T20 ರ್ಯಾಂಕಿಂಗ್ | ಮೊದಲ ಬಾರಿ ಅಗ್ರ-10ಕ್ಕೇರಿದ ಶ್ರೇಯಸ್ ಅಯ್ಯರ್
ಶ್ರೇಯಸ್ ಅಯ್ಯರ್ | Photo Credit : PTI
ಹೊಸದಿಲ್ಲಿ, ಅ. 7: ಭಾರತ ಕ್ರಿಕೆಟ್ ತಂಡದ ನಾಯಕ ಶ್ರೇಯಸ್ ಅಯ್ಯರ್ ತಮ್ಮ ಚೊಚ್ಚಲ ಶತಕವನ್ನು ಗಳಿಸಿದ ಹಿನ್ನೆಲೆಯಲ್ಲಿ ಐಸಿಸಿ T20 ರ್ಯಾಂ ಕಿಂಗ್ ನಲ್ಲಿ ಇದೇ ಮೊದಲ ಬಾರಿ ಅಗ್ರ-10ರಲ್ಲಿ ಸ್ಥಾನ ಗಿಟ್ಟಿಸಿಕೊಂಡರು.
ಲಕ್ನೊದಲ್ಲಿ ಮಂಗಳವಾರ ನಡೆದ ವೆಸ್ಟ್ಇಂಡೀಸ್ ವಿರುದ್ಧದ T20 ಸರಣಿಯ ಮೊದಲ ಪಂದ್ಯದಲ್ಲಿ ಕೇವಲ 43 ಎಸೆತಗಳಲ್ಲಿ ಔಟಾಗದೆ 102 ರನ್ ಗಳಿಸಿದ್ದ ಅಯ್ಯರ್ 18 ಸ್ಥಾನ ಭಡ್ತಿ ಪಡೆದು T20 ರ್ಯಾಂ ಕಿಂಗ್ ನಲ್ಲಿ ಏಳನೇ ಸ್ಥಾನ ತಲುಪಿದ್ದಾರೆ. ಅಯ್ಯರ್ ತಮ್ಮ T20 ವೃತ್ತಿಜೀವನದಲ್ಲಿ ಮೊದಲ ಬಾರಿ ಶತಕ ಗಳಿಸಿದ್ದು, ಈ ಸಾಧನೆಯ ಮೂಲಕ ಇದೇ ಮೊದಲ ಬಾರಿ ಟಾಪ್-10ರಲ್ಲಿ ಸ್ಥಾನ ಪಡೆದರು.
31ರ ಹರೆಯದ ಅಯ್ಯರ್ ಅವರ ಸ್ಫೋಟಕ ಶೈಲಿಯ ಇನಿಂಗ್ಸ್ ನಿಂದಾಗಿ ಚುಟುಕು ಮಾದರಿಯ ಕ್ರಿಕೆಟಿನ ಬ್ಯಾಟಿಂಗ್ ರ್ಯಾಂ ಕಿಂಗ್ ನಲ್ಲಿ ಭಾರತವು ಅಗ್ರ ಸರದಿಯಲ್ಲಿ ಭದ್ರವಾಗಿ ಉಳಿದುಕೊಂಡಿದೆ. ಇದೀಗ ಟೀಮ್ ಇಂಡಿಯಾದ ನಾಲ್ವರು ಆಟಗಾರರು ಅಗ್ರ-10ರಲ್ಲಿದ್ದಾರೆ. ಇಶಾನ್ ಕಿಶನ್ ನಂ. 1 ಸ್ಥಾನ, ಅಭಿಷೇಕ್ ಶರ್ಮಾ ಎರಡನೇ ಸ್ಥಾನ, ಅಯ್ಯರ್ ಏಳನೇ ಹಾಗೂ ತಿಲಕ್ ವರ್ಮಾ 10ನೇ ಸ್ಥಾನದಲ್ಲಿದ್ದಾರೆ.
►ಟಾಪ್-10ರಲ್ಲಿ ಶ್ರೇಯಸ್ ಅಯ್ಯರ್ ರೊಂದಿಗೆ ಅಕ್ಷರ್ ಪಟೇಲ್ ಸೇರ್ಪಡೆ:
ಅಯ್ಯರ್ ಹೊಸ ರ್ಯಾಂ ಕಿಂಗ್ ನಲ್ಲಿ ಭಡ್ತಿ ಪಡೆದ ಭಾರತದ ಏಕೈಕ ಆಟಗಾರನಲ್ಲ. ಆಲ್ರೌಂಡರ್ ಅಕ್ಷರ್ ಪಟೇಲ್ ಅವರು 16 ಸ್ಥಾನ ಮೇಲಕ್ಕೇರಿ T20 ಬೌಲರ್ ಗಳ ಪೈಕಿ ಏಳನೇ ಸ್ಥಾನ ಪಡೆದಿದ್ದಾರೆ. ಭಾರತದ ಸ್ಪಿನ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಅವರು ಟಾಪ್-10ಕ್ಕೆ ಸೇರಿದ್ದಾರೆ.
ಬೌಲಿಂಗ್ ರ್ಯಾಂ ಕಿಂಗ್ ನ ಅಗ್ರ ಸರದಿಯಲ್ಲೂ ಪ್ರಮುಖ ಬದಲಾವಣೆಯಾಗಿದೆ. ಅಫ್ಘಾನಿಸ್ತಾನದ ರಶೀದ್ ಖಾನ್ ಪಾಕಿಸ್ತಾನದ ಅಬ್ರಾರ್ ಅಹ್ಮದ್ರಿಂದ ನಂ. 1 ಸ್ಥಾನ ವಶಪಡಿಸಿಕೊಂಡಿದ್ದಾರೆ.
ಬಾಂಗ್ಲಾದೇಶದ ನಸುಮ್ ಅಹ್ಮದ್ ಮೂರು ಸ್ಥಾನ ಮೇಲಕ್ಕೇರಿ ಎಂಟನೇ ಸ್ಥಾನದಲ್ಲೂ, ಅವರ ಸಹ ಆಟಗಾರ ಮಹಿದಿ ಹಸನ್ 10 ಸ್ಥಾನ ಭಡ್ತಿ ಪಡೆದು 9ನೇ ಸ್ಥಾನಕ್ಕೇರಿದ್ದಾರೆ. ಕೆಲವು ಹೊಸ ಆಟಗಾರರು ಟಾಪ್-10ರಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತ ತಂಡದ ವಿರುದ್ಧ ಸರಣಿಯ ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ವೆಸ್ಟ್ಇಂಡೀಸ್ ಬ್ಯಾಟರ್ ಶೆರ್ಫಾನ್ ರುದರ್ಫೋರ್ಡ್ ಬ್ಯಾಟಿಂಗ್ ರ್ಯಾಂ ಕಿಂಗ್ ನಲ್ಲಿ 10 ಸ್ಥಾನ ಮೇಲಕ್ಕೇರಿ 37ನೇ ರ್ಯಾಂಕಿಗೆ ತಲುಪಿದ್ದಾರೆ.