ಕೋಮಾದಿಂದ ಹೊರಬಂದ ಡೇಮಿಯನ್ ಮಾರ್ಟಿನ್
ಡೇಮಿಯನ್ ಮಾರ್ಟಿನ್|Photo Credit : NDTV
ಮೆಲ್ಬರ್ನ್, ಜ.4: ಗಂಭೀರ ಸ್ಥಿತಿಯಲ್ಲಿ ಒಂದು ವಾರಕ್ಕೂ ಹೆಚ್ಚು ಸಮಯದಿಂದ ಆಸ್ಪತ್ರೆಯಲ್ಲಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಡೇಮಿಯನ್ ಮಾರ್ಟಿನ್ ಕೋಮಾದಿಂದ ಹೊರಬಂದಿದ್ದಾರೆ ಎಂದು ಮಾಜಿ ಸಹ ಆಟಗಾರ ಆಡಮ್ ಗಿಲ್‌ಕ್ರಿಸ್ಟ್ ದೃಢಪಡಿಸಿದ್ದಾರೆ.
‘‘ಕೋಮಾದಿಂದ ಹೊರ ಬಂದ ಬಳಿಕ ಅವರು ಅತ್ಯಂತ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಅವರ ಕುಟುಂಬಕ್ಕೆ ಇದು ಪವಾಡದಂತೆ ಅನಿಸುತ್ತಿದೆ’’ ಎಂದು ಗಿಲ್‌ಕ್ರಿಸ್ಟ್ ‘ಕೋಡ್ ಸ್ಪೋರ್ಟ್ಸ್’ಗೆ ತಿಳಿಸಿದ್ದಾರೆ.
‘‘ಮಾರ್ಟಿನ್ ಅವರನ್ನು ಐಸಿಯುನಿಂದ ಆಸ್ಪತ್ರೆಯ ಮತ್ತೊಂದು ವಿಭಾಗಕ್ಕೆ ಸ್ಥಳಾಂತರಿಸುವ ಸಕಾರಾತ್ಮಕ ಲಕ್ಷಣಗಳು ಕಂಡುಬರುತ್ತಿವೆ. ಇದು ಅವರ ಚೇತರಿಕೆಯ ಸಂಕೇತ’’ ಎಂದರು.
54 ವರ್ಷದ ಮಾರ್ಟಿನ್ ಕಳೆದ ವಾರ ಮಲಗಿದ್ದಾಗಲೇ ಅನಾರೋಗ್ಯಕ್ಕೆ ಒಳಗಾಗಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೆದುಳು ಹಾಗೂ ಬೆನ್ನುಹುರಿಯ ಸುತ್ತಲಿನ ಊರಿಯೂತ ಪತ್ತೆಯಾಗಿದೆ.
ಸ್ಟೀವ್ ವಾ ನಾಯಕತ್ವದ ಆಸ್ಟ್ರೇಲಿಯ ತಂಡದ ಪ್ರಮುಖ ಸದಸ್ಯರಾಗಿದ್ದ ಮಾರ್ಟಿನ್ 46.37ರ ಸರಾಸರಿಯಲ್ಲಿ 13 ಟೆಸ್ಟ್ ಶತಕಗಳನ್ನು ಗಳಿಸಿದ್ದರು.
2003ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಅವರು, ಭಾರತ ವಿರುದ್ಧದ ಫೈನಲ್‌ನಲ್ಲಿ ಔಟಾಗದೆ 88 ರನ್ ಗಳಿಸಿ ರಿಕಿ ಪಾಂಟಿಂಗ್ ಜೊತೆ ಮಹತ್ವದ ಜೊತೆಯಾಟ ನಡೆಸಿದ್ದರು.
2006ರ ಆ್ಯಶಸ್ ಸರಣಿಯ ವೇಳೆ ನಿವೃತ್ತರಾದ ಮಾರ್ಟಿನ್ ನಂತರ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಂಡಿರಲಿಲ್ಲ.