Photo: x.com/brfootball

ಬ್ಯೂನಸ್ ಐರಿಸ್: ಕೊನೆಯ ಪಂದ್ಯ... ಕೊನೆಯ ಗೋಲು... ಕೊನೆಯ ಅಪ್ಪುಗೆ. ಆದರೆ ಮೈದಾನದಲ್ಲಿ ಲಿಯೋನೆಲ್ ಮೆಸ್ಸಿಯ ಮ್ಯಾಜಿಕ್ ಮಾತ್ರ ಕೊನೆಯಾಗಲಿಲ್ಲ!

ಅಂತರರಾಷ್ಟ್ರೀಯ ಫುಟ್‌ಬಾಲ್‌ ಗೆ ವಿದಾಯ ಹೇಳಿದ ಮೆಸ್ಸಿ, ತಮ್ಮ ಅಂತಿಮ ಪಂದ್ಯದಲ್ಲೂ ಅದ್ಭುತ ಪ್ರದರ್ಶನ ನೀಡಿದರು. ಎರಡು ಗೋಲುಗಳಿಗೆ ಅಸಿಸ್ಟ್‌ ನೀಡಿದ ಅವರು, ಪೆನಾಲ್ಟಿ ಮೂಲಕ ಒಂದು ಗೋಲು ಗಳಿಸಿದರು. ಮೆಸ್ಸಿಯ ಈ ಪ್ರದರ್ಶನದ ನೆರವಿನಿಂದ ಅರ್ಜೆಂಟೀನಾ ತಂಡವು ಬೆನಿನ್ ವಿರುದ್ಧ 3–0 ಗೆಲುವು ಸಾಧಿಸಿತು.

ಬ್ಯೂನಸ್ ಐರಿಸ್‌ ನ ಎಸ್ಟಾಡಿಯೊ ಮಾಸ್ ಮೊನ್ಯುಮೆಂಟಲ್‌ನ ಲ್ಲಿ ನಡೆದ ಪಂದ್ಯದಲ್ಲಿ ಮೊದಲಾರ್ಧ ಗೋಲುರಹಿತವಾಗಿತ್ತು. 48ನೇ ನಿಮಿಷದಲ್ಲಿ ಮೆಸ್ಸಿ ನೀಡಿದ ಪಾಸ್‌ ಅನ್ನು ನಿಕೋಲಸ್ ಒಟಮೆಂಡಿ ಗೋಲಾಗಿ ಪರಿವರ್ತಿಸಿದರು. ಅರ್ಜೆಂಟೀನಾ 1–0 ಮುನ್ನಡೆ ಪಡೆಯಿತು.

ಬಳಿಕ ಮತ್ತೆ ಮೆಸ್ಸಿಯ ಸರದಿ. ಅವರ ನೀಡಿದ ಅದ್ಭುತ ಅಸಿಸ್ಟ್‌ ಅನ್ನು ನಿಕೋ ಪಾಜ್ ಗೋಲಾಗಿ ಪರಿವರ್ತಿಸಿದರು. ಚೆಂಡನ್ನು ತಿರುಗಿಸಿ ಹೊಡೆದ ಆಕರ್ಷಕ ‘ಕರ್ಲಿಂಗ್ ಸ್ಟ್ರೈಕ್‌’ ಮೂಲಕ ಪಾಜ್ ಅರ್ಜೆಂಟೀನಾದ ಮುನ್ನಡೆಯನ್ನು 2–0ಕ್ಕೆ ಹೆಚ್ಚಿಸಿದರು.

ಇಷ್ಟಕ್ಕೆ ಮೆಸ್ಸಿ ನಿಲ್ಲಲಿಲ್ಲ. ಅರ್ಜೆಂಟೀನಾಗೆ ದೊರೆತ ಪೆನಾಲ್ಟಿಯನ್ನು ಮೆಸ್ಸಿ ಗೋಲಾಗಿ ಪರಿವರ್ತಿಸಿದರು. ಸ್ಕೋರ್ 3–0. ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯದಲ್ಲಿ ಮೆಸ್ಸಿ ಎರಡು ಅಸಿಸ್ಟ್‌ ಮತ್ತು ಒಂದು ಗೋಲಿನೊಂದಿಗೆ ತಮ್ಮ ಛಾಪು ಮೂಡಿಸಿದರು.

89ನೇ ನಿಮಿಷದಲ್ಲಿ ಬೆನಿನ್‌ನ ಲಿಯೋನೆಲ್ ಫ್ಲೋರೆಸ್ ಇಬ್ಬರು ಅರ್ಜೆಂಟೀನಾ ಆಟಗಾರರನ್ನು ದಾಟಿ ಗೋಲ್‌ ನತ್ತ ಚೆಂಡನ್ನು ಹೊಡೆದರು. ಆದರೆ ಗೋಲ್‌ಕೀಪರ್ ಮಾರ್ಸೆಲ್ ಡ್ಯಾಂಡ್‌ಜಿನೌ ಎಡಕ್ಕೆ ಜಿಗಿದು ಅದನ್ನು ತಡೆದರು.

