Photo Credit : sportstar.thehindu

ಹೊಸದಿಲ್ಲಿ, ನ.23: ಮುಂದಿನ ವರ್ಷ ನಡೆಯಲಿರುವ ಎಫ್ಐಎಚ್ ಪ್ರೊ ಲೀಗ್‌ನಲ್ಲಿ ರಾಜ್‌ಗಿರ್‌ ಆರು ಪಂದ್ಯಗಳ ಆತಿಥ್ಯವನ್ನು ವಹಿಸಲಿದೆ. ಫೆಬ್ರವರಿಯಲ್ಲಿ ರಾಜ್‌ ಗಿರ್‌ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಭಾರತ, ಜರ್ಮನಿ ಹಾಗೂ ಅರ್ಜೆಂಟೀನ ತಂಡಗಳು ಆಡಲಿರುವ ಆರು ಪಂದ್ಯಗಳು ನಡೆಯಲಿವೆ.

ಭಾರತೀಯ ಪುರುಷರ ತಂಡವು ಫೆಬ್ರವರಿ 13ರಂದು ಜರ್ಮನಿ ವಿರುದ್ಧ ಆಡುವ ಮೂಲಕ ತನ್ನ ತವರೂರಿನಲ್ಲಿ ಅಭಿಯಾನ ಆರಂಭಿಸಲಿದೆ. ಎರಡು ದಿನಗಳ ಬಳಿಕ ಅರ್ಜೆಂಟೀನ ತಂಡವನ್ನು ಎದುರಿಸಲಿದೆ. ಫೆಬ್ರವರಿ 16ರಂದು ಭಾರತ ತಂಡವು ಮತ್ತೊಮ್ಮೆ ಜರ್ಮನಿ ತಂಡವನ್ನು ಎದುರಿಸಲಿದೆ. ಫೆಬ್ರವರಿ 18ರಂದು ಅರ್ಜೆಂಟೀನವನ್ನು ಎದುರಿಸುವ ಮೂಲಕ ರಾಜ್‌ ಗಿರ್‌ ನಲ್ಲಿ ತನ್ನ ಪಂದ್ಯಗಳಿಗೆ ವಿದಾಯ ಹೇಳಲಿದೆ.

ಜರ್ಮನಿ ಹಾಗೂ ಅರ್ಜೆಂಟೀನ ತಂಡಗಳು ಫೆಬ್ರವರಿ 14 ಹಾಗೂ 17ರಂದು ಪರಸ್ಪರ ಮುಖಾಮುಖಿಯಾಗಲಿವೆ.

ಬಿಹಾರದಲ್ಲಿರುವ ರಾಜ್‌ ಗಿರ್‌ ಹಾಕಿ ಕ್ರೀಡಾಂಗಣವು ಈ ಹಿಂದೆ 2024ರ ಮಹಿಳೆಯರ ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಗೂ 2025ರ ಪುರುಷರ ಏಶ್ಯ ಕಪ್‌ನ ಆತಿಥ್ಯ ವಹಿಸಿತ್ತು.

ರಾಜ್‌ ಗಿರ್‌ ನಂತರ ಸ್ಪರ್ಧಾವಳಿಯು ರೂರ್ಕೆಲಾಗೆ ಸ್ಥಳಾಂತರವಾಗಲಿದೆ. ಭಾರತೀಯ ಪುರುಷರ ಹಾಗೂ ಮಹಿಳೆಯರ ತಂಡಗಳು ಬಿರ್ಸಾ ಮುಂಡಾ ಹಾಕಿ ಕ್ರೀಡಾಂಗಣದಲ್ಲಿ ತಲಾ ನಾಲ್ಕು ಪಂದ್ಯಗಳನ್ನು ಆಡಲಿವೆ. ಉಭಯ ತಂಡಗಳು ಫೆ.23 ಹಾಗೂ 26ರಂದು ಎರಡು ಬಾರಿ ಗ್ರೇಟ್ ಬ್ರಿಟನ್ ತಂಡವನ್ನು ಎದುರಿಸಲಿವೆ. ಫೆ.25 ಹಾಗೂ 28ರಂದು ಎರಡು ಬಾರಿ ಸ್ಪೇನ್ ತಂಡವನ್ನು ಮುಖಾಮುಖಿಯಾಗಲಿವೆೆ.

ಗ್ರೇಟ್ ಬ್ರಿಟನ್ ಹಾಗೂ ಸ್ಪೇನ್‌ನ ಪುರುಷರ ಹಾಗೂ ಮಹಿಳೆಯರ ತಂಡಗಳು ಫೆ.24 ಹಾಗೂ 27ರಂದು ಪರಸ್ಪರ ಮುಖಾಮುಖಿಯಾಗಲಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಸತೀಶ್ ಶೆಟ್ಟಿ , ವಾರ್ತಾಭಾರತಿ

contributor