×
Ad

ಟಿ20 ವಿಶ್ವಕಪ್: ಬಾಂಗ್ಲಾ ಪಂದ್ಯಗಳ ಆತಿಥ್ಯಕ್ಕೆ ಮುಂದಾದ ಪಾಕ್

Update: 2026-01-12 07:49 IST

ಮೊಹ್ಸಿನ್ ನಖ್ವಿ|ಬಾಂಗ್ಲಾ ಕ್ರಿಕೆಟ್‌ ತಂಡ PC: x.com/dhillow

ಕರಾಚಿ: ವಿಶ್ವಕಪ್ ಟಿ20 ಟೂರ್ನಿಯಲ್ಲಿ ಬಾಂಗ್ಲಾದೇಶ ಆಡುವ ಪಂದ್ಯಗಳ ಆತಿಥ್ಯ ವಹಿಸಲು ಉತ್ಸುಕತೆ ತೋರಿ ಮೊಹ್ಸಿನ್ ನಖ್ವಿ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಮನವಿ ಸಲ್ಲಿಸಿರುವುದು ಇಡೀ ವಿವಾದಕ್ಕೆ ಹೊಸ ತಿರುವು ನೀಡಿದೆ.

ಪಾಕಿಸ್ತಾನದ ಜಿಯೊ ನ್ಯೂಸ್ ವರದಿಯ ಪ್ರಕಾರ, ಭಾರತದಲ್ಲಿ ನಡೆಯುವ ಪಂದ್ಯಗಳಲ್ಲಿ ಭಾಗವಹಿಸಲು ಭಾರತಕ್ಕೆ ಪ್ರಯಾಣ ಮಾಡುವುದಿಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಬಾಂಗ್ಲಾ ಪಂದ್ಯಗಳ ಆಯೋಜನೆಗೆ ಪಿಸಿಬಿ ಆಸಕ್ತಿ ತೋರಿದೆ. ಆದರೆ ಈ ಬಗ್ಗೆ ಐಸಿಸಿ ಅಥವಾ ಪಿಸಿಬಿ ಇದುವರೆಗೆ ಈ ಬೆಳವಣಿಗೆಯನ್ನು ದೃಢಪಡಿಸಿಲ್ಲ.

ಭಾರತ ಹಾಗೂ ಶ್ರೀಲಂಕಾ ಹೊರತಾಗಿ ಪಾಕಿಸ್ತಾನದ ಕ್ರೀಡಾಂಗಣಗಳನ್ನು ಪರಿಗಣಿಸುವಂತೆ ಪಿಸಿಬಿ ಸಲಹೆ ಮಾಡಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲು ಭಾರತಕ್ಕೆ ಪಾಕಿಸ್ತಾನ ತಂಡವನ್ನು ಕಳುಹಿಸುವುದಿಲ್ಲ ಎಂದು ಪಿಸಿಬಿ ಹೇಳಿಕೆ ನೀಡಿತ್ತು.

ಇದೀಗ ಶ್ರೀಲಂಕಾದ ಕ್ರೀಡಾಂಗಣಗಳು ಲಭ್ಯವಿಲ್ಲ ಎಂದಾದಲ್ಲಿ ಬಾಂಗ್ಲಾ ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಆಯೋಜಿಸಬಹುದು ಎಂದು ಅಧಿಕೃತವಾಗಿ ಐಸಿಸಿಗೆ ಪಿಸಿಬಿ ಮನವಿ ಮಾಡಿಕೊಂಡಿದೆ ಎಂದು ಜಿಯೊ ನ್ಯೂಸ್ ಹೇಳಿದೆ.

ಪ್ರಸಕ್ತ ವರ್ಷದ ಐಪಿಎಲ್ ಸೀಸನ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ವೇಗದ ಬೌಲರ್ ಮುಸ್ತಫಿಝುರ್ರಹಮಾನ್ ಅವರನ್ನು ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಈ ವಿವಾದ ಸೃಷ್ಟಿಯಾಗಿದೆ. ಮಿನಿ ಹರಾಜಿನಲ್ಲಿ ಅವರನ್ನು 9.2 ಕೋಟಿಗೆ ಖರೀದಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News