138 ವರ್ಷಗಳಲ್ಲೇ ಮೊದಲು | ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ನರ್ ಗಳನ್ನು ಆಡಿಸುವ ಸಂಪ್ರದಾಯ ಮುರಿದ ಆಸ್ಟ್ರೇಲಿಯ!
Photo Credit : NDTV
ಸಿಡ್ನಿ, ಜ.4: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ರವಿವಾರ ಆರಂಭವಾದ ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಕೊನೆಯ ಆ್ಯಶಸ್ ಟೆಸ್ಟ್ ಪಂದ್ಯಕ್ಕೆ ತನ್ನ ಆಡುವ 11ರ ಬಳಗದಲ್ಲಿ ಸ್ಪೆಷಲಿಸ್ಟ್ ಸ್ಪಿನ್ನರ್ ಅನ್ನು ಕಣಕ್ಕಿಳಿಸದೇ ಆಸ್ಟ್ರೇಲಿಯ ಅನಪೇಕ್ಷಿತ ದಾಖಲೆಯನ್ನು ನಿರ್ಮಿಸಿದೆ.
ಒಂದು ಕಾಲದಲ್ಲಿ ಆಸ್ಟ್ರೇಲಿಯದ ಸ್ಪಿನ್ ಬೌಲರ್‌ಗಳ ಸ್ವರ್ಗವೆಂದೇ ಪರಿಗಣಿಸಲ್ಪಟ್ಟಿದ್ದ ಸಿಡ್ನಿ ಮೈದಾನದಲ್ಲಿ 1888ರ ನಂತರ ಮೊದಲ ಬಾರಿಗೆ ಪ್ರಮುಖ ಸ್ಪಿನ್ ಬೌಲರ್ ಇಲ್ಲದೇ ಆಸ್ಟ್ರೇಲಿಯ ತಂಡ ಆಡುತ್ತಿದೆ. ನಾಯಕ ಸ್ಟೀವ್ ಸ್ಮಿತ್ ಸಿಡ್ನಿಯಲ್ಲಿ 138 ವರ್ಷಗಳಲ್ಲೇ ಮೊದಲ ಬಾರಿ ಈ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ.
ಆಲ್‌ರೌಂಡರ್ ಬ್ಯೂ ವೆಬ್‌ಸ್ಟರ್ ಅವರನ್ನು ತಂಡಕ್ಕೆ ಸೇರಿಸಲಾಗಿದ್ದು, ಆಫ್ ಸ್ಪಿನ್ನರ್ ಟಾಡ್ ಮರ್ಫಿ ಅವರನ್ನು ಕೈಬಿಡಲಾಗಿದೆ.
ಈ ನಿರ್ಧಾರವು ಆಸ್ಟ್ರೇಲಿಯ ಕ್ರಿಕೆಟ್‌ನಲ್ಲಿ ಬೆಳೆಯುತ್ತಿರುವ ಹೊಸ ಪ್ರವೃತ್ತಿಯ ಪ್ರತಿಬಿಂಬವಾಗಿದೆ. ಆತಿಥೇಯರು ಬ್ರಿಸ್ಬೇನ್‌ನಲ್ಲಿ ಹಗಲು–ರಾತ್ರಿ ನಡೆದಿದ್ದ ಎರಡನೇ ಟೆಸ್ಟ್ ಪಂದ್ಯದಲ್ಲಿ ಹಿರಿಯ ಸ್ಪಿನ್ನರ್ ನಾಥನ್ ಲಿಯೊನ್ ಅವರನ್ನು ಕೈಬಿಟ್ಟಿದ್ದರು. ಗಾಯಗೊಂಡಿದ್ದ ಲಿಯೊನ್ ಬದಲಿಗೆ ಮರ್ಫಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದರೂ, ಮೆಲ್ಬರ್ನ್ ಹಾಗೂ ಸಿಡ್ನಿ ಟೆಸ್ಟ್ ಪಂದ್ಯಗಳ ಆಡುವ ಬಳಗದಿಂದ ಅವರನ್ನು ಹೊರಗಿಡಲಾಗಿದೆ.
ಆ್ಯಶಸ್ ಸರಣಿಯ ಮೊದಲ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಸ್ಪಿನ್ನರ್‌ಗಳು ಕೇವಲ 9 ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ.