×
Ad

ATP ರ‍್ಯಾಂಕಿಂಗ್: ಅಗ್ರ ಎರಡು ಸ್ಥಾನ ಕಾಯ್ದುಕೊಂಡ ಅಲ್ಕರಾಝ್, ಸಿನ್ನರ್

Update: 2026-01-12 22:01 IST

ಕಾರ್ಲೊಸ್ ಅಲ್ಕರಾಝ್ , ಜನ್ನಿಕ್ ಸಿನ್ನರ್ | Photo Credit : NDTV 

ಪ್ಯಾರಿಸ್, ಜ.12: ಕಾರ್ಲೊಸ್ ಅಲ್ಕರಾಝ್ ಹಾಗೂ ಜನ್ನಿಕ್ ಸಿನ್ನರ್ ಸೋಮವಾರ ಬಿಡುಗಡೆಯಾದ ಎಟಿಪಿ ರ‍್ಯಾಂಕಿಂಗ್‌ನಲ್ಲಿ ಅಗ್ರ ಎರಡು ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ. 2026ರ ಆಸ್ಟ್ರೇಲಿಯನ್ ಓಪನ್‌ಗಿಂತ ಮೊದಲು ನಡೆಯುವ ಡ್ರಾ ಕಾರ್ಯಕ್ರಮದಲ್ಲಿ ಆಟಗಾರರ ಈ ರ‍್ಯಾಂಕಿಂಗ್ ಅನ್ನು ಪರಿಗಣಿಸಲಾಗುತ್ತದೆ.

ಹಿಂದಿನ ನಾಲ್ಕು ಗ್ರ್ಯಾನ್‌ಸ್ಲಾಮ್ ಟೂರ್ನಿಗಳಂತೆಯೇ ಮೆಲ್ಬರ್ನ್‌ನಲ್ಲಿ ಈ ಬಾರಿ ನಡೆಯಲಿರುವ ಡ್ರಾ ಕಾರ್ಯಕ್ರಮದಲ್ಲಿ ಅಲ್ಕರಾಝ್ ಹಾಗೂ ಸಿನ್ನರ್ ಪರಸ್ಪರ ವಿರುದ್ಧ ಗುಂಪಿನಲ್ಲಿ ಸ್ಥಾನ ಪಡೆಯಬಹುದು. ಈ ವರ್ಷದ ಗ್ರ್ಯಾನ್‌ಸ್ಲಾಮ್ ಟೂರ್ನಿಯ ಡ್ರಾ ಕಾರ್ಯಕ್ರಮವು ಗುರುವಾರ ನಡೆಯಲಿದೆ.

ಅಲ್ಕರಾಝ್ ಹಾಗೂ ಎರಡು ಬಾರಿಯ ಹಾಲಿ ಚಾಂಪಿಯನ್ ಸಿನ್ನರ್ ಈ ಋತುವಿನಲ್ಲಿ ಯಾವುದೇ ಸ್ಪರ್ಧಾತ್ಮಕ ಪಂದ್ಯವನ್ನಾಡದೆ ಮೆಲ್ಬರ್ನ್‌ ಗೆ ತಲುಪಿದ್ದಾರೆ. ಶನಿವಾರ ದಕ್ಷಿಣ ಕೊರಿಯಾದ ಇಂಚಿಯೊನ್‌ನಲ್ಲಿ ನಡೆಯಲಿರುವ ಪ್ರದರ್ಶನ ಪಂದ್ಯದಲ್ಲಿ ಈ ಇಬ್ಬರು ಆಟಗಾರರು ಮುಖಾಮುಖಿಯಾಗಲಿದ್ದಾರೆ.

ಹಾಂಕಾಂಗ್ ಓಪನ್ ಫೈನಲ್‌ ನಲ್ಲಿ ಇಟಲಿಯ ಲೊರೆಂರೊ ಮುಸೆಟ್ಟಿ ವಿರುದ್ಧ ನೇರ ಸೆಟ್‌ಗಳ ಅಂತರದಿಂದ ಜಯಶಾಲಿಯಾಗಿರುವ ಅಲೆಕ್ಸಾಂಡರ್ ಬಬ್ಲಿಕ್ ಇದೇ ಮೊದಲ ಬಾರಿ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ.

ತನ್ನ ವೃತ್ತಿಜೀವನದಲ್ಲಿ ಒಂಭತ್ತನೇ ಪ್ರಶಸ್ತಿಯನ್ನು ಗೆದ್ದ ನಂತರ 28ರ ಹರೆಯದ ಕಝಕ್ ಆಟಗಾರ ಬಬ್ಲಿಕ್ ಒಂದು ಸ್ಥಾನ ಮೇಲಕ್ಕೇರಿದ್ದಾರೆ. ಎಟಿಪಿ ಟೂರ್‌ನಲ್ಲಿ ಸತತ ಏಳನೇ ಪ್ರಶಸ್ತಿಯನ್ನು ಕಳೆದುಕೊಂಡ ಹೊರತಾಗಿಯೂ ಮುಸೆಟ್ಟಿ ಕೆನಡಾದ ಫೆಲಿಕ್ಸ್ ಅಗುರ್-ಅಲಿಸಿಮ್‌ರನ್ನು ಹಿಂದಿಕ್ಕಿ ಎರಡು ಸ್ಥಾನ ಭಡ್ತಿ ಪಡೆದಿದ್ದಾರೆ. ಐದನೇ ಸ್ಥಾನ ಪಡೆದು ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.

ಬ್ರಿಸ್ಬೇನ್‌ನಲ್ಲಿ ವೃತ್ತಿಜೀವನದ ತನ್ನ 22ನೇ ಪ್ರಶಸ್ತಿಯನ್ನು ಗೆದ್ದಿರುವ ರಶ್ಯದ ಡೇನಿಯಲ್ ಮೆಡ್ವೆಡೆವ್ ಒಂದು ಸ್ಥಾನ ಮೇಲಕ್ಕೇರಿ 12ನೇ ಸ್ಥಾನ ತಲುಪಿದ್ದಾರೆ. ರನ್ನರ್-ಅಪ್ ಬ್ರೆಂಡನ್ ನಕಶಿಮಾ ನಾಲ್ಕು ಸ್ಥಾನ ಭಡ್ತಿ ಪಡೆದು ಜೀವನಶ್ರೇಷ್ಠ 29ನೇ ಸ್ಥಾನಕ್ಕೇರಿದ್ದಾರೆ.

ಗಾಯದಿಂದ ಚೇತರಿಸಿಕೊಂಡು ದೀರ್ಘ ಸಮಯದ ನಂತರ ವಾಪಸಾಗಿರುವ ಪೋಲ್ಯಾಂಡ್‌ನ ಹ್ಯೂಬರ್ಟ್ ಹರ್ಕಾಝ್ ತನ್ನ ತಂಡ ಯುನೈಟೆಡ್ ಕಪ್ ಜಯಿಸುವಲ್ಲಿ ನೆರವಾಗಿದ್ದರು. ಈ ಹಿನ್ನೆಲೆಯಲ್ಲಿ ರ‍್ಯಾಂಕಿಂಗ್‌ನಲ್ಲಿ 30 ಸ್ಥಾನ ಮೇಲಕ್ಕೇರಿ 53ನೇ ಸ್ಥಾನ ತಲುಪಿದ್ದಾರೆ.

ಹಾಲಿ ಎಟಿಪಿ ರ‍್ಯಾಂಕಿಂಗ್‌ ನಲ್ಲಿ ಭಾರತದ ಆಟಗಾರರ ಪೈಕಿ ಯೂಕಿ ಭಾಂಬ್ರಿ ಡಬಲ್ಸ್‌ನಲ್ಲಿ 21ನೇ ಸ್ಥಾನದಲ್ಲಿದ್ದಾರೆ. ಶ್ರೀರಾಮ್ ಬಾಲಾಜಿ ಒಂದು ಸ್ಥಾನ ನಷ್ಟ ಅನುಭವಿಸಿ 82ನೇ ರ‍್ಯಾಂಕಿನಲ್ಲಿದ್ದಾರೆ. ‘ಕೊಡಗಿನ ಕುವರ’ ನಿಕಿ ಪೂಣಚ 7 ಸ್ಥಾನಗಳಲ್ಲಿ ಭಡ್ತಿ ಪಡೆದು 145ನೇ ಸ್ಥಾನ ತಲುಪಿದ್ದಾರೆ.

ಸಿಂಗಲ್ಸ್ ರ‍್ಯಾಂಕಿಂಗ್‌ನಲ್ಲಿ ಆರ್ಯನ್ ಶಾ 4 ಸ್ಥಾನಗಳಲ್ಲಿ ಹಾಗೂ ದಕ್ಷಿಣೇಶ್ವರ ಸುರೇಶ್ 53 ಸ್ಥಾನಗಳಲ್ಲಿ ಭಡ್ತಿ ಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News