ಪ್ರಧಾನ ಮಂತ್ರಿ ಕೌಶಲ ಯೋಜನೆಯಲ್ಲಿ ಭ್ರಷ್ಟಾಚಾರ: ಕಾಂಗ್ರೆಸ್ ಆರೋಪ
ಕಣ್ಣನ್ ಗೋಪಿನಾಥನ್ | Photo credit: X/@naukarshah
ಹೊಸದಿಲ್ಲಿ, ಜ. 12: ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ (ಪಿಎಂಕೆವಿವೈ) ಅಡಿಯಲ್ಲಿ ನೋಂದಣಿ ಹಾಗೂ ಉದ್ಯೋಗ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ.
ಆದ್ದರಿಂದ, ಈ ಯೋಜನೆ ಮೂಲಕ ವಿತರಿಸಲಾದ ಹಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.
ಮಹಾಲೇಖಾಪಾಲರ (ಸಿಎಜಿ) ವರದಿಯನ್ನು ಉಲ್ಲೇಖಿಸಿದ ಕಾಂಗ್ರೆಸ್ ನಾಯಕ ಕಣ್ಣನ್ ಗೋಪಿನಾಥನ್, ಪಿಎಂಕೆವಿವೈಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.
‘‘ಈ ವಿಷಯದ ಕುರಿತು ಸಮಗ್ರ ತನಿಖೆ ನಡೆಸಬೇಕು. ಸರ್ಕಾರ ತನಿಖೆ ನಡೆಸಿ ಸತ್ಯ ಹೊರತರಬೇಕೆಂದು ನಾವು ಆಗ್ರಹಿಸುತ್ತೇವೆ’’ ಎಂದು ಅವರು ಹೇಳಿದರು.
‘‘ಇದು ದೇಶದ ತೆರಿಗೆದಾರರಿಗೆ ಮಾತ್ರ ಮಾಡಿದ ದ್ರೋಹವಲ್ಲ. ಬದಲಾಗಿ, ಯುವಜನತೆಗೆ ಮಾಡಿದ ದ್ರೋಹ’’ ಎಂದು ಅವರು ಹೇಳಿದರು.
2015ರಿಂದ 2022ರ ವರೆಗಿನ ಕಾರ್ಯಕ್ಷಮತೆಯ ಕುರಿತು ಇತ್ತೀಚೆಗೆ ಬಿಡುಗಡೆಗೊಂಡ ಮಹಾಲೇಖಾಪಾಲರ ವರದಿ ಪಿಎಂಕೆವಿವೈಯ ಹಗರಣವನ್ನು ಬಹಿರಂಗಪಡಿಸಿದೆ ಎಂದು ಕಣ್ಣನ್ ಗೋಪಿನಾಥನ್ ತಿಳಿಸಿದ್ದಾರೆ.
ರಾಷ್ಟ್ರೀಯ ಕೌಶಲ ಅಭಿವೃದ್ಧಿ ಯೋಜನೆಯನ್ನು ಮೋದಿ ಸರ್ಕಾರ ಪಿಎಂಕೆವಿವೈ ಎಂದು ಮರುನಾಮಕರಣ ಮಾಡಿದೆ. ಈ ಯೋಜನೆಗೆ ಏಳು ವರ್ಷಗಳಲ್ಲಿ 10,000 ಕೋಟಿ ರೂಪಾಯಿ ವಿತರಿಸಲಾಗಿದೆ ಎಂದು ಗೋಪಿನಾಥನ್ ಹೇಳಿದ್ದಾರೆ.
ಫಲಾನುಭವಿಗಳ ಬ್ಯಾಂಕ್ ಖಾತೆಗಳ ಶೇ. 94.53 ನಕಲಿ ಎಂದು ತಿಳಿದು ಬಂದಿದೆ. ಶೇ. 96 ನಕಲಿ ಮೊಬೈಲ್ ಸಂಖ್ಯೆಗಳು ಹಾಗೂ ಶೇ. 97 ನಕಲಿ ಮೌಲ್ಯಮಾಪಕರ ವರದಿಗಳನ್ನು ಹೊಂದಿವೆ ಎಂದು ಸಿಎಜಿ ವರದಿ ಗುರುತಿಸಿದೆ ಎಂದು ಅವರು ಹೇಳಿದ್ದಾರೆ.