×
Ad

ಐಸಿಸಿ ಏಕದಿನ ರ‍್ಯಾಂಕಿಂಗ್ಸ್: ಅಗ್ರ ಎರಡು ಸ್ಥಾನದಲ್ಲಿ ರೋಹಿತ್-ವಿರಾಟ್

Update: 2025-12-10 21:49 IST

ರೋಹಿತ್ ಶರ್ಮಾ , ವಿರಾಟ್ ಕೊಹ್ಲಿ | Photo Credit : PTI 

ಹೊಸದಿಲ್ಲಿ, ಡಿ.10: ಐಸಿಸಿ ರ‍್ಯಾಂಕಿಂಗ್‌ ನಲ್ಲಿ ಭಾರತದ ಕ್ರಿಕೆಟ್ ಸ್ಟಾರ್‌ಗಳು ತಮ್ಮ ಪ್ರಾಬಲ್ಯ ಮುಂದುವರಿಸಿದ್ದಾರೆ. ರೋಹಿತ್ ಶರ್ಮಾ ನಂ.1 ಬ್ಯಾಟರ್ ಆಗಿ ಮುಂದುವರಿದರೆ, ವಿರಾಟ್ ಕೊಹ್ಲಿ ಎರಡನೇ ಸ್ಥಾನಕ್ಕೆ ಭಡ್ತಿ ಪಡೆಯುವ ಮೂಲಕ ರೋಹಿತ್‌ ಗೆ ಪೈಪೋಟಿ ಒಡ್ಡುತ್ತಿದ್ದಾರೆ.

37ರ ವಯಸ್ಸಿನ ಕೊಹ್ಲಿ 2021ರ ಏಪ್ರಿಲ್‌ ನಿಂದ ಏಕದಿನ ಕ್ರಿಕೆಟ್ ರ‍್ಯಾಂಕಿಂಗ್‌ ನಲ್ಲಿ ನಂ.1 ಸ್ಥಾನ ಪಡೆದಿಲ್ಲ. ಆದರೆ ಇತ್ತೀಚೆಗೆ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸ್ವದೇಶದಲ್ಲಿ ನಡೆದಿದ್ದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸತತ ಎರಡು ಶತಕ ಹಾಗೂ ಒಂದು ಅರ್ಧಶತಕ ಗಳಿಸಿದ ಪರಿಣಾಮ ರ‍್ಯಾಂಕಿಂಗ್‌ ನಲ್ಲಿ ಎರಡು ಸ್ಥಾನ ಮೇಲಕ್ಕೇರಿದ್ದಾರೆ.

ಸರಣಿಯಲ್ಲಿ ಒಟ್ಟು 146 ರನ್ ಗಳಿಸಿದ್ದ ರೋಹಿತ್‌ಗಿಂತ ಕೇವಲ 8 ರೇಟಿಂಗ್ ಪಾಯಿಂಟ್ಸ್‌ ನಿಂದ ಕೊಹ್ಲಿ ಹಿಂದಿದ್ದಾರೆ.

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಒಟ್ಟು 302 ರನ್ ಕಲೆ ಹಾಕಿದ್ದ ಕೊಹ್ಲಿ ‘ಸರಣಿಶ್ರೇಷ್ಠ’ ಪ್ರಶಸ್ತಿಯನ್ನು ಪಡೆದಿದ್ದರು.

ಭಾರತ ತಂಡವು ಜನವರಿ 11ರಿಂದ ನ್ಯೂಝಿಲ್ಯಾಂಡ್ ತಂಡದ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಸ್ವದೇಶದಲ್ಲಿ ಆಡಲಿದೆ. ರೋಹಿತ್ ಹಾಗೂ ವಿರಾಟ್‌ಗೆ ರ‍್ಯಾಂಕಿಂಗ್‌ನಲ್ಲಿ ಮೊದಲೆರಡು ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಈ ಸರಣಿಯು ನೆರವಾಗಬಹುದು.

ಕೆ.ಎಲ್.ರಾಹುಲ್ ಎರಡು ಸ್ಥಾನ ಮೇಲಕ್ಕೇರಿ ಏಕದಿನ ಬ್ಯಾಟರ್‌ ಗಳ ಪೈಕಿ 12ನೇ ಸ್ಥಾನ ಪಡೆದಿದ್ದಾರೆ.

ಏಕದಿನ ಬೌಲಿಂಗ್ ರ‍್ಯಾಂಕಿಂಗ್ಸ್‌ ನಲ್ಲಿ ಕುಲದೀಪ ಯಾದವ್ ಮೂರು ಸ್ಥಾನ ಭಡ್ತಿ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.

ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್, ಏಡೆನ್ ಮರ್ಕ್ರಮ್ ಹಾಗೂ ಟೆಂಬಾ ಬವುಮಾ ಸರಣಿಯನ್ನು 1-2ರಿಂದ ಸೋತಿದ್ದರೂ ರ‍್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ್ದಾರೆ.

ಕಟಕ್‌ ನಲ್ಲಿ ಮಂಗಳವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ-20 ಪಂದ್ಯವನ್ನು ಭಾರತ ತಂಡವು 101 ರನ್‌ಗಳಿಂದ ಗೆದ್ದ ನಂತರ ಟಿ-20 ರ‍್ಯಾಂಕಿಂಗ್‌ನಲ್ಲಿ ಭಾರತದ ಅಕ್ಷರ್ ಪಟೇಲ್ (13ನೇ ಸ್ಥಾನ), ಅರ್ಷದೀಪ್ ಸಿಂಗ್ (20ನೇ) ಹಾಗೂ ಜಸ್‌ಪ್ರಿತ್ ಬುಮ್ರಾ (25ನೇ ಸ್ಥಾನ) ಮೇಲಕ್ಕೇರಿದ್ದಾರೆ.

ದಕ್ಷಿಣ ಆಫ್ರಿಕಾದ ಯುವ ಆಟಗಾರ ಡೆವಾಲ್ಡ್ ಬ್ರೆವಿಸ್ ಟಿ-20 ಕ್ರಿಕೆಟಿನ ಟಾಪ್-10 ಬ್ಯಾಟರ್ ಎನಿಸಿಕೊಂಡಿದ್ದಾರೆ.

ಮೊದಲೆರಡು ಆ್ಯಶಸ್ ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 18 ವಿಕೆಟ್‌ಗಳನ್ನು ಪಡೆದಿರುವ ಆಸ್ಟ್ರೇಲಿಯದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಟೆಸ್ಟ್ ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಮೂರನೆ ಸ್ಥಾನಕ್ಕೇರಿ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.

ನ್ಯೂಝಿಲ್ಯಾಂಡ್‌ ನ ರಚಿನ್ ರವೀಂದ್ರ 9 ಸ್ಥಾನ ಭಡ್ತಿ ಪಡೆದು 15ನೇ ರ‍್ಯಾಂಕಿಗೆ ತಲುಪಿದ್ದಾರೆ. ನ್ಯೂಝಿಲ್ಯಾಂಡ್‌ನ ನಾಯಕ ಟಾಮ್ ಲ್ಯಾಥಮ್, ವೆಸ್ಟ್‌ಇಂಡೀಸ್‌ನ ಶಾಯ್ ಹೋಪ್ ಹಾಗೂ ಜಸ್ಟಿನ್ ಗ್ರೀವ್ಸ್ ಪ್ರಗತಿ ಸಾಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News