×
Ad

ಸಚಿನ್, ರಾಹುಲ್, ರೋಹಿತ್ ದಾಖಲೆ ಮುರಿಯುವ ಹಾದಿಯಲ್ಲಿ ವಿರಾಟ್ ಕೊಹ್ಲಿ

Update: 2026-01-13 22:20 IST

ವಿರಾಟ್ ಕೊಹ್ಲಿ |  Photo Credit : PTI 

ಹೊಸದಿಲ್ಲಿ, ಜ.13: ರಾಜ್‌ ಕೋಟ್‌ ನಲ್ಲಿ ಬುಧವಾರ ಭಾರತ ತಂಡವು ನ್ಯೂಝಿಲ್ಯಾಂಡ್ ವಿರುದ್ಧ ಎರಡನೇ ಏಕದಿನ ಪಂದ್ಯವನ್ನಾಡಲಿದ್ದು, ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಐತಿಹಾಸಿಕ ಸಾಧನೆಯ ಹಾದಿಯಲ್ಲಿದ್ದಾರೆ.

37 ವರ್ಷದ ಕೊಹ್ಲಿ ಏಕದಿನ ಕ್ರಿಕೆಟ್‌ ನಲ್ಲಿ ಈಗಾಗಲೇ ಸತತ ಐದು ಬಾರಿ ಐವತ್ತಕ್ಕೂ ಅಧಿಕ ರನ್ ಗಳಿಸಿದ್ದಾರೆ. ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಐದನೇ ಏಕದಿನ ಪಂದ್ಯದ ವೇಳೆ ಈ ಸರಣಿ ಆರಂಭವಾಗಿತ್ತು. ವಡೋದರದಲ್ಲಿ ನಡೆದ ನ್ಯೂಝಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 91 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 93 ರನ್ ಗಳಿಸುವ ಮೂಲಕ ಅವರು ಈ ದಾಖಲೆಯನ್ನು ಮುಂದುವರಿಸಿದ್ದಾರೆ.

ಸತತ ಐದು ಬಾರಿ ಫಿಫ್ಟಿ ಪ್ಲಸ್ ಸ್ಕೋರ್ ದಾಖಲಿಸಿರುವ ಕೊಹ್ಲಿ, ಭಾರತೀಯ ಬ್ಯಾಟರ್‌ಗಳಾದ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ರೋಹಿತ್ ಶರ್ಮಾ ಹಾಗೂ ಅಜಿಂಕ್ಯ ರಹಾನೆ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ರಾಜ್‌ಕೋಟ್‌ನಲ್ಲಿ ಅರ್ಧಶತಕ ಗಳಿಸಿದರೆ, ಏಕದಿನ ಕ್ರಿಕೆಟ್‌ನಲ್ಲಿ ಸತತ ಆರು ಬಾರಿ ಐವತ್ತಕ್ಕೂ ಅಧಿಕ ರನ್ ಗಳಿಸಿದ ಭಾರತದ ಮೊದಲ ಬ್ಯಾಟರ್ ಎಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ.

ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಜಾವೇದ್ ಮಿಯಾಂದಾದ್ ಸತತ 9 ಫಿಫ್ಟಿ ಪ್ಲಸ್ ಸ್ಕೋರ್ ಗಳಿಸುವ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕೇನ್ ವಿಲಿಯಮ್ಸನ್, ಶಾಯ್ ಹೋಪ್, ಬಾಬರ್ ಆಝಂ, ಪೌಲ್ ಸ್ಟಿರ್ಲಿಂಗ್, ರಾಸ್ ಟೇಲರ್ ಹಾಗೂ ಕ್ರಿಸ್ ಗೇಲ್ ಕೂಡ ಸತತ ಆರು ಬಾರಿ ಫಿಫ್ಟಿ ಪ್ಲಸ್ ಸ್ಕೋರ್ ಗಳಿಸಿದ್ದಾರೆ.

ಕೊಹ್ಲಿ ತಮ್ಮ ಹಿಂದಿನ ಐದು ಏಕದಿನ ಪಂದ್ಯಗಳಲ್ಲಿ 156.33ರ ಸರಾಸರಿಯಲ್ಲಿ ಒಟ್ಟು 469 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕಗಳು ಹಾಗೂ 3 ಅರ್ಧಶತಕಗಳು ಸೇರಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News