ಸಿದ್ಧಗೊಳ್ಳದ ರಿಂಗ್: ವಿಳಂಬವಾಗಿ ಆರಂಭಗೊಂಡ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್!
ಸಾಂದರ್ಭಿಕ ಚಿತ್ರ | Photo Credit : freepik
ಹೊಸದಿಲ್ಲಿ, ಜ. 5: ಗ್ರೇಟರ್ ನೋಯಿಡದಲ್ಲಿ ನಡೆಯುತ್ತಿರುವ ಭಾರತದ ಸೀನಿಯರ್ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್ಸ್ ರವಿವಾರ ವಿಳಂಬವಾಗಿ ಆರಂಭಗೊಂಡಿದೆ. ಪಂದ್ಯಗಳು ನಡೆಯಬೇಕಾಗಿದ್ದ ಎರಡು ಅಖಾಡಗಳು ನಿರ್ಮಾಣವಾಗಿರಲಿಲ್ಲ. ಮಧ್ಯಾಹ್ನ ನಡೆಯಬೇಕಾಗಿದ್ದ ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕಾಗಿ ಬಾಕ್ಸರ್‌ಗಳು ಗೌತಮ್ ಬುದ್ಧ ವಿಶ್ವವಿದ್ಯಾನಿಲಯಕ್ಕೆ ಬಂದಾಗ ಅವರನ್ನು ಖಾಲಿ ನೆಲಗಳು ಸ್ವಾಗತಿಸಿದವು.
ಪಂದ್ಯ ಮಧ್ಯಾಹ್ನ 2 ಗಂಟೆಗೆ ಆರಂಭವಾಗಬೇಕಾಗಿತ್ತು. ಆದರೆ ಅಂತಿಮವಾಗಿ ಅದು ಸಂಜೆ 6:30ಕ್ಕೆ ಆರಂಭಗೊಂಡಿತು.
ಸಾಮಾನ್ಯವಾಗಿ, ಯಾವುದೇ ರಾಷ್ಟ್ರೀಯ ಬಾಕ್ಸಿಂಗ್ ಸ್ಪರ್ಧೆಯು ಆರಂಭಗೊಳ್ಳುವ ಕನಿಷ್ಠ ಒಂದು ದಿನ ಮೊದಲು ರಿಂಗ್ ಗಳನ್ನು ಹಾಕಲಾಗುತ್ತದೆ. ಆದರೆ, ಇಲ್ಲಿ ಪಂದ್ಯದ ದಿನದಂದೇ ರಿಂಗ್ ಗಳನ್ನು ಹಾಕಲಾಗುತ್ತಿತ್ತು. ರಿಂಗ್ ಗಳನ್ನು ಅವಸರವಸರವಾಗಿ ಹಾಕಲಾಯಿತು. ಆಗ ಕಾಯುವಂತೆ ಬಾಕ್ಸರ್‌ಗಳಿಗೆ ತಿಳಿಸಲಾಯಿತು.
ಆರಂಭಿಕ ದಿನವಾದ ರವಿವಾರ ಪುರುಷರ ವಿಭಾಗದಲ್ಲಿ 42 ಮತ್ತು ಮಹಿಳೆಯರ ವಿಭಾಗದಲ್ಲಿ 38 ಸ್ಪರ್ಧೆಗಳು ನಡೆಯಬೇಕಾಗಿದ್ದವು. ಆದರೆ, ನಾಲ್ಕು ಗಂಟೆಗಳ ವಿಳಂಬದಿಂದಾಗಿ ನಿಗದಿತ ಎಲ್ಲಾ ಪಂದ್ಯಗಳನ್ನು ಆಡಲು ಸಾಧ್ಯವಾಗಲಿಲ್ಲ.