ್ಲಿ ಆಡಲಿರುವ ಇನ್ನುಳಿದ 9 ಟಿ-20 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.
ಮುಲ್ಲನ್‌ಪುರದ ಸ್ಟೇಡಿಯಂನಲ್ಲಿ ಇದೇ ಮೊದಲ ಬಾರಿ ಪುರುಷರ ಕ್ರಿಕೆಟ್ ತಂಡದ ಅಂತರ್‌ರಾಷ್ಟ್ರೀಯ ಪಂದ್ಯ ನಡೆಯುತ್ತಿದೆ. ಭಾರತ ಹಾಗೂ ಆಸ್ಟ್ರೇಲಿಯದ ಮಹಿಳಾ ಕ್ರಿಕೆಟ್ ತಂಡಗಳು ಈ ವರ್ಷದ ಸೆಪ್ಟಂಬರ್‌ನಲ್ಲಿ ಎರಡು ಏಕದಿನ ಪಂದ್ಯಗಳನ್ನು ಆಡಿದ್ದವು. ಭಾರತದ ಬಹುತೇಕ ಆಟಗಾರರು ಈ ಮೈದಾನದಲ್ಲಿ ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ.
ಕಟಕ್‌ನಲ್ಲಿ ನಡೆದಿದ್ದ ಮೊದಲ ಟಿ-20 ಪಂದ್ಯದಲ್ಲಿ 176 ರನ್ ಚೇಸಿಂಗ್‌ಗೆ ತೊಡಗಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಇನಿಂಗ್ಸ್ ನ ಮೊದಲ ಓವರ್‌ನಲ್ಲೇ ಅರ್ಷದೀಪ್ ಸಿಂಗ್ ಶಾಕ್ ನೀಡಿದ್ದರು. ಅಪಾಯಕಾರಿ ಆಟಗಾರ ಕ್ವಿಂಟನ್ ಡಿಕಾಕ್ ವಿಕೆಟನ್ನು ಮೊದಲ ಓವರ್‌ನಲ್ಲೇ ಉರುಳಿಸಿದ್ದರು. ಪ್ರಮುಖ ಬ್ಯಾಟರ್ ಡಿಕಾಕ್ ವಿಕೆಟ್ ಪತನಗೊಂಡ ನಂತರ ದಕ್ಷಿಣ ಆಫ್ರಿಕಾ ಚೇತರಿಸಿಕೊಳ್ಳುವಲ್ಲಿ ವಿಫಲವಾಗಿ ಕೇವಲ 74 ರನ್‌ಗೆ ಆಲೌಟಾಯಿತು.
ಪಿಚ್ ರಿಪೋರ್ಟ್
ನ್ಯೂ ಚಂಡಿಗಡದ ಮುಲ್ಲನ್‌ಪುರದಲ್ಲಿರುವ ಮಹಾರಾಜ ಯದವೀಂದ್ರ ಸಿಂಗ್ ಇಂಟರ್‌ನ್ಯಾಶನಲ್ ಕ್ರಿಕೆಟ್ ಕ್ರೀಡಾಂಗಣವು ಬ್ಯಾಟಿಂಗ್ ಹಾಗೂ ಬೌಲಿಂಗ್ ನಡುವಿನ ಸಮತೋಲಿತ ಹಣಾಹಣಿಗೆ ಸಾಕ್ಷಿಯಾಗಲು ಸಜ್ಜಾಗಿದೆ. ಇನಿಂಗ್ಸ್‌ನ ಆರಂಭದಲ್ಲಿ ವೇಗದ ಔಟ್‌ಫೀಲ್ಡ್ ಬ್ಯಾಟರ್‌ಗಳಿಗೆ ನೆರವಾಗಬಹುದು. ಪಂದ್ಯ ಮುಂದುವರಿದಂತೆ ಸ್ಪಿನ್ನರ್‌ಗಳು ಉಪಯುಕ್ತವಾಗಬಲ್ಲರು. ಒಟ್ಟಾರೆ ಪಿಚ್ ಬೌಲರ್‌ಗಳಿಗಿಂತ ಬ್ಯಾಟರ್‌ಗಳಿಗೆ ಹೆಚ್ಚು ಸಹಕರಿಸುವ ನಿರೀಕ್ಷೆ ಇದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ತಂಡವು 6-5 ದಾಖಲೆ ಹೊಂದಿದ್ದು, 200ಕ್ಕೂ ಅಧಿಕ ರನ್ ಗಳಿಸಿದರೆ ಪಂದ್ಯ ಗೆಲ್ಲಬಹುದು.
ಟೀಮ್ ನ್ಯೂಸ್
ಚಂಡಿಗಡದಲ್ಲಿ ಒಂದು ವೇಳೆ ಪಿಚ್ ಒಣಗಿದ್ದರೆ ಕುಲದೀಪ್ ಅವರು ಅರ್ಷದೀಪ್ ಬದಲಿಗೆ ಆಡಬಹುದು. ಟೀಮ್ ಮ್ಯಾನೇಜ್‌ಮೆಂಟ್ ಬ್ಯಾಟಿಂಗ್ ಸರದಿಯನ್ನು ಬಲಪಡಿಸುವ ಬಗ್ಗೆ ಯೋಚಿಸಿದರೆ ಹರ್ಷಿತ್ ರಾಣಾ ಅವರು ಅರ್ಷದೀಪ್ ಬದಲಿಗೆ ಆಡಬಹುದು. ಇನ್ನುಳಿದಂತೆ ಯಾವುದೇ ಬದಲಾವಣೆ ಇರಲಾರದು.
ದಕ್ಷಿಣ ಆಫ್ರಿಕಾ ಮೊದಲ ಟಿ-20 ಪಂದ್ಯದಲ್ಲಿ ಹೀನಾಯವಾಗಿ ಸೋತಿದೆ. ಆಲ್‌ರೌಂಡರ್ ಲುಥೋ ಸಿಪಾಮ್ಲಾ ಬದಲಿಗೆ ಕಾರ್ಬಿನ್ ಬಾಷ್ ಅಥವಾ ಜಾರ್ಜ್ ಲಿಂಡೆ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.
ಅಂಕಿ-ಅಂಶಗಳು
► ಕೇವಲ ಮೂವರು ಆಟಗಾರರು ಟಿ-20 ಕ್ರಿಕೆಟ್‌ನಲ್ಲಿ 100 ಸಿಕ್ಸರ್‌ಗಳು ಹಾಗೂ 100 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಝಿಂಬಾಬ್ವೆಯ ಸಿಕಂದರ್ ರಝಾ, ಅಫ್ಘಾನಿಸ್ತಾನದ ಮುಹಮ್ಮದ್ ನಬಿ ಹಾಗೂಮಲೇಶ್ಯದ ವೀರಾನ್‌ದೀಪ್ ಸಿಂಗ್ ಅವರನ್ನೊಳಗೊಂಡ ಪಟ್ಟಿಗೆ ಸೇರಲು ಪಾಂಡ್ಯಗೆ ಒಂದು ವಿಕೆಟ್ ಅಗತ್ಯವಿದೆ.
► ಭಾರತ ತಂಡದ ಪರ ಅರ್ಷದೀಪ್ ಅವರು ಪವರ್‌ಪ್ಲೇ ಓವರ್‌ನಲ್ಲಿ ಜಂಟಿಗರಿಷ್ಠ ವಿಕೆಟ್‌ಗಳನ್ನು(47)ಪಡೆದಿದ್ದಾರೆ. ಭುವನೇಶ್ವರ ಕುಮಾರ್ ಅವರೊಂದಿಗೆ ಸಮಬಲ ಸಾಧಿಸಿದ್ದಾರೆ.
► ಜಸ್‌ಪ್ರಿತ್ ಬುಮ್ರಾ ಮೂರು ಅಂತರ್‌ರಾಷ್ಟ್ರೀಯ ಮಾದರಿಗಳ ಕ್ರಿಕೆಟ್‌ನಲ್ಲಿ 100 ವಿಕೆಟ್‌ಗಳನ್ನು ಉರುಳಿಸಿರುವ ಐದನೇ ಆಟಗಾರ ಎನಿಸಿಕೊಂಡಿದ್ದಾರೆ. ಶಾಕಿಬ್ ಅಲ್ ಹಸನ್, ಲಸಿತ್ ಮಾಲಿಂಗ, ಟಿಮ್ ಸೌಥಿ ಹಾಗೂ ಶಾಹೀನ್ ಶಾ ಅಫ್ರಿದಿ ಈ ಸಾಧನೆ ಮಾಡಿರುವ ಇತರ ಆಟಗಾರರಾಗಿದ್ದಾರೆ.
ತಂಡಗಳು
ಭಾರತ(ಸಂಭಾವ್ಯ):
1. ಅಭಿಷೇಕ್ ಶರ್ಮಾ, 2. ಶುಭಮನ್ ಗಿಲ್, 3. ಸೂರ್ಯಕುಮಾರ ಯಾದವ್(ನಾಯಕ), 4.ತಿಲಕ್ ವರ್ಮಾ, 5. ಜಿತೇಶ್ ಶರ್ಮಾ(ವಿಕೆಟ್‌ಕೀಪರ್), 6. ಹಾರ್ದಿಕ್ ಪಾಂಡ್ಯ, 7. ಶಿವಂ ದುಬೆ, 8. ಅಕ್ಷರ್ ಪಟೇಲ್, 9. ಅರ್ಷದೀಪ್ ಸಿಂಗ್, 10. ವರುಣ್ ಚಕ್ರವರ್ತಿ, 11. ಜಸ್‌ಪ್ರಿತ್ ಬುಮ್ರಾ.
ದಕ್ಷಿಣ ಆಫ್ರಿಕಾ(ಸಂಭಾವ್ಯ): 1. ಕ್ವಿಂಟನ್ ಡಿಕಾಕ್(ವಿಕೆಟ್‌ಕೀಪರ್), 2. ಏಡೆನ್ ಮರ್ಕ್ರಮ್(ನಾಯಕ), 3.ಟ್ರಿಸ್ಟನ್ ಸ್ಟಬ್ಸ್, 4. ಡೆವಾಲ್ಡ್ ಬ್ರೆವಿಸ್, 5. ಡೇವಿಡ್ ಮಿಲ್ಲರ್, 6.ಡೊನೊವನ್ ಫೆರೇರ, 7. ಮಾರ್ಕೊ ಜಾನ್ಸನ್, 8.ಲುಥೊ ಸಿಪಾಮ್ಲಾ/ಕಾರ್ಬಿನ್ ಬಾಷ್/ಜಾರ್ಜ್ ಲಿಂಡೆ, 9. ಕೇಶವ ಮಹಾರಾಜ್, 10. ಲುಂಗಿ ಗಿಡಿ, 11. ಅನ್ರಿಚ್ ನೋರ್ಟ್ಜೆ.
ಪಂದ್ಯ ಆರಂಭದ ಸಮಯ: ರಾತ್ರಿ 7:00