×
Ad

ಬಾಂಗ್ಲಾದೇಶದ ಮನವಿ ಬಳಿಕ ಟಿ20 ವಿಶ್ವಕಪ್ ವೇಳಾಪಟ್ಟಿ ಪರಿಷ್ಕರಣೆಗೆ ICC ಮುಂದು?

Update: 2026-01-05 22:50 IST

Photo Credit : @ICCMediaComms

ದುಬೈ, ಜ. 5: ತನ್ನ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಕೋರಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ)ಯು ಐಸಿಸಿಗೆ ಮನವಿ ಮಾಡಿದ ಬಳಿಕ, ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯು ಗೊಂದಲದ ಗೂಡಾಗಿದೆ. ಪಂದ್ಯಾವಳಿ ಆರಂಭಗೊಳ್ಳಲು ಕೇವಲ ಒಂದು ತಿಂಗಳು ಇರುವಾಗ ಬಿಕ್ಕಟ್ಟು ಕಾಣಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ಪಂದ್ಯಾವಳಿಯು ಫೆಬ್ರವರಿ 7ರಂದು ಆರಂಭಗೊಳ್ಳಲಿದೆ.

ತನ್ನ ಆಟಗಾರರ ಭದ್ರತೆಯ ಬಗ್ಗೆ ‘‘ಹೆಚ್ಚುತ್ತಿರುವ ಕಳವಳಗಳ’’ನ್ನು ಉಲ್ಲೇಖಿಸಿ, ತನ್ನ ವಿಶ್ವಕಪ್ ಪಂದ್ಯಗಳ ಸ್ಥಳಾಂತರಕ್ಕೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮನವಿ ಮಾಡಿದೆ. ಇದು ಐಸಿಸಿ ಮತ್ತು ಅದರ ಅಧ್ಯಕ್ಷ ಜಯ್ ಶಾರಿಗೆ ಭಾರೀ ಸವಾಲೊಂದನ್ನು ಒಡ್ಡಿದೆ.

ಸಂಘಟಕರು ಈಗ ಕೊನೆಯ ಹಂತದಲ್ಲಿ, ಶ್ರೀಲಂಕಾದಲ್ಲಿ ಮೈದಾನಗಳ ವ್ಯವಸ್ಥೆ ಮಾಡಬೇಕಾಗಿದೆ ಹಾಗೂ ಆಟಗಾರರಿಗೆ ವಾಸ್ತವ್ಯಗಳನ್ನು ಕಲ್ಪಿಸಬೇಕಾಗಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಕೋರಿಕೆಯಂತೆ, ಐಸಿಸಿ ಈಗಾಗಲೇ ವೇಳಾಪಟ್ಟಿಯನ್ನು ಪರಿಷ್ಕರಿಸುವ ಕೆಲಸವನ್ನು ಮಾಡುತ್ತಿದೆ ಎಂಬುದಾಗಿ ವರದಿಗಳು ಹೇಳಿವೆ.

ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರಕಾರದಲ್ಲಿ ಯುವ ಮತ್ತು ಕ್ರೀಡಾ ಸಲಹೆಗಾರ ಆಸಿಫ್ ನಝ್ರುಲ್‌ ರ ಹೇಳಿಕೆಯು ಪರಿಸ್ಥಿತಿಯ ರಾಜಕೀಯ ಮಹತ್ವಕ್ಕೆ ಕನ್ನಡಿ ಹಿಡಿದಿದೆ. ‘‘ಬಾಂಗ್ಲಾದೇಶದ ಕ್ರಿಕೆಟ್, ಕ್ರಿಕೆಟಿಗರು ಮತ್ತು ದೇಶಕ್ಕೆ ಆಗುವ ಯಾವುದೇ ಅವಮಾನವನ್ನು ನಾವು ಸಹಿಸುವುದಿಲ್ಲ. ಗುಲಾಮಗಿರಿಯ ದಿನಗಳು ಮುಗಿದವು’’ ಎಂಬುದಾಗಿ ಅವರು ಫೇಸ್‌ ಬುಕ್‌ನಲ್ಲಿ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News