90 ನಿಮಿಷಗಳ ಆಟದ ಬಳಿಕ ಮೂರು ನಿಮಿಷಗಳ ಹೆಚ್ಚುವರಿ ಸಮಯ ನೀಡಲಾಯಿತು. ಕೊನೆಯ ಕ್ಷಣಗಳಲ್ಲೂ ಮೆಸ್ಸಿ ಗೋಲು ಹೊಡೆಯುವ ಅವಕಾಶ ಹುಡುಕಿದರು. ಫ್ರೀ-ಕಿಕ್‌ ಮೂಲಕ ಹೊಡೆದ ಚೆಂಡು ಗೋಲ್‌ಪೋಸ್ಟ್‌ನ ಮೇಲ್ಭಾಗದ ಬಾರ್‌ಗೆ ತಾಗಿ ಹೊರಗೆ ಹೋಯಿತು.

ಕೊನೆಯ ವಿಸಿಲ್ ಮೊಳಗಿತು. ಅರ್ಜೆಂಟೀನಾ 3–0 ಗೆದ್ದಿತು. ಮೆಸ್ಸಿ ತಮ್ಮ ಕೊನೆಯ ಪಂದ್ಯವನ್ನು ಗೆಲುವಿನೊಂದಿಗೆ ಮುಗಿಸಿದರು.

ಗೆಲುವಿನ ಸಂಭ್ರಮಕ್ಕಿಂತ ವಿದಾಯದ ಭಾವುಕತೆಯೇ ಮೊನ್ಯುಮೆಂಟಲ್‌ ನಲ್ಲಿ ಹೆಚ್ಚಾಗಿತ್ತು. ಅಂತಿಮ ವಿಸಿಲ್ ಬಳಿಕ ಮೆಸ್ಸಿ ತಂಡದ ಆಟಗಾರರನ್ನು ಅಪ್ಪಿಕೊಂಡರು. ಆಕಾಶ ನೀಲಿ–ಬಿಳಿ ಜೆರ್ಸಿ ಧರಿಸಿದ್ದ ಸಾವಿರಾರು ಅಭಿಮಾನಿಗಳು ಕಣ್ಣೀರಿನಿಂದ ತಮ್ಮ ನೆಚ್ಚಿನ ಆಟಗಾರನಿಗೆ ವಿದಾಯ ಹೇಳಿದರು.

ಪಂದ್ಯ ಮುಗಿದರೂ ಅಭಿಮಾನಿಗಳು ಕ್ರೀಡಾಂಗಣದಿಂದ ಹೊರಹೋಗಲಿಲ್ಲ. ಕ್ರೀಡಾಂಗಣದ ನಿರೂಪಕರು ‘ಸಾರ್ವಕಾಲಿಕ ಶ್ರೇಷ್ಠ ಆಟಗಾರ’ (GOAT) ಮೆಸ್ಸಿಗೆ ಧನ್ಯವಾದ ಅರ್ಪಿಸಿದರು. ಆಕಾಶದಲ್ಲಿ ಡ್ರೋನ್‌ ಗಳು ಹಾರಿದವು. ಅಭಿಮಾನಿಗಳ ಕೈಯಲ್ಲಿದ್ದ ಬ್ಯಾನರ್‌ಗಳು ರಾರಾಜಿಸಿದವು.

ಅರ್ಜೆಂಟೀನಾದ ಗಾಯಕಿ ಸೊಲೆಡಾಡ್ ಪಾಸ್ಟೊರುಟ್ಟಿ ಮೈದಾನದ ಮಧ್ಯಭಾಗದಲ್ಲಿ ಗಾಯನ ಪ್ರದರ್ಶನ ನೀಡಿದರು. ಅವರು ಹಾಡುತ್ತಿದ್ದಾಗ ಕ್ರೀಡಾಂಗಣದಲ್ಲಿದ್ದ ಬಹುತೇಕ ಅಭಿಮಾನಿಗಳ ಕಣ್ಣುಗಳು ತೇವಗೊಂಡಿದ್ದವು.

ಆಟ ಮುಗಿದ ಬಳಿಕ ಅದ್ಧೂರಿ ಡ್ರೋನ್ ಪ್ರದರ್ಶನ ನಡೆಯಿತು. ಬಳಿಕ ಮೆಸ್ಸಿ ಅವರ ಸನ್ಮಾನ ಸಮಾರಂಭ ಆರಂಭವಾಯಿತು. ನೀಲಿ ಮತ್ತು ಬಿಳಿ ಜೆರ್ಸಿಯಲ್ಲಿ ಅವರು ನಡೆಸಿದ ಅವಿಸ್ಮರಣೀಯ ಪಯಣಕ್ಕೆ ಗೌರವ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